ದಾವಣಗೆರೆಯಲ್ಲಿ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ 7 ಕಿ.ಮೀ. ಉದ್ದದ ಕನ್ನಡ ಬಾವುಟದ ಮೆರವಣಿಗೆ ನಡೆಸಲಾಯಿತು. 
ದಾವಣಗೆರೆ

ಬೆಣ್ಣೆನಗರಿ ಬೀದಿಗಳಲ್ಲಿ ಕೆಂಪು ಹಳದಿ ರಂಗು

ಪ್ರಮುಖ ಮುಖ್ಯಾಂಶಗಳು

  • 7 ಕಿ.ಮೀ. ಉದ್ದದ ಕನ್ನಡ ಬಾವುಟ
  • ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿ
  • ಚಾಲನೆ ನೀಡಿದ ಜಿಲ್ಲಾಧಿಕಾರಿ
ದಾವಣಗೆರೆ : ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಕೆಂಪು ಹಾಗೂ ಹಳದಿ ಬಣ್ಣಗಳ ರಂಗು ತುಂಬಿಕೊಂಡಿತ್ತು. ಕಣ್ಣು ಹಾಯಿಸಿದಷ್ಟೂ ದೂರ ಕನ್ನಡದ ಬಾವುಟ ರಾರಾಜಿಸಿತು. ಎಲ್ಲೆಲ್ಲೂ ಕನ್ನಡದ ಕಂಪು ಆವರಿಸಿತ್ತು. ಭುವನೇಶ್ವರಿ ದೇವಿಗೆ ಜೈಕಾರ ಮೊಳಗಿತು.
ಅದೊಂದು ದಾಖಲೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 7 ಕಿ.ಮೀ. ಉದ್ದದ ಕನ್ನಡ ಬಾವುಟ. ಅದರ ಮೆರವಣಿಗೆಯ ಸಂಭ್ರಮವನ್ನು ನಗರದ ಜನರು ಕಣ್ತುಂಬಿಕೊಂಡರು. ಸಾವಿರಾರು ಶಾಲಾ ಮಕ್ಕಳು, ಕನ್ನಡಾಭಿಮಾನಿಗಳು ಸೇರಿ ಕನ್ನಡಾಂಬೆಯ ಧ್ವಜವನ್ನು ಹಿಡಿದು ನಿಂತರು. ಬೆಣ್ಣೆನಗರಿ ಕನ್ನಡಮಯವಾಗಿತ್ತು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡಪರ ಸಂಘಟನೆಗಳ ವತಿಯಿಂದ ದಾಖಲೆಯ 7 ಕಿ.ಮೀ. ಉದ್ದದ ಕನ್ನಡ ಬಾವುಟದ ಮೆರವಣಿಗೆಯ ದೃಶ್ಯಗಳಿವು. ಈ ವಿರಾಟ್ ಬಾವುಟವನ್ನು ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಸಂಸ್ಥೆಯವರು ನಿರ್ಮಿಸಿದ್ದಾರೆ.
ಜಯದೇವ ವೃತ್ತದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮೆರವಣಿಗೆಗೆ ಚಾಲನೆ ನೀಡಿದರು. ನಾಡಗೀತೆ ಮೊಳಗಿತು. ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.
ಐಟಿಐ ಕಾಲೇಜು ವೃತ್ತ, ವಿದ್ಯಾನಗರ ಗಾಂಧಿ ವೃತ್ತ, ಗುಂಡಿ ವೃತ್ತ, ಶಾರದಾಂಬಾ ದೇವಸ್ಥಾನ, ರಿಂಗ್ ರಸ್ತೆ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಪಿ.ಬಿ. ರಸ್ತೆ, ರೇಣುಕ ಮಂದಿರ, ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತದ ಮೂಲಕ ಮತ್ತೆ ಜಯದೇವ ವೃತ್ತಕ್ಕೆ ಬಂದು ಮುಕ್ತಾಯವಾಯಿತು. ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಜನರು ಕನ್ನಡ ಬಾವುಟದ ವೈಭವವನ್ನು ಕಣ್ತುಂಬಿಕೊಂಡರು.
ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಸಂಸ್ಥೆಯ ಮಾಲೀಕ ಬಿ.ಎಸ್. ಮೃನಾಲ್, ಕನ್ನಡಪರ ಸಂಘಟನೆಗಳ ಮುಖಂಡರಾದ ಟಿ. ಶಿವಕುಮಾರ್, ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜಾ, ಶಿವರತನ್, ಶುಭಮಂಗಳಾ, ಎಂ.ಎಸ್. ರಾಮೇಗೌಡ, ಕೆ.ಟಿ. ಗೋಪಾಲಗೌಡ, ವಾಸುದೇವ ರಾಯ್ಕರ್, ಮಾಗಾನಹಳ್ಳಿ ಮಂಜುನಾಥ್, ಎನ್.ಟಿ. ಮಂಜುನಾಥ್, ಬಿಎಸ್‌ಸಿ ಸಂಸ್ಥೆಯ ವೀರಣ್ಣ ಇದ್ದರು.

ಕಲಾ ತಂಡಗಳ ಮೆರುಗು

ವೀರಗಾಸೆ, ಡೊಳ್ಳು ಕುಣಿತ, ನಂದಿಕೋಲು ಮುಂತಾದ ಕಲಾ ತಂಡಗಳು ಮೆರವಣಿಗೆ ಕಳೆಗಟ್ಟುವಂತೆ ಮಾಡಿದವು. ದೊಡ್ಡ ಗೊಂಬೆಗಳು ಆಕರ್ಷಿಸಿದವು.
ಸ್ತಬ್ಧಚಿತ್ರಗಳು ನೋಡುಗರ ಕಣ್ಮನ ಸೆಳೆದವು. ಟ್ರಾೃಕ್ಟರ್‌ನಲ್ಲಿ ಭುವನೇಶ್ವರಿ ದೇವಿಯ ಮೂರ್ತಿ, ಕೊಂಡುಕುರಿಗಳ ಪ್ರತಿಕೃತಿ, ರೈತರ ಬದುಕನ್ನು ಬಿಂಬಿಸುವ ಸ್ತಬ್ಧಚಿತ್ರ, ಬಸವಣ್ಣ, ಇಮ್ಮಡಿ ಪುಲಕೇಶಿಯ ಮೂರ್ತಿಗಳು, ಅನುಭವ ಮಂಟಪದ ಮಾದರಿಗಳು ಮೆರವಣಿಗೆಯಲ್ಲಿ ಸಾಗಿದವು.
ಹೊಯ್ಸಳರು, ಚಾಲುಕ್ಯರು, ಗಂಗ, ಕದಂಬ, ಶಾತವಾಹನ, ಮೈಸೂರು ಅರಸರು ಮುಂತಾದ ರಾಜ ಮನೆತನಗಳು, ಕಿತ್ತೂರು ಚನ್ನಮ್ಮ, ನೂತನ ಜಿಲ್ಲೆಯ ಶಿಲ್ಪಿ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್, ಸಿದ್ಧಗಂಗಾ ಶ್ರೀಗಳು, ಪುನೀತ್ ರಾಜಕುಮಾರ್ ಅವರ ಭಾವಚಿತ್ರಗಳು ಗಮನ ಸೆಳೆದವು.