ಜಗಳೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ದಾವಣಗೆರೆ ಮಾರ್ಗದ ಮುಖ್ಯರಸ್ತೆಗಳ ಫುಟ್‌ಪಾಥ್ ಮೇಲಿದ್ದ ಅಕ್ರಮ ಗೂಡಂಗಡಿಗಳನ್ನು ಬುಧವಾರ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ನೇತೃತ್ವದಲ್ಲಿ ಪೌರಕಾರ್ಮಿಕರು ತೆರವುಗೊಳಿಸಿದರು.Clearance
ಜಗಳೂರು: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ದಾವಣಗೆರೆ ಮಾರ್ಗದ ಮುಖ್ಯರಸ್ತೆಗಳ ಫುಟ್‌ಪಾಥ್ ಮೇಲಿದ್ದ ಅಕ್ರಮ ಗೂಡಂಗಡಿಗಳನ್ನು ಬುಧವಾರ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ನೇತೃತ್ವದಲ್ಲಿ ಪೌರಕಾರ್ಮಿಕರು ತೆರವುಗೊಳಿಸಿದರು.
ಬೆಸ್ಕಾಂ ಕಚೇರಿ ಪಕ್ಕದ ಕಾಂಪೌಂಡ್‌ಗೆ ಹೊಂದಿಕೊಂಡು ತರಳಬಾಳು ಕೇಂದ್ರದವರೆಗೂ 30ಕ್ಕೂ ಹೆಚ್ಚು ಗೂಡಂಗಡಿಗಳನ್ನು ನಿರ್ಮಿಸಿಕೊಂಡಿದ್ದರು. ಟೀ ಸ್ಟಾಲ್, ಟೈಲರ್ ಶಾಪ್, ಚಿಲ್ಲರೆ ಅಂಗಡಿ, ಪಂಕ್ಚರ್ ಶಾಪ್, ಹೋಟೆಲ್ ಸೇರಿ ವಿವಿಧ ಅಂಗಡಿಗಳನ್ನು ಎತ್ತಂಗಡಿ ಮಾಡಿದಾಗ ಮಾಲೀಕರು, ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರ ಜತೆ ವಾಗ್ವಾದ ನಡೆಯಿತು. ಆದರೂ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಯಾವುದೇ ಚಕಾರ ಎತ್ತದೆ ದಿಢೀರ್ ಬಂದು ತೆರವು ಮಾಡಿದರೆ ನಾವೆಲ್ಲ ಎಲ್ಲಿಗೆ ಹೋಗಬೇಕು ಎಂದು ಅಧಿಕಾರಿಗಳ ವಿರುದ್ಧ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು. ಗೂಡಂಗಡಿಗಳನ್ನು ತೆರವು ಮಾಡಿದ್ದರಿಂದ ಅನ್ಯಮಾರ್ಗವಿಲ್ಲದೆ ಅಂಗಡಿ ಮಾಲೀಕರು ತಮ್ಮ ಅಂಗಡಿಯಲ್ಲಿನ ಸಾಮಗ್ರಿಗಳನ್ನು ಕೆಲ ಕಾಲ ಬೀದಿಯಲ್ಲಿಟ್ಟುಕೊಂಡು ಮುಂದೇನು ಗತಿ ಎಂಬ ಚಿಂತೆಯಲ್ಲಿ ರೋದಿಸಿದರು.
ಡಬ್ಬದ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರೊಬ್ಬರು ನೀಡಿದ ದೂರಿನನ್ವಯ ಎಲ್ಲ ಮಾಲೀಕರಿಗೂ ನೋಟಿಸ್ ಜಾರಿ ಮಾಡಲಾಗಿತ್ತು. ಕಳೆದ ಐದಾರು ತಿಂಗಳಿಂದಲೂ ಕಾಲಾವಕಾಶ ನೀಡಲಾಗಿತ್ತು. ಆದರೆ ಯಾರೊಬ್ಬರೂ ತೆರವುಗೊಳಿಸದೇ ನಿರ್ಲಕ್ಷ್ಯ ತೋರಿದ್ದರಿಂದ ಮೇಲಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ತಿಳಿಸಿದ್ದಾರೆ.