ದಾವಣಗೆರೆಯ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಅಂಗವಾಗಿ ಸೋಮವಾರ, ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರಿಗೆ ಶ್ರೀ ಗುರುರಾಜ ಸೇವಾ ಸಂಘದಿಂದ ಗೌರವಿಸಲಾಯಿತು. ಕೊ.ಸ. ಪ್ರಸನ್ನ ಕುಮಾರ್, ಗುರುರಾಜಾಚಾರ್ಯ ಕಂಪ್ಲಿ, ಡಾ. ಆನಂದತೀರ್ಥಾಚಾರ್ ಸಿ.ಕೆ, ಎನ್. ಸುಬ್ರಹ್ಮಣ್ಯರಾವ್ ನರಗನಹಳ್ಳಿ, ವಾಗೀಶಾಚಾರ್ ಎಂ, ಪ್ರಾಣೇಶಾಚಾರ್ ಕಡೂರು, ವಾಚಸ್ಪತಿ ಆಚಾರ್ಯ, ಎನ್.ಡಿ. ಶ್ರೀನಿವಾಸರಾವ್ ನರಗನಹಳ್ಳಿ ಇದ್ದರು.
- ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರು
- ರಾಯರ ಮಠದ ಸುವರ್ಣ ಮಹೋತ್ಸವ
ದಾವಣಗೆರೆ : ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಭಗವಂತ ಮತ್ತು ಭಕ್ತರ ನಡುವಿನ ಸೇತುವೆಯಾಗಿ ಅನುಗ್ರಹಿಸುತ್ತಿದ್ದಾರೆ ಎಂದು ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರು ನುಡಿದರು.
ನಗರದ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಅಂಗವಾಗಿ ಸೋಮವಾರ ಸಂಸ್ಥಾನ ಪೂಜೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.
ನಾವು ನಿತ್ಯ ಮಾಡುವ ಸತ್ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಬೇಕು. ಹಾಗೆ ಮಾಡಿದವರನ್ನು ಉದ್ಧಾರ ಮಾಡುವಂತೆ ರಾಯರು ವಾಯುದೇವರ ಮೂಲಕ ಶಿಫಾರಸು ಮಾಡಿಸಿ ಭಗವಂತನ ಕೃಪೆಯಾಗುವಂತೆ ಮಾಡುತ್ತಾರೆ. ಭಕ್ತರ ಬಗ್ಗೆ ಅವರಿಗೆ ಅಷ್ಟೊಂದು ಕಾಳಜಿ ಇದೆ ಎಂದು ಹೇಳಿದರು.
ರಾಘವೇಂದ್ರ ಸ್ವಾಮಿಗಳು ಭಗವದ್ಭಕ್ತರ ಉದ್ಧಾರದ ಸಂಕಲ್ಪದಿಂದ ಕಲಿಯುಗದಲ್ಲಿ ಅವತರಿಸಿದರು. ಪ್ರಾತಃ ಸಂಕಲ್ಪ ಗದ್ಯ ಸೇರಿ ರಾಯರು ರಚಿಸಿದ ಕೃತಿಗಳನ್ನು ಅಧ್ಯಯನ ಮಾಡಬೇಕು, ಅವರು ಬರೆದ ದೇವರ ನಾಮಗಳನ್ನು ಹಾಡಬೇಕು ಎಂದು ತಿಳಿಸಿದರು.
ಗುರು ರಾಯರು ಮಂತ್ರಾಲದಲ್ಲಿ ಮಾತ್ರವಲ್ಲ, ನೆನೆದವರ ಮನದಲ್ಲಿ ನೆಲೆಸಿದ್ದಾರೆ. ನಮ್ಮ ಪಾಪ ಕರ್ಮಗಳನ್ನು ದೂರ ಮಾಡಿ ಪುಣ್ಯ ಫಲ ದೊರೆಯುವಂತೆ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪ್ರಹ್ಲಾದರಾಜರಿಗಾಗಿ ನರಸಿಂಹ ದೇವರು ಅವತರಿಸಿದರೆಂದರೆ ಅವರ ಯೋಗ್ಯತೆ, ಶಕ್ತಿ ಎಷ್ಟೆಂಬುದು ಅರ್ಥವಾಗುತ್ತದೆ. ನಿತ್ಯವೂ ವೃಂದಾವನ ದರ್ಶನ, ಪ್ರದಕ್ಷಿಣೆ ಹಾಕುವುದು, ನಮಸ್ಕಾರ, ತೀರ್ಥ ಸ್ವೀಕಾರದಿಂದ ದೇಹ ಶುದ್ಧಿಯಾಗುತ್ತದೆ. ಕರುಣಾ ಮೂರ್ತಿಗಳಾದ ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ತಿಳಿಸಿದರು.
ಲೌಕಿಕ ಜೀವನದಲ್ಲಿ ಒತ್ತಡಗಳಿರುತ್ತವೆ. ಅದರ ನಡುವೆಯೂ ಭಗವಂತನ ಸ್ಮರಣೆ ಮರೆಯಬಾರದು ಎಂದು ಹೇಳಿದರು. ದಾವಣಗೆರೆ ದಿಕ್ಷಿತ್ ರಸ್ತೆಯ ರಾಯರ ಮಠಕ್ಕೆ 50 ವರ್ಷಗಳಾಗಿವೆ. ಇಲ್ಲಿನ ಪದಾಧಿಕಾರಿಗಳು ಭಕ್ತಿಯಿಂದ ರಾಯರ ಸೇವೆ ಮಾಡುತ್ತ ಬಂದಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಶ್ರೀ ಗುರುರಾಜ ಸೇವಾ ಸಂಘದಿಂದ ಶ್ರೀಪಾದಂಗಳವರನ್ನು ಗೌರವಿಸಿ ಪುಷ್ಪವೃಷ್ಟಿ ಮಾಡಲಾಯಿತು. ಸಂಘದ ಅಧ್ಯಕ್ಷ ಕೊ.ಸ. ಪ್ರಸನ್ನ ಕುಮಾರ್, ಸದಸ್ಯರಾದ ಗುರುರಾಜಾಚಾರ್ಯ ಕಂಪ್ಲಿ, ಡಾ. ಆನಂದತೀರ್ಥಾಚಾರ್ ಸಿ.ಕೆ, ಕಾರ್ಯದರ್ಶಿ ಎನ್. ಸುಬ್ರಹ್ಮಣ್ಯರಾವ್ ನರಗನಹಳ್ಳಿ, ಖಜಾಂಚಿ ವಾಗೀಶಾಚಾರ್ ಎಂ, ಪ್ರಾಣೇಶಾಚಾರ್ ಕಡೂರು, ವಾಚಸ್ಪತಿ ಆಚಾರ್ಯ, ಎನ್.ಡಿ. ಶ್ರೀನಿವಾಸರಾವ್ ನರಗನಹಳ್ಳಿ, ವೆಂಕಟೇಶ ನವರತ್ನ, ಪಿ.ಕೆ. ಪ್ರಕಾಶ್ ಇದ್ದರು.
ಪ್ರವಚನ, ಸಂಗೀತ
ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಪಂಡಿತ ಕಲ್ಲಾಪುರ ಪವಮಾನಾಚಾರ್ಯ ಹಾಗೂ ಧಾರವಾಡದ ಪಂಡಿತ ವೆಂಕಟ ನರಸಿಂಹಾಚಾರ್ಯ ಅವರು ‘ಕೃಷ್ಣ ಚಾರಿತ್ರೃ ಮಂಜರಿ’ ಕುರಿತು, ಪಂಡಿತ ಪವಮಾನಾಚಾರ್ಯ ಪಂಚಮುಖಿ ಅವರು ‘ಶ್ರೀ ಗೋಪಾಲ ದಾಸರ ಸುಳಾದಿ (ರಾಯರ ಬಗ್ಗೆ)’ ಕುರಿತು ಪ್ರವಚನ ನೀಡಿದರು.
ಮಹತೀ ಸಂಗೀತ ಮಹಾವಿದ್ಯಾಲಯದ ವಿದ್ವಾನ್ ಎಂ. ದ್ವಾರಕೀಶ್ ಅವರು ವೀಣಾ ವಾದನವನ್ನು ನಡೆಸಿಕೊಟ್ಟರು. ಚೆನ್ನೈನ ವಿದ್ವಾನ್ ಗುರುರಾಜ್ ಮುಂಡರಗಿ (ಮೃದಂಗ), ಬೆಂಗಳೂರಿನ ವಿದ್ವಾನ್ ಚೇತನ್‌ರಾಮ್ (ಖಂಜಿರ) ಸಾಥ್ ನೀಡಿದರು.