ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಎಚ್.ಆಂಜನೇಯ ಅವರೊಂದಿಗೆ ಶಾಸಕ ಕೆ.ಎಸ್.ಬಸವಂತಪ್ಪ, ಎಸ್.ಮಲ್ಲಿಕಾರ್ಜುನ ಇದ್ದರು. --
- ಮಾಜಿ ಸಚಿವ ಎಚ್.ಆಂಜನೇಯ ಆಗ್ರಹ
- ನಾಡಿದ್ದು ಒಳಗಾಗಿ ಮುಖ್ಯಮಂತ್ರಿ ಭೇಟಿ
- ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆರಳಲು ಸಲಹೆ
ದಾವಣಗೆರೆ: ರಾಜ್ಯ ಸರ್ಕಾರ ಒಳಮೀಸಲು ಕಲ್ಪಿಸಿದ ಬಳಿಕ. ರಾಜ್ಯದಲ್ಲಿನ 56432 ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಮಾದಿಗ ಸಮಾಜದ ಮುಖಂಡ, ಮಾಜಿ ಸಚಿವ ಎಚ್.ಆಂಜನೇಯ ಆಗ್ರಹಿಸಿದರು.
ಹುದ್ದೆಗಳ ಭರ್ತಿಗೆ ಧಾರವಾಡ ಇತರೆಡೆಯ ವಿದ್ಯಾರ್ಥಿ ಯುವಜನರು, ನಿರುದ್ಯೋಗಿ ಪದವೀಧರರು 3 ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಲಕ್ಷಾಂತರ ರೂ. ತೆತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುವ ಯುವಜನರಿಗೆ ಉದ್ಯೋಗ ಸಿಗಬೇಕೆಂಬ ಸದುದ್ದೇಶದಿಂದ ಸರ್ಕಾರ ನೇಮಕಾತಿಗೆ ಮುಂದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಒಳಮೀಸಲಾತಿ ಕಾರಣಕ್ಕೆ ಹುದ್ದೆಗಳ ನೇಮಕಾತಿ ಆಗಿರಲಿಲ್ಲ. ಇದೀಗ ರಾಜ್ಯಪಾಲರೂ ಅಂಕಿತ ಹಾಕುವುದರೊಂದಿಗೆ ನೇಮಕಾತಿ ಪ್ರಕ್ರಿಯೆಗೆ ಅಡೆತಡೆ ಇಲ್ಲವಾಗಿದೆ. ಆದರೆ, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಿದ ನಂತರವೇ ಸರ್ಕಾರ ನೇಮಕಾತಿ ಆರಂಭಿಸಬೇಕು ಎಂದರು.
ರಾಜ್ಯಪಾಲರ ಅಂಕಿತದೊಂದಿಗೆ ಒಳಮೀಸಲಾತಿಗೆ ಕಾನೂನು ಬಲ ಬಂದಿದೆ. ಒಳಮೀಸಲಾತಿ ಹುದ್ದೆ ತುಂಬುವಾಗ 6:6:5 ಅನುಪಾತ ಅನುಸರಿಸಬೇಕು. ಹಿಂದಿನ ಬಿಜೆಪಿ ಸರ್ಕಾರವು ಎಸ್‌ಸಿಗೆ ಶೇ.17, ಎಸ್‌ಟಿಗೆ ಶೇ.7 ಮೀಸಲಾತಿ ನೀಡಿತ್ತು. ಪರಿಶಿಷ್ಟರಿಗಿದ್ದ ಶೇ.24 ಮೀಸಲಾತಿ ಶೇ.18ಕ್ಕೆ ಇಳಿಸಬಾರದು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ 56432 ಹುದ್ದೆ ನೇಮಕವಾದಲ್ಲಿ ಎಸ್ಟಿಗೆ ಶೇ.7ರಂತೆ ಮೀಸಲಾತಿ ಸಿಕ್ಕರೆ 3750 ಹುದ್ದೆ ಸಿಗಲಿವೆ. ಶೇ.3 ಮೀಸಲಾತಿಯಾದರೆ ಕೇವಲ 1650 ಹುದ್ದೆ ಸಿಗುತ್ತವೆ. ಹಾಗಾಗಿ ಮೀಸಲಾತಿ ಕಡಿಮೆಯಾದರೆ ಯಾವುದೇ ಸಮಾಜಕ್ಕೆ ಅನ್ಯಾಯವಾಗಲಿದೆ. ಪರಿಶಿಷ್ಟ ಜಾತಿ-ಪಂಗಡಗಳು ಒಂದಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ. ಶೇ.24ರ ಮೀಸಲಾತಿ ಬಿಟ್ಟು, ಉಳಿದಂತೆ ಸಾಮಾನ್ಯ ವರ್ಗದವರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಅಭ್ಯಂತರವಿಲ್ಲ ಎಂದರು.
ಮೀಸಲಾತಿ, ಒಳಮೀಸಲಾತಿ ವಿಚಾರದಿಂದ ಸಾಮಾನ್ಯ ವರ್ಗದ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ ಆಗಬಾರದು. 3 ವರ್ಷ ವಯೋಮಿತಿ ಸಡಿಲಿಕೆ ನೀಡಿದರೂ ಅಂಥವರಿಗೆ ತೊಂದರೆಯಾಗದಂತೆ ನೇಮಕಾತಿ ನಡೆಸಬೇಕು. ಈ ಸಂಬಂಧ ಮಾ.2 ಅಥವಾ 3ಕ್ಕೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಮಾದಿಗ ಸಮುದಾಯದ ಜನಪ್ರತಿನಿಧಿಗಳೊಂದಿಗೆ ಸಮಾಜದ ಮುಖಂಡರು ಭೇಟಿ ಮಾಡಿ ಮನವರಿಕೆ ಮಾಡಲಿದ್ದೇವೆ ಎಂದು ಹೇಳಿದರು.
ಒಳಮೀಸಲು ರಾಜ್ಯ ಸರ್ಕಾರದ ಕೆಲಸ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಚುನಾವಣೆ ಪೂರ್ವದ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಒಳ ಮೀಸಲಾತಿ ಭರವಸೆ ನೀಡಿತ್ತು. ಅದನ್ನು ಸಿಎಂ ಸಿದ್ದರಾಮಯ್ಯ ಈಡೇರಿಸಬೇಕು ಎಂದ ಅವರು, ಮಾದಿಗ ಸಮುದಾಯ ಇಷ್ಟು ವರ್ಷಗಳ ಕಾಲ ಅನ್ಯಾಯ ಸಹಿಸಿಕೊಂಡು ಬಂದಿದೆ. ಈ ವಿಚಾರದಲ್ಲಿ ನ್ಯಾಯ ಸಿಗಲಿದ್ದು, ಯಾರೂ ವಿಚಲಿತರಾಗಬಾರದು ಎಂದು ಮನವಿ ಮಾಡಿದರು.
ಮಾದಿಗರು ಎ ಗುಂಪಿನಲ್ಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ವದಂತಿ ಹರಡುತ್ತಿದ್ದು ಇದಕ್ಕೆ ಸಮಾಜದವರು ಕಿವಿಗೊಡಬಾರದು. ಹೀಗೆ ವದಂತಿ ಹರಡುವವರು ಅಂಬೇಡ್ಕರ್ ವಿರೋಧಿಗಳು. ಮಾದಿಗರ ಜನಸಂಖ್ಯೆ ಆಧರಿಸಿ ಶಿಕ್ಷಣ, ಉದ್ಯೋಗದಲ್ಲಿ ಒಳ ಮೀಸಲಾತಿ ಸಿಗಲಿದೆ ಎಂದರು.
ಅನಾಥವಾದ ಅಲೆಮಾರಿ ಸಮುದಾಯವನ್ನು ಬಿಟ್ಟು ಒಳಮೀಸಲಾತಿ ಕಲ್ಪಿಸುವುದು ಸರಿಯಲ್ಲ. ಅಲೆಮಾರಿ ಸಮುದಾಯ ನ್ಯಾಯಾಲಯದ ಮೆಟ್ಟಿಲೇರಿದ್ದು, ತೀರ್ಪು ಪರ ಅಥವಾ ವಿರುದ್ಧವೇ ಬರಲಿ, ಮೇಲ್ಮನವಿ ಸಲ್ಲಿಸಿ, ತಡೆಯಾಜ್ಞೆ ತರಲು ಸರ್ಕಾರ ಸಿದ್ಧವಾಗಬೇಕು. ಶೇ.56ರ ಮೀಸಲಾತಿಗೆ ಬದ್ಧವೆಂದ ಸಿಎಂ ಸಿದ್ದರಾಮಯ್ಯ ಈಗ ಒಳ ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದೂ ಮನವಿ ಮಾಡಿದರು.
ದಲಿತ ಮುಖ್ಯಮಂತ್ರಿ ಮಾಡುವ ಅಧಿಕಾರ ದಲಿತರ ಬಳಿಯೇ ಇದೆ. ದಲಿತರು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷ ಎಲ್ಲ ವರ್ಗವನ್ನೂ ಸಮಾನವಾಗಿ ಕಂಡಿದೆ. ಮುಸ್ಲಿಮರನ್ನು ಕಡೆಗಣಿಸಿಲ್ಲ. ಅಬ್ದುಲ್ ಜಬ್ಬಾರ್ ಅವರಿಗೆ ಈ ಹಿಂದೆ ಎಂಎಲ್ಸಿ ಸ್ಥಾನ ನೀಡಲಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುರಿತಂತೆ ಪಕ್ಷದ ಹೈಕಮಾಂಡ್, ಜಿಲ್ಲಾ ಸಚಿವರೇ ನಿರ್ಧರಿಸಲಿದ್ದಾರೆ ಎಂದೂ ಆಂಜನೇಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ, ಮುಖಂಡರಾದ ಎಸ್. ಮಲ್ಲಿಕಾರ್ಜುನ, ಎಸ್.ಎನ್.ಬಾಲಾಜಿ ಇತರರಿದ್ದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿಗೆ ಶೇ.15ರಷ್ಟಿದ್ದ ಮೀಸಲಾತಿಯನ್ನು ಶೇ.17ಕ್ಕೆ, ಎಸ್‌ಟಿಗೆ ಇದ್ದ ಶೇ.3ನ್ನು ಶೇ.7ಕ್ಕೆ ಹೆಚ್ಚಿಸಿತ್ತು. ಇದು ಸಂವಿಧಾನಾತ್ಮಕವಾಗಿ ಆಗಬೇಕೆಂದರೆ ಷೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡಬೇಕು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ದು ಒತ್ತಡ ತರಬೇಕು.