ಜಿಲ್ಲೆಯಲ್ಲಿ ನಳನಳಿಸುತ್ತಿರುವ ರಾಗಿ ಹೊಲ.
- ಜಿಲ್ಲೆಯಲ್ಲಿ 22,785 ಹೆಕ್ಟೇರ್‌ವರೆಗೆ ಕ್ಷೇತ್ರ ವಿಸ್ತರಣೆ
- ಕಳೆದ ವರ್ಷಕ್ಕಿಂತ ದುಪ್ಪಟ್ಟಾದ ವಿಸ್ತೀರ್ಣ
- ಮಳೆ ಅಭಾವದಲ್ಲೂ ಚಿಗುರೊಡೆದ ಕನಸು
ದಾವಣಗೆರೆ: ರಾಗಿ ತಿಂದವ ನಿರೋಗಿ ಎಂಬುದು ಗಾದೆ ಮಾತು. ಸಿರಿಧಾನ್ಯಗಳಲ್ಲಿ ಪ್ರಮುಖ ಬೆಳೆ ರಾಗಿ. ಕ್ಯಾಲ್ಸಿಯಂ, ಕಬ್ಬಿಣಾಂಶವುಳ್ಳ ಇದು ಪೌಷ್ಟಿಕಾಂಶ ಆಹಾರ ಹಾಗೂ ರೋಗನಿರೋಧಕವೂ ಕೂಡ. ಇಷ್ಟೆಲ್ಲ ಒಕ್ಕಣೆ ಏಕೆ ಎಂದರೆ, ಮೆಕ್ಕೆಜೋಳ ಕಣಜ ದಾವಣಗೆರೆ ಜಿಲ್ಲೆಯಲ್ಲಿ ಇದೀಗ ರಾಗಿ ಕೃಷಿ ಮೆಲ್ಲನೆ ಪುಟಿದೇಳುತ್ತಿದೆ.
ಕೆಲ ವರ್ಷಗಳ ಹಿಂದೆ ಜಿಲ್ಲೆ, ಮೆಕ್ಕೆಜೋಳದ ಬಂಪರ್ ಬೆಳೆಗೆ ಹೆಸರಾಗಿತ್ತು. ಲದ್ದಿಹುಳು ಬಾಧೆ ಇನ್ನಿತರೆ ಕಾರಣಗಳಿಂದಾಗಿ ನಿರೀಕ್ಷಿತ ಇಳುವರಿ ಕಾಣಲಿಲ್ಲ. ಈ ಬಾರಿ 1,27,245 ಹೆಕ್ಟೇರ್ ಗುರಿಯುಳ್ಳ ಮೆಕ್ಕೆಜೋಳ 47,913 (ಶೇ.37.65) ಹೆಕ್ಟೇರ್‌ನಲ್ಲಿ ಕಾಣಿಸಿಕೊಂಡಿದ್ದು ಪಾಸಿಂಗ್ ಮಾರ್ಕ್ಸ್ ಬಂದಿದೆ. ನಿರೀಕ್ಷಿತ ಮುಂಗಾರು ಕೂಡ ಕೈಕೊಟ್ಟ ಹಿನ್ನೆಲೆಯಲ್ಲಿ ಈ ಹಿನ್ನಡೆ ಕಂಡುಬಂದಿದೆ.
ಆಶಾದಾಯಕ ಬೆಳವಣಿಗೆ ಎಂದರೆ ಕೆಲವೆಡೆ ಮೆಕ್ಕೆಜೋಳ ಕ್ಷೇತ್ರದಲ್ಲೀಗ ರಾಗಿ ಆವರಿಸುತ್ತಿದೆ. ಕಳೆದ ವರ್ಷವಿದ್ದ ರಾಗಿ ಕ್ಷೇತ್ರ ದುಪ್ಪಟ್ಟಾಗಿ ಹಿಗ್ಗಿದೆ. ಬಿತ್ತನೆ ವೈಫಲ್ಯ ಕಂಡ ಮೆಕ್ಕೆಜೋಳ ಬೆಳೆಗಾರರು ರಾಗಿಯನ್ನು ಬದಲಿ ಬೆಳೆಯಾಗಿ ಬಿತ್ತನೆ ಮಾಡುವಲ್ಲಿ ಆಸಕ್ತಿ ವಹಿಸಿದ್ದಾರೆ. ಇದಕ್ಕಾಗಿ, ಚಿಗುರೊಡೆಯದ ಮೆಕ್ಕೆಜೋಳ ತೆಗೆದು ಹಾಕಿದ್ದಾರೆ.
ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 10229.58 ಹೆ. ರಾಗಿ ಕ್ಷೇತ್ರವಿತ್ತು. ಈ ಪೈಕಿ ಚನ್ನಗಿರಿ ತಾಲೂಕಿನಲ್ಲಿ 1885.68 ಹೆ., ದಾವಣಗೆರೆ- 1843.86 ಹೆ, ಹರಿಹರ-510.44 ಹೆ., ಹೊನ್ನಾಳಿ- 358.08 ಹೆ., ಜಗಳೂರು- 5531.13 ಹೆ., ನ್ಯಾಮತಿ ತಾಲೂಕಲ್ಲಿ 100.39 ಹೆ. ವಿಸ್ತೀರ್ಣವಿತ್ತು.
ಜಿಲ್ಲೆಯಲ್ಲಿ ಈ ಬಾರಿ 13,659 ಹೆಕ್ಟೇರ್ ವಿಸ್ತೀರ್ಣದ ಗುರಿ ಪೈಕಿ ಈಗಾಗಲೆ 22,785 ಹೆಕ್ಟೇರ್ ಕ್ಷೇತ್ರದಷ್ಟು ರಾಗಿ ಹಿಗ್ಗಿದೆ. ಗುರಿಗಿಂತ ಶೇ. 166.81ರಷ್ಟು ಪ್ರಗತಿ ಸಾಧಿಸಲಾಗಿದೆ. ದಾವಣಗೆರೆ, ಹೊನ್ನಾಳಿ ತಾಲೂಕುಗಳಲ್ಲಿ ರಾಗಿ ಬಿತ್ತನೆ ಶೇ.200ರಷ್ಟು ಹೆಚ್ಚಿರುವುದು ಗಮನಾರ್ಹ.
ದಾವಣಗೆರೆ ತಾಲೂಕಿನಲ್ಲಿ 2200 ಹೆಕ್ಟೇರ್ ಗುರಿ ಪೈಕಿ 5455, ಜಗಳೂರು ತಾಲೂಕಿನಲ್ಲಿ 5451 ಹೆಕ್ಟೇರ್ ಗುರಿ ಪೈಕಿ 8500, ಚನ್ನಗಿರಿ ತಾಲೂಕಿನಲ್ಲಿ 4900 ಹೆಕ್ಟೇರ್ ಪೈಕಿ 7200, ಹೊನ್ನಾಳಿ ತಾಲೂಕಿನಲ್ಲಿ 340 ಹೆಕ್ಟೇರ್ ಗುರಿ ಇದ್ದರೆ 910 ಹೆಕ್ಟೇರ್‌ನಷ್ಟು ವಿಸ್ತರಣೆಯಾಗಿದೆ. ಹರಿಹರ ತಾಲೂಕಿಗಿದ್ದ ಗುರಿ( 400 ಹೆಕ್ಟೇರ್) ತಲುಪಲಾಗಿದೆ.
ಸದ್ಯಕ್ಕೆ ಜಿಪಿಯು-28, ಕೆಎಂಆರ್-316, ಎಂಎಲ್ 365, ಪಿಆರ್ 202 ತಳಿಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಇನ್ನೊಂದು ವಾರದೊಳಗೆ ರಾಗಿ ಕ್ಷೇತ್ರ 25 ಸಾವಿರ ಹೆಕ್ಟೇರ್ ತಲುಪುವ ನಿರೀಕ್ಷೆ ಇದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.
ರಾಗಿ ಕಡಿಮೆ ನೀರನ್ನು ಬೇಡುತ್ತದೆ. ಶೇ.30ರಷ್ಟು ನೀರುಣಿಸಿಯೂ ಕಡಿಮೆ ವೆಚ್ಚದಲ್ಲಿ ಉತ್ತಮ ಲಾಭ ಪಡೆಯಬಹುದು. ಮಳೆಯಾಶ್ರಿತ ಭೂಮಿಯಲ್ಲಿ ಸುಲಭವಾಗಿ ಬೆಳೆಯಬಹುದು. ಒಂದೆರಡು ಮಳೆ ಬಂದರೂ ರಾಗಿ ಬದುಕಬಲ್ಲದು. ಉಳಿದ ಬೆಳೆಗೆ ಹೋಲಿಸಿದರೆ ಇದಕ್ಕೆ ರೋಗಭಾದೆ ಕಡಿಮೆ. ಯಾವುದೇ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬೇಕಿಲ್ಲ.
ಮಾರುಕಟ್ಟೆಯಲ್ಲೂ ರಾಗಿಗೆ ಉತ್ತಮ ಬೇಡಿಕೆ ಇದೆ. ಇದಕ್ಕೆ ಪೂರಕ ಎಂಬಂತೆ ಸರ್ಕಾರದ ಬೆಂಬಲ ಬೆಲೆ 5ಸಾವಿರ ರೂ. ದಾಟಿದೆ. ಬಿತ್ತನೆಯಿಂದ ಕೊಯ್ಲು ಹಂತದವರೆಗೂ ಆಧುನಿಕ ಯಂತ್ರೋಕರಣಗಳು ಲಭ್ಯವಿವೆ. ಹೀಗಾಗಿ ರಾಗಿ ಕೃಷಿ ಸಲೀಸಾಗಿದೆ.
ತಲಾ ಎಕರೆಯಲ್ಲಿ 20 ಕ್ವಿಂ. ರಾಗಿ ಬೆಳೆಯಬಹುದು. ಜತೆಗೆ 2 ಟನ್ ಮೇವು ಉತ್ಪಾದನೆ ಮಾಡಬಹುದು. ರಾಗಿ ಕಾಳಿನೊಂದಿಗೆ ಸಿಗುವ ದಂಟು(ಮೇವು) ಜಾನುವಾರುಗಳಿಗೂ ಅನುಕೂಲಕರ. ಇಂದಿನ ಮಾರುಕಟ್ಟೆಯಲ್ಲಿ ರಾಗಿ ಒಣಹುಲ್ಲಿನ ಒಂದು ದೊಡ್ಡ ಪೆಂಡಿಗೆ 300 ರೂ. ದರವಿದೆ. ರಾಗಿಯಷ್ಟೇ ಮೇವಿನ ಬೇಡಿಕೆಗೆ ಬರವಿಲ್ಲ.
ರಾಗಿ ಬೆಳೆಯಲು ಬಿತ್ತನೆ, ಕಟಾವು ಯಂತ್ರಗಳಿವೆ. ರಾಗಿಯಿಂದ ರಾಸುಗಳಿಗೆ ಮೇವು ಸಿಗಲಿದೆ. ಮೇವಿಗೆ ಬೇಲರ್ ಇರುವುದರಿಂದ ಬಣವೆ ಒಟ್ಟುವುದು ತಪ್ಪಲಿದೆ. ಸಾಗಾಣಿಕೆ ಕೂಡ ಸುಲಭ. ಹೈನುಗಾರಿಕೆಯನ್ನೂ ಮಾಡಬಹುದು. ಹೀಗಾಗಿ ರೈತರು ಮೆಕ್ಕೆಜೋಳ ಬದಲು ರಾಗಿ ಬೆಳೆಯುವುದು ಸೂಕ್ತ.
— ಕೆ.ಜಿಯಾವುಲ್ಲಾ, ಜಂಟಿ ಕೃಷಿ ನಿರ್ದೇಶಕ