ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿರುವ ಕಾಂಗ್ರೆಸ್ ಸರ್ಕಾರದ ನಡೆಗೆ ವಿರೋಧಿಸಿ ಹಿಂದೂ ರಾಷ್ಟ್ರ ಸೇನೆ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿತು. ಯುವ ಘಟಕದ ಜಿಲ್ಲಾಧ್ಯಕ್ಷ ಎಸ್.ಭರತ್, ಎಸ್.ಟಿ.ಸುರೇಶ್, ವೇದಾಂತ್, ಶಿವರಾಜ್, ಮನೋಜ್ ಇತರರಿದ್ದರು.  
ದಾವಣಗೆರೆ

ಹಿಜಾಬ್ ಅನುಮತಿ ಮರುಪರಿಶೀಲಿಸಿ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಕೋರ್ಟ್ ವಿಚಾರಣೆ ಹಂತದಲ್ಲಿ ಹೊಸ ನಿರ್ಧಾರ ಬೇಡ
  • ಶಿಕ್ಷಣ ಸಂಸ್ಥೆಗಳಲ್ಲಿ ಕಾಪಾಡಿ ಏಕರೂಪ ವ್ಯವಸ್ಥೆ
  • ಹಿಂದೂ ರಾಷ್ಟ್ರ ಸೇನೆಯಿಂದ ಸರ್ಕಾರಕ್ಕೆ ಮನವಿ
ದಾವಣಗೆರೆ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿರುವ ಕಾಂಗ್ರೆಸ್ ಸರ್ಕಾರದ ನಡೆಗೆ ವಿರೋಧಿಸಿ ಹಿಂದೂ ರಾಷ್ಟ್ರ ಸೇನೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಡಿಸಿ ಶೀಲವಂತ ಶಿವಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ಹಿಜಾಬ್ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯವು ಈಗಾಗಲೆ ತೀರ್ಪು ನೀಡಿದೆ. ನಂತರ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯಾವುದೇ ಹೊಸ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ಸಮಾಜದ ಎಲ್ಲಾ ವರ್ಗಗಳ ಭಾವನೆಗಳಿಗೆ ಗೌರವ ನೀಡುವ ಜತೆಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನತೆ, ಶಿಸ್ತು, ಏಕತೆ ಹಾಗೂ ವಿದ್ಯಾರ್ಥಿಗಳಲ್ಲಿ ಏಕರೂಪ ಶೈಕ್ಷಣಿಕ ವಾತಾವರಣ ಕಾಪಾಡಬೇಕಿದೆ. ಹೀಗಾಗಿ ನ್ಯಾಯಾಲಯ ಅಂತಿಮ ತೀರ್ಪು ನೀಡುವವರೆಗೂ ಯಾವುದೇ ಹೊಸ ಕ್ರಮ ಜಾರಿಗೊಳಿಸಬಾರದು ಎಂದು ಮನವಿ ಮಾಡಿದರು.
ಕೂಡಲೆ ಸರ್ಕಾರ ನೀಡಿರುವ ನಿರ್ದೇಶನವನ್ನು ಮರು ಪರಿಶೀಲಿಸಬೇಕು. ನ್ಯಾಯಾಲಯದ ಆದೇಶ ಹೊರಬರುವವರೆಗೂ ಕಾಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸೇನೆ ಯುವ ಘಟಕದ ಜಿಲ್ಲಾಧ್ಯಕ್ಷ ಎಸ್.ಭರತ್, ಕಾರ್ಯಕರ್ತರಾದ ಎಸ್.ಟಿ.ಸುರೇಶ್, ವೇದಾಂತ್, ಶಿವರಾಜ್, ಮನೋಜ್, ಕೊಟ್ರೇಶ್, ರಾಹುಲ್, ಯಶವಂತ್, ಬಸವರಾಜ್ ಇದ್ದರು.