ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಸಮೀಪದ ಮಲ್ಲದೇವರಕಟ್ಟೆ ಗೋಮಾಳದ 4 ಎಕರೆ ಕೆರೆಯಂಗಳವನ್ನು ಸೋಮವಾರ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವೀಕ್ಷಣೆ ಮಾಡಿ ಗೋಮಾಳ ಉಳಿಸುವ ಹೋರಾಟಕ್ಕೆ ಬೆಂಬಲ ಘೋಷಿಸಿದರು. ಎಸ್. ಆರ್. ಮಂಜುನಾಥ್, ಕರಿಬಸಪ್ಪ, ಎಸ್.ಕೆ. ಕರಿಯಪ್ಪ, ಶಾಂತರಾಜ್, ಮಂಜಪ್ಪ, ಶಾಂತಮ್ಮ ಇತರರಿದ್ದರು.Renukacharya 
ದಾವಣಗೆರೆ

ಗೋಮಾಳ ರಕ್ಷಣೆ ಹೋರಾಟಕ್ಕೆ ರೇಣುಕಾಚಾರ್ಯ ಸಾಥ್

ಪ್ರಮುಖ ಮುಖ್ಯಾಂಶಗಳು

  • ಮಲ್ಲದೇವರಕಟ್ಟೆಯಲ್ಲಿ ನಿವೇಶನ ಹಂಚಿಕೆಗೆ ವಿರೋಧ
  • ತಾಲೂಕು ಕಚೇರಿ ಎದುರು ಪ್ರತಿಭಟನೆ ಎಚ್ಚರಿಕೆ
ಹೊನ್ನಾಳಿ: ತಾಲೂಕಿನ ಸುಂಕದಕಟ್ಟೆ ವ್ಯಾಪ್ತಿಯ ಮಲ್ಲ ದೇವರಕಟ್ಟೆ ಗೋಮಾಳದಲ್ಲಿ ನಿವೇಶನ ಹಂಚಿಕೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮಲ್ಲದೇವರಕಟ್ಟೆ ಗೋಮಾಳಕ್ಕೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಕೆರೆ ಹಾಗೂ ಪರಿಸರ ವೀಕ್ಷಿಸಿ ಮಾತನಾಡಿ, ಈ ಭಾಗದ ನೈಸರ್ಗಿಕ ಸಂಪತ್ತು ಉಳಿಸಲು ಗ್ರಾಮಸ್ಥರ ಹೋರಾಟಕ್ಕೆ ಬೆಂಬಲ ಘೋಷಿಸಿದರು.
2020-21ರಲ್ಲಿ ಪುರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ 29 ಎಕರೆ ಗೋಮಾಳವನ್ನು ನಾನೇ ಮಂಜೂರು ಮಾಡಿಸಿ, ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ ನೀಡಿದ್ದೆ. ಆದರೆ, ಇಲ್ಲಿನ ದಟ್ಟವಾದ ಗಿಡ,ಮರಗಳು, ಗಂಧದ ಮರಗಳು ಹಾಗೂ ವನ್ಯಜೀವಿಗಳ ವಾಸ್ತವ ಪರಿಸ್ಥಿತಿಯನ್ನು ಗ್ರಾಮಸ್ಥರು ಮನವರಿಕೆ ಮಾಡಿಕೊಟ್ಟ ನಂತರ, ಪರಿಸರ ರಕ್ಷಣೆ ದೃಷ್ಟಿಯಿಂದ ಈ ಮಂಜೂರಾತಿ ಆದೇಶ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನಾನೇ ಪತ್ರ ಬರೆದಿದ್ದೇನೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ ಎಂದು ಸ್ಪಷ್ಟಪಡಿಸಿದರು.
ಈ ಗೋಮಾಳದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ನೈಸರ್ಗಿಕ ಗಂಧದ ಮರಗಳಿವೆ. ಕರಡಿ, ಜಿಂಕೆ, ನವಿಲುಗಳಂತಹ ವನ್ಯಜೀವಿಗಳ ಆವಾಸ ಸ್ಥಾನವಿದು. ಗ್ರಾಮದ ಜಾನುವಾರುಗಳಿಗೆ ಇದು ಪ್ರಮುಖ ಮೇಯುವ ಪ್ರದೇಶವಾಗಿದೆ. ಕೆರೆಯಂಗಳವನ್ನು ಒಳಗೊಂಡ ಈ ಸಸ್ಯಕಾಶಿಯನ್ನು ನಿವೇಶನಕ್ಕಾಗಿ ನಾಶ ಮಾಡಲು ಬಿಡುವುದಿಲ್ಲ ಎಂದರು. ಪ್ರಸ್ತುತ ನಡೆಯುತ್ತಿರುವ ಮರಗಳ ಸಮೀಕ್ಷೆ ಪ್ರಕ್ರಿಯೆ ಕೂಡಲೇ ನಿಲ್ಲಿಸಬೇಕು. ಅಧಿಕಾರಿಗಳಿಗೆ ಒಂದು ವಾರ ಕಾಲಾವಕಾಶ ನೀಡುತ್ತೇನೆ. ಒಂದು ವೇಳೆ ಮರ ಕಡಿಯುವ ಪ್ರಕ್ರಿಯೆಯಿಂದ ಹಿಂದೆ ಸರಿಯದಿದ್ದರೆ, ಮುಂದಿನ ಸೋಮವಾರ ಗ್ರಾಮಸ್ಥರು ಹಾಗೂ ಸಾವಿರಾರು ಜಾನುವಾರುಗಳೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ಅಲ್ಲಿಯೇ ಟೆಂಟ್ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮದ ಮುಖಂಡ ಎಸ್.ಕೆ. ನರಸಿಂಹಮೂರ್ತಿ ಮಾತನಾಡಿ, ಈ ಹಿಂದೆ ತಾಲೂಕು ಆಡಳಿತ ನಮ್ಮ ಮನವಿಗೆ ಸ್ಪಂದಿಸಿತ್ತು. ಆದರೆ ಈಗ ಏಕಾಏಕಿ ಮರಗಳ ಸಮೀಕ್ಷೆ ಮಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ಕಾನೂನು ಹೋರಾಟಕ್ಕೂ ನಾವು ಸಿದ್ಧ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ. ಮಾಜಿ ಅಧ್ಯಕ್ಷ ಎಸ್.ಆರ್. ಮಂಜುನಾಥ್, ರೈತ ಮುಖಂಡ ಕರಿಬಸಪ್ಪ, ಎಸ್.ಕೆ. ಕರಿಯಪ್ಪ, ಶಾಂತರಾಜ್, ಮಂಜಪ್ಪ, ಶಾಂತಮ್ಮ ಇತರರಿದ್ದರು.