ಜಗಳೂರು ಪಟ್ಟಣದ ನವಚೇತನ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಮಾಜಿ ಶಾಸಕ ಎಚ್.ಪಿ. ರಾಜೇಶ್ ಉದ್ಘಾಟಿಸಿದರು. ಸುಜಾತರಾಜು, ಪಿ.ಎಸ್.ಅರವಿಂದನ್, ಕೆ.ಟಿ. ಗಾಯತ್ರಿದೇವಿ, ಡಿ. ಶಬ್ರಿನ ಮಹಮ್ಮದ್ ಆಲಿ ಇದ್ದರು.wildlife
- ಮಾಜಿ ಶಾಸಕ ಎಚ್.ಪಿ. ರಾಜೇಶ್ ಸಲಹೆ
- ದತ್ತಿ ಉಪನ್ಯಾಸ ಕಾರ್ಯಕ್ರಮ
ಜಗಳೂರು: ತಾಲೂಕಿನ ರಂಗಯ್ಯನದುರ್ಗದಲ್ಲಿರುವ ಏಷ್ಯಾಖಂಡದ ಅಪರೂಪದ ಪ್ರಾಣಿ ಕೊಂಡುಕುರಿ ಸೇರಿ ಜಗಳೂರಿನ ವನ್ಯಸಂಪತ್ತು ಮತ್ತು ಐತಿಹಾಸಿಕ ತಾಣಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರವಾಸ ಹಾಗೂ ಮಾಹಿತಿ ಮೂಲಕ ಜಾಗೃತಿ ಮೂಡಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.
ಪಟ್ಟಣದ ನವಚೇತನ ಶಾಲೆಯ ಸಭಾಂಗಣದಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನ ತರಂಗಿಣಿ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಜಗಳೂರು ತಾಲೂಕಿನ ವಿಶೇಷತೆಗಳ ಬಗ್ಗೆ ತಿಳಿಯಬೇಕು. ಇದರಿಂದ ಇಲ್ಲಿನ ವನ್ಯಜೀವಿ, ವನ್ಯಸಂಪತ್ತು ಹಾಗೂ ಜನಜೀವನದ ಬಗ್ಗೆ ಅಪಾರ ಮಾಹಿತಿ ಸಿಗುತ್ತದೆ ಎಂದರು.
ಜಗಳೂರು ಇಮ್ಮಣ್ಣ ಎಂದೇ ಪ್ರಸಿದ್ಧರಾಗಿದ್ದ ಇಮಾಂ ಸಾಹೇಬರು ತುಪ್ಪದಹಳ್ಳಿ, ಸಂಗೇನಹಳ್ಳಿ, ಗಡಿಮಾಕುಂಟೆ ಕೆರೆಗಳನ್ನು ನಿರ್ಮಿಸಿ ಜನ ಮತ್ತು ಜಾನುವಾರುಗಳಿಗೆ ಶಾಶ್ವತ ನೀರಿನ ಸಮಸ್ಯೆ ನೀಗಿಸಿದ್ದರು. ಬೆಂಗಳೂರಿನ ವಿಧಾನಸೌಧದ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ ಹಿರಿಮೆ ಅವರದ್ದು. ತಾಲೂಕಿನಲ್ಲಿ ಕೊಣಚಗಲ್ಲು, ಕಣ್ವಕುಪ್ಪೆ ಗವಿಮಠ, ಕೋಟೆಯಂತಹ ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ಮಕ್ಕಳು ಇವುಗಳ ಇತಿಹಾಸ ತಿಳಿಯಬೇಕು ಎಂದರು.
ಕನ್ನಡ ಉಪನ್ಯಾಸಕಿ ಕೆ.ಟಿ. ಗಾಯತ್ರಿದೇವಿ ಮಾತನಾಡಿ, ಕೀರ್ತನೆಗಳ ಮೂಲಕ ಮನುಕುಲವನ್ನು ಬೆಳಗಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. ಭಗವಂತನ ನಾಮಸ್ಮರಣೆಗಿಂತ ಮನುಷ್ಯನ ಅಂತರಂಗ ಪರಿಶುದ್ಧವಾಗಿರುವುದು ಮುಖ್ಯ. ನೆಲ, ಜಲ, ಅನ್ನ ಹಾಗೂ ಆತ್ಮಕ್ಕಿಲ್ಲದ ಕುಲ ಮನುಷ್ಯನಿಗೆ ಏಕೆ? ಎಂದು ಪ್ರಶ್ನಿಸುವ ಮೂಲಕ ಅವರು ಮೌಢ್ಯ ಮತ್ತು ಜಾತಿ ತಾರತಮ್ಯವನ್ನು ವಿರೋಧಿಸಿದರು. ತಮ್ಮ ಸಾಹಿತ್ಯದಲ್ಲಿ ನೈತಿಕ, ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳನ್ನು ಕಟ್ಟಿಕೊಟ್ಟ ಅವರು, ರೋಗಗ್ರಸ್ತ ಸಮಾಜಕ್ಕೆ ತಮ್ಮ ಕೀರ್ತನೆಗಳ ಮೂಲಕ ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಿದರು.
ಲೇಖಕಿ ಡಿ. ಶಬ್ರಿನ ಮಹಮ್ಮದ್ ಆಲಿ ಮಾತನಾಡಿ, ಎಲ್ಲರೂ ಹುಟ್ಟಿನಿಂದ ಸಮಾನರು, ಇಲ್ಲಿ ಮೇಲು-ಕೀಳು ಎಂಬುದು ತರವಲ್ಲ. ಅಡುಗೆ ಮನೆ, ದೇವಾಲಯ ಹಾಗೂ ಶೌಚಗೃಹಕ್ಕೂ ಬಳಸುವುದು ಒಂದೇ ನೆಲ, ಒಂದೇ ಜಲವಾಗಿದೆ. ಹೀಗಿರುವಾಗ ಹೆಣ್ಣು-ಗಂಡು ಅಥವಾ ಜಾತಿಯ ಭೇದ ಸಲ್ಲದು ಎಂದು ವಚನ ಸಾಹಿತ್ಯ ಸಾರುತ್ತದೆ. ಜಗದ್ಗುರು ಬಸವಣ್ಣನವರು ಸಮಾನತೆಗಾಗಿ ಕ್ರಾಂತಿ ಮಾಡಿ ಕಾಯಕದ ಮಹತ್ವ ತಿಳಿಸಿದರು. ವೃತ್ತಿಯನ್ನು ಜಾತಿ ಆಧಾರಿತವಾಗಿ ನೋಡಿ ಶೋಷಿಸುವುದು ಅಜ್ಞಾನ. ವೃತ್ತಿಗಳು ಜಾತಿಗಳಲ್ಲ, ಅವು ಕಾಯಕಗಳಾಗಿವೆ ಎಂದರು.
ಕಸಾಪ ತಾಲೂಕಾಧ್ಯಕ್ಷೆ ಸುಜಾತರಾಜು ಪ್ರಾಸ್ತಾವಿಕ ನುಡಿದರು. ಕನ್ನಡ ಉಪನ್ಯಾಸಕ ಪಂಚಾಕ್ಷರಯ್ಯ ಮತ್ತು ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿದರು. ಇದೇ ವೇಳೆ ನವಚೇತನ ಇಂಗ್ಲಿಷ್ ಶಾಲೆಯಲ್ಲಿ ಕಳೆದ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕಿ ರೇವತಿ, ಪ್ರಾಚಾರ್ಯೆ ಲತಾಕುಮಾರಿ, ಶಿಕ್ಷಕರಾದ ಎಚ್. ಬಸವರಾಜ್, ತಿಮ್ಮರಾಜು, ಗೌತಮಿ, ಪೂಜಾ, ಲಕ್ಷ್ಮೀದೇವಿ, ತನುಶ್ರಿ ಇತರರಿದ್ದರು.
ಮಾನವೀಯತೆ ಬಿತ್ತಿದ ಶರಣರು- ದಾಸರು
12ನೇ ಶತಮಾನದಲ್ಲಿ ಶರಣರು, 15ನೇ ಶತಮಾನದಲ್ಲಿ ದಾಸರು ಹಾಗೂ 18ನೇ ಶತಮಾನದಲ್ಲಿ ಜನಪದರು ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಹಾಗೂ ಸಮಸಮಾನತೆಯ ವಿಚಾರಧಾರೆಗಳನ್ನು ಬಿತ್ತಿದ್ದಾರೆ. ತಂದೆ-ತಾಯಿಗಳ ತ್ಯಾಗವನ್ನು ಮಕ್ಕಳು ಗೌರವಿಸಬೇಕು. ಅನ್ನ, ಆರೋಗ್ಯ, ಶಿಕ್ಷಣ ಹಾಗೂ ಆಶ್ರಯವನ್ನು ಸಮಾಜಕ್ಕೆ ಸದಾ ನೀಡುತ್ತಿರಬೇಕು ಎಂದು ಜ್ಞಾನ ತರಂಗಿಣಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪಿ.ಎಸ್.ಅರವಿಂದನ್ ಸಲಹೆ ನೀಡಿದರು.