ದಾವಣಗೆರೆ ವಿವಿ ಆವರಣದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಅಂತರ ವಿವಿ ಖೋಖೋ ಟೂರ್ನಿಯ ಉಪ ಪಂದ್ಯದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಹಾಗೂ ಕೇರಳದ ಕ್ಯಾಲಿಕೆಟ್ ವಿವಿ ತಂಡಗಳ ನಡುವಿನ ಸೆಣಸಾಟ.  
ದಾವಣಗೆರೆ

ಪ್ರೀ ಕ್ವಾರ್ಟರ್ ಹಂತಕ್ಕೆ ರಾಣಿ ಚನ್ನಮ್ಮ ಸೇರಿ 8 ವಿವಿ

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಭಾರತ ಅಂತರ ವಿವಿ ಖೋಖೋ ಟೂರ್ನಿ ಶುರು
  • ನೇರ ಕ್ವಾರ್ಟರ್‌ಗೆ ದಾವಣಗೆರೆ ಸೇರಿ 4 ವಿವಿಗಳ ಲಗ್ಗೆ
  • ಆರು ರಾಜ್ಯಗಳ 80 ವಿಶ್ವವಿದ್ಯಾಲಯಗಳ ಭಾಗಿದಾರಿಕೆ
ದಾವಣಗೆರೆ: ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಸೇರಿ ಎಂಟು ವಿಶ್ವವಿದ್ಯಾನಿಲಯಗಳ ಪುರುಷರ ತಂಡಗಳು ಶುಕ್ರವಾರ ಇಲ್ಲಿನ ದಾವಣಗೆರೆ ವಿವಿ ನಡೆಯುತ್ತಿರುವ ದಕ್ಷಿಣ ಭಾರತ ಅಂತರ ವಿವಿ ಖೋಖೋ ಟೂರ್ನಿಯ ಪ್ರೀ ಕ್ವಾರ್ಟರ್ ಹಂತ ಪ್ರವೇಶಿಸಿವೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಬೆಂಗಳೂರು ಉತ್ತರ, ಬೆಂಗಳೂರು ನಗರ, ಮೈಸೂರು ವಿವಿ, ಕುವೆಂಪು ವಿವಿ, ಯುನಿವರ್ಸಿಟಿ ಆಫ್ ಮದ್ರಾಸ್ ಹಾಗೂ ಕೇರಳದ ಕ್ಯಾಲಿಕೆಟ್ ವಿವಿಗಳು ಪ್ರೀ ಕ್ವಾರ್ಟರ್‌ಗೆ ಅರ್ಹತೆ ಪಡೆದ ಇತರ ತಂಡಗಳು. 
ನಾಲ್ಕನೇ ಸುತ್ತಿನಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ಹಾಗೂ ಆಂದ್ರಪ್ರದೇಶ ವಿವಿ ನಡುವಿನ ರೋಚಕ ಕಾದಾಟ ನೋಡುಗರ ಗಮನ ಸೆಳೆಯಿತು. ಸಮಾನ 16 ಅಂಕದೊಂದಿಗೆ ಪಂದ್ಯ ಟೈ ಆದಾಗ  ತೀರ್ಪುಗಾರರು ಹೆಚ್ಚುವರಿ ಇನಿಂಗ್ಸ್ ಅವಕಾಶ ನೀಡಿದರು. 9 ನಿಮಿಷದ ಕಾಲವಧಿಯಲ್ಲಿ ಚಾಕಚಕ್ಯತೆ ಆಟ ಪ್ರದರ್ಶಿಸಿದ ರಾಣಿ ಚನ್ನಮ್ಮ ವಿವಿ ಹುಡುಗರು ನಾಲ್ಕು ಅಂಕ ಪಡೆದು (20:16) ಪ್ರೀ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು. 
ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ತಮಿಳುನಾಡಿನ ಭಾರತಿ ದಾಸನ್ ವಿವಿಯನ್ನು 15-10 ಅಂಕದಿಂದ ಮಣಿಸಿದರೆ, ಬೆಂಗಳೂರು ಉತ್ತರ ವಿವಿಯು ಎರಡು ಅಂಕ (13-11)ದ ಮುನ್ನಡೆಯೊಂದಿಗೆ ಶ್ರೀಕೃಷ್ಣದೇವರಾಯ ವಿವಿ ವಿರುದ್ಧ ಜಯ ಸಾಧಿಸಿತು. 
ಕುವೆಂಪು ವಿವಿಯು ಆಂಧ್ರದ ವೆಂಕಟೇಶ್ವರ ವಿವಿ ವಿರುದ್ಧ (10-8) ಹಾಗೂ ಬೆಂಗಳೂರು ನಗರ ವಿವಿಯು ಎದುರಾಳಿ ಟಿಎನ್‌ಪಿಇಎಸ್ (ತಮಿಳುನಾಡು) ವಿವಿಯನ್ನು 14-10ರ ಅಂತರದಲ್ಲಿ ಮಣಿಸಿತು. 
ಕಳೆದ ಬಾರಿ ತಮಿಳುನಾಡಿನಲ್ಲಿ ಆಯೋಜಿಸಿದ್ದ  ದಕ್ಷಿಣ ಭಾರತ ಅಂತರ ವಿವಿ ಖೋಖೋ ಟೂರ್ನಿಯಲ್ಲಿ ಕ್ರಮವಾಗಿ ನಾಲ್ಕು ಸ್ಥಾನ ದಕ್ಕಿಸಿಕೊಂಡಿದ್ದ ಮಂಗಳೂರು, ದಾವಣಗೆರೆ, ಕೇರಳ ಹಾಗೂ ತಮಿಳುನಾಡು ವಿವಿಗಳು ಕ್ವಾರ್ಟರ್ ಹಂತಕ್ಕೆ ನೇರ ಪ್ರವೇಶ ಖಚಿತಪಡಿಸಿಕೊಂಡಿವೆ. 
ಭಾರತೀಯ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ದಾವಣಗೆರೆ ವಿವಿಯಲ್ಲಿ ಚೊಚ್ಚಲ ಬಾರಿಗೆ ಆಯೋಜಿಸಲಾದ ಈ ಟೂರ್ನಿಯಲ್ಲಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಒಳಗೊಂಡು 80 ವಿವಿಗಳ 1 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. 200 ತರಬೇತುದಾರರು, ವ್ಯವಸ್ಥಾಪಕರು, 50ಕ್ಕೂ ಹೆಚ್ಚು ತಾಂತ್ರಿಕ ಅಧಿಕಾರಿಗಳು ಭಾಗಿಯಾಗಿದ್ದಾರೆ. 
---
ದಾವಣಗೆರೆ ವಿವಿ ಆವರಣದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಅಂತರ ವಿವಿ ಖೋಖೋ ಟೂರ್ನಿಯ ಉಪ ಪಂದ್ಯದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಹಾಗೂ ಕೇರಳದ ಕ್ಯಾಲಿಕೆಟ್ ವಿವಿ ತಂಡಗಳ ನಡುವಿನ ಸೆಣಸಾಟ. 
----