ಜಗಳೂರಿನ ದೇವೇಗೌಡ ಬಡಾವಣೆ ಜಲಾವೃತಗೊಂಡಿರುವುದು.jagalur
- ಜಗಳೂರಿನಲ್ಲಿ ಮಳೆಯ ಅವಾಂತರ
- ಬಡಾವಣೆಗಳಿಗೆ ನುಗ್ಗಿದ ನೀರು
- ಪಪ್ಪಾಯಿ, ಬಾಳೆ ಬೆಳೆಗೆ ಹಾನಿ
- ನೆಲಕ್ಕುರುಳಿದ ಫಸಲು
ಜಗಳೂರು: ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಮರಗಳು ಧರೆಗುರುಳಿವೆ. ಮನೆಗಳು ಹಾನಿಯಾಗಿದೆ ಮತ್ತು ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.
ಶುಕ್ರವಾರ ಬೆಳಗ್ಗೆ ಶುರುವಾದ ಮಳೆ ಒಂದು ಗಂಟೆ ಕಾಲ ಬಿಡುವಿಲ್ಲದ ಸುರಿಯಿತು. ಮಳೆ ಜತೆ ಬಿರುಗಾಳಿ, ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು.
ಅಸಗೋಡು ಗ್ರಾಮದ ರೈತ ಎನ್. ಶಂಭುಲಿಂಗಪ್ಪ ಅವರ ಪಪ್ಪಾಯಿ ಬೆಳೆಗೆ ಹಾನಿಯಾಗಿದೆ. ಹಳವದಂಡಿ ಪವಿತ್ರ ಮೈಲಾರಪ್ಪ ಅವರ ವಾಸದ ಮನೆ ಭಾಗಶಃ ಹಾನಿಯಾಗಿದೆ. ಹನುಮಂತಾಪುರ ಗ್ರಾಮದ ಸವಿತಾ ಹನುಮಂತಪ್ಪ ಫಲಕ್ಕೆ ಬಂದಿದ್ದ ಬಾಳೆ ನೆಲಕ್ಕುರುಳಿದೆ. 25.90 ವಿಸ್ತೀರ್ಣದ ಪಪ್ಪಾಯಿ ಬೆಳೆ ಸಂಪೂರ್ಣ ನಾಶವಾಗಿದ್ದು, 12 ಲಕ್ಷ ರೂ. ನಷ್ಟ ಸಂಭವಿಸಿದೆ.
ಇದರೊಂದಿಗೆ 15.ಎಕರೆ ವಿಸ್ತೀರ್ಣದ ಬಾಳೆ ಬೆಳೆ ನೆಲಕಚ್ಚಿದ್ದು 5 ಲಕ್ಷ ರೂ. ಹಾಗೂ 10 ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಮಳೆ ನೀರಿಗೆ ಸಿಲುಕಿ 2 ಲಕ್ಷ ರೂ. ನಷ್ಟ ಉಂಟಾಗಿದೆ. 26.75 ಲಕ್ಷ ರೂ. ಮೊತ್ತದ ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಬೆಳೆ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಅರಿಶಿಣಗುಂಡಿ ಗ್ರಾಮದಲ್ಲಿ ಹಳ್ಳದ ಹರಿವು ಹೆಚ್ಚಾಗಿ ನೀರು ಭೋರ್ಗರೆಯುತ್ತಿತ್ತು. ಲಿಂಗಣ್ಣನಹಳ್ಳಿಯಲ್ಲಿ 12 ಎಕರೆ ಖಾಲಿ ಹೊಲ ನೀರಿನಿಂದ ಆವೃತವಾಗಿ ಕೆರೆಯಂತೆ ಕಂಡು ಬಂತು. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಬಡಾವಣೆಗಳು ನೀರಿನಲ್ಲಿ ಜಲಾವೃತ
ತಾಲೂಕಿನ ದೇವೇಗೌಡ ಗೌಡ ಬಡಾವಣೆ ಮಳೆಯ ಆರ್ಭಟಕ್ಕೆ ಜಲಾವೃತಗೊಂಡಿದೆ. ಅವೈಜ್ಞಾನಿಕ ಚರಂಡಿ, ರಸ್ತೆ, ಪಾರ್ಕ್ ನಿರ್ಮಾಣದಿಂದ ಮಳೆ ಮತ್ತು ತ್ಯಾಜ್ಯ ನೀರು ಹರಿದು ಹೋಗಲಿಕ್ಕೆ ಉತ್ತಮವಾದ ಒಳಚರಂಡಿ ವ್ಯವಸ್ಥೆ ಇಲ್ಲ. ರಸ್ತೆಗಳು ಹಾಳಾಗಿವೆ. ಮನೆಗಳ ಮುಂಭಾಗ, ಖಾಲಿ ಜಾಗಗಳಲ್ಲಿ ನೀರು ಸಂಗ್ರಹಣೆಗೊಂಡು ಒಂದು ರೀತಿಯಲ್ಲಿ ಕೆರೆಯಂತಾಗಿದೆ.
ಇನ್ನು ರಂಗನಾಥ್ ಬಡವಾಣೆಯಲ್ಲೂ ಅದೇ ರಾಮಾಯಣವಾಗಿದೆ. ಪಾಲನಾಯಕನಕೋಟೆ ರಾಜು ಎಂಬುವರ ಮನೆ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಮಳೆ ನೀರು ಮನೆಯೊಳಗೆ ನುಗ್ಗಿ ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. ಮನೆಯಿಂದ ಹೊರಗೆ ಬರಲು ದಾರಿ ಕಾಣದಂತಾಗಿದೆ. ಕಾರು ನೀರಿನಲ್ಲಿ ಮುಳುಗಿದೆ. ಬೈಕ್ ಕಾಣುಸುತ್ತಿಲ್ಲ. ಅಬ್ದುಲ್ ಲತೀಫ್ ಸಾಬ್ ಬಡಾವಣೆ, ಕೃಷ್ಣ, ಲೋಕೇಶ್‌ರೆಡ್ಡಿ, ತುಮಾಟಿ, ಬಸವೇಶ್ವರ ಹಾಗೂ ಜೆಡಿ ಬಡಾವಣೆಗಳಲ್ಲಿ ಖಾಲಿ ಇರುವ ಜಾಗಗಳಲ್ಲಿ ನೀರು ತುಂಬಿಕೊಂಡಿದೆ.