ಜಗಳೂರು: ಸರ್ವೇ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥ, ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಕಡಿವಾಣ, ಬಸ್ ಪ್ರಯಾಣ ದರ ಇಳಿಕೆ, ಜಮೀನುಗಳಿಗೆ ದಾರಿ, ಮುಗ್ಗಿದರಾಗಿಹಳ್ಳಿ ವಸತಿ ಶಾಲೆಯಲ್ಲಿ ಶೌಚಗೃಹ ನಿರ್ಮಾಣ ಹಾಗೂ ಭರಮಸಮುದ್ರ ಗ್ರಾಮದ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರಾತಿ ಸೇರಿ ಹಲವು ಹಕ್ಕೊತ್ತಾಯ...
ಇವು ತಾಲೂಕಿನ ಕಲ್ಲೇ ದೇವರಪುರ ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿಬಂದ ಅಹವಾಲುಗಳು ಕಳೆದ ಮೂರ್ನಾಲ್ಕು ತಿಂಗಳಿಂದ ಸರ್ವೇ ಇಲಾಖೆಯಲ್ಲಿ ಪೋಡಿ ಬದಲಾವಣೆ ಸೇರಿ ವಿವಿಧ ಅರ್ಜಿಗಳು ಇತ್ಯರ್ಥವಾಗದೆ ರೈತರು ಅಲೆದಾಡುವಂತಾಗಿದೆ. ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ದೋಷದ ನೆಪವೊಡ್ಡಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಇನ್ನೊಂದೆಡೆ ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ನಾಯಿಕೊಡೆಗಳಂತೆ ತಲೆಯೆತ್ತಿದ್ದು, ಸಾಲದ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸಿ ಮನೆಗಳನ್ನು ಜಪ್ತು ಮಾಡುತ್ತಿವೆ. ಇವುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕುಮಾರ್ ಭರಮಸಾಗರ ಆಗ್ರಹಿಸಿದರು.
ರೈತ ದೊಣೆಹಳ್ಳಿ ಹೊಸೂರು ಮಹಾಂತೇಶ್ ಮಾತನಾಡಿ, ಸುಭಾಷ್ನಗರದ ನಿವಾಸಿಗಳಿಗೆ ಒಂದು ಅಡಿ ಜಾಗವಿಲ್ಲ. ಜೀವನೋಪಾಯಕ್ಕಾಗಿ ಸರ್ಕಾರದಿಂದ ತಲಾ 3 ಎಕರೆ ಉಳುಮೆ ಜಮೀನು ಮಂಜೂರು ಮಾಡಬೇಕು ಎಂದು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಬರಗಾಲದ ಸಂಕಷ್ಟದ ನಡುವೆ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳ ಪ್ರಯಾಣ ದರ ದುಪ್ಪಟ್ಟು ಮಾಡಿರುವುದು ಸರಿಯಲ್ಲ. ಹಳೆಯ ದರವನ್ನೇ ಮುಂದುವರಿಸದಿದ್ದರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದರು.
ಇದೇ ವೇಳೆ ಪಶು ಇಲಾಖೆ ವತಿಯಿಂದ ಶಾಸಕ ಬಿ. ದೇವೇಂದ್ರಪ್ಪ ಸಾಂಕೇತಿಕವಾಗಿ ರೈತರಿಗೆ ಮೇವಿನ ಬೀಜದ ಕಿಟ್ ವಿತರಿಸಿದರು.ತಾಪಂ ಇಒ ಕೆಂಚಪ್ಪ, ಬಿಇಒ ಹಾಲಮೂರ್ತಿ, ಕೃಷಿ ಸಹಾಯಕ ನಿರ್ದೇಶಕಿ ಶ್ವೇತಾ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಲಿಂಗರಾಜ್, ಆರ್ಐ ಕೀರ್ತಿಕುಮಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಆಂದೋಲನದಲ್ಲಿ ಒಟ್ಟು 44 ಅರ್ಜಿಗಳು ಸಲ್ಲಿಕೆಯಾಗಿದ್ದು, 20 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ. ಉಳಿದ ಅರ್ಜಿಗಳನ್ನು 7 ದಿನಗಳೊಳಗೆ ಪರಿಹರಿಸಲಾಗುವುದು ಎಂದು ತಹಸೀಲ್ದಾರ್ ಗುರುಬಸವರಾಜ್ ತಿಳಿಸಿದರು.
ತಾಲೂಕಿನಲ್ಲಿ ಶೇ.80ರಷ್ಟು ರೈತರಿದ್ದರೂ ಈವರೆಗೆ ಸುಸಜ್ಜಿತ ರೈತ ಭವನ ನಿರ್ಮಾಣವಾಗಿಲ್ಲ. ಸಭೆ, ಸಮಾರಂಭಗಳಿಗೆ ಅನುಕೂಲವಾಗುವಂತೆ ಪಟ್ಟಣದಲ್ಲಿ ಜಾಗ ಗುರುತಿಸಿ ರೈತ ಭವನ ನಿರ್ಮಿಸಿಕೊಡಲು ಶಾಸಕರು ಗಮನಹರಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಕುಮಾರ್ ಮನವಿ ಮಾಡಿದರು.