ಬಸವಾಪಟ್ಟಣ ಸಮೀಪದ ಚಿರಡೋಣಿಯಲ್ಲಿ ಭಾನುವಾರ ಆರಂಭಗೊಂಡ ಒಂಬತ್ತು ದಿನಗಳ ಶ್ರೀ ಮೌನೇಶ್ವರ ಮಹಾಪುರಾಣ ವಾಚನ-ಪ್ರವಚನ ಕಾರ್ಯಕ್ರಮವನ್ನು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. ಕಾಳಹಸ್ತೇಂದ್ರ ಸ್ವಾಮೀಜಿ, ಬಿ.ಜಿ. ಸಚಿನ್, ಎ.ಪಿ. ಶ್ರೀಧರಾಚಾರ್ ಇತರರಿದ್ದರು. Life
- ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿಕೆ
ಬಸವಾಪಟ್ಟಣ: ಪುರಾಣ ಪ್ರವಚನಗಳು ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸಿ, ಜೀವನಕ್ಕೆ ಉತ್ತಮ ದಿಕ್ಕು ನೀಡುವ ಅಪಾರ ಶಕ್ತಿ ಹೊಂದಿವೆ. ಆದರೆ ಇಂದಿನ ಯುವ ಪೀಳಿಗೆ ಧರ್ಮ, ಸಂಸ್ಕಾರಗಳಿಂದ ದೂರ ಸರಿಯುತ್ತಿರುವುದರಿಂದ ಸಮಾಜದಲ್ಲಿ ನೈತಿಕ ಮೌಲ್ಯಗಳ ಕುಸಿತ ಕಾಣಿಸುತ್ತಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು. Life
ಸಮೀಪದ ಚಿರಡೋಣಿಯ ಶ್ರೀ ಕಾಳಿಕಾದೇವಿ ದೇವಾಲಯದ ಆವರಣದಲ್ಲಿರುವ ಶ್ರೀ ವಿಶ್ವಕರ್ಮ ಸಮುದಾಯ ಭವನದಲ್ಲಿ ಭಾನುವಾರ ಆರಂಭಗೊಂಡ ಒಂಬತ್ತು ದಿನಗಳ ಶ್ರೀ ಮೌನೇಶ್ವರ ಮಹಾಪುರಾಣ ವಾಚನ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಕ್ಕಳು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಲು ಪಾಲಕರು ಅವರನ್ನು ಧಾರ್ಮಿಕ ಕಾರ್ಯಕ್ರಮ ಹಾಗೂ ಸತ್ಸಂಗಗಳಿಗೆ ಕರೆತರಬೇಕು. ಹಣ, ಅಧಿಕಾರದ ಹಿಂದೆ ಓಡುವುದಕ್ಕಿಂತ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅಗತ್ಯ. ಇಂದಿನ ಒತ್ತಡದ ಬದುಕಿನಲ್ಲಿ ಮನಸ್ಸಿಗೆ ಸ್ಥೈರ್ಯ ಮತ್ತು ಆತ್ಮವಿಶ್ವಾಸ ತುಂಬಲು ಧರ್ಮವೇ ದಾರಿಯಾಗಿದೆ ಎಂದು ನುಡಿದರು.
ಶಹಾಪುರದ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಪುರಾಣಗಳು ಕೇವಲ ಧಾರ್ಮಿಕ ಗ್ರಂಥಗಳಲ್ಲ, ಅವು ಬದುಕಿನ ಮಾರ್ಗದರ್ಶಕಗಳು. ಇವುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕುಟುಂಬ ಮತ್ತು ಸಮಾಜ ಎರಡೂ ಸದೃಢವಾಗುತ್ತವೆ ಎಂದರು. ಬಿಜೆಪಿ ಮಾಯಕೊಂಡ ಕ್ಷೇತ್ರದ ಅಧ್ಯಕ್ಷ ಬಿ.ಜಿ. ಸಚಿನ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದು ಸಮಾಜದ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿದೆ. ಯುವಜನತೆ ಇವುಗಳಿಂದ ಸ್ಫೂರ್ತಿ ಪಡೆದು ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.
ಪುರಾಣ ಸಮಿತಿ ಅಧ್ಯಕ್ಷ ಎ.ಪಿ. ಶ್ರೀಧರಾಚಾರ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವಾಚಾರ್ ಪ್ರಾಸ್ತಾವಿಕ ನುಡಿದರು. ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಒಂಬತ್ತು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಮಹೋತ್ಸವದ ಮೊದಲ ದಿನ ನೂರಾರು ಭಕ್ತರು ಭಾಗವಹಿಸಿದ್ದರು.