ದಾವಣಗೆರೆಯ ಬಾಷಾ ನಗರದಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಮಗುವೊಂದಕ್ಕೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಲಸಿಕೆ ಹಾಕಿದರು. ಡಿಎಚ್‌ಒ ಡಾ. ಷಣ್ಮುಖಪ್ಪ, ಡಾ. ರೇಣುಕಾರಾಧ್ಯ, ಮುಖಂಡ ಆದಿಲ್‌ಖಾನ್ ಇದ್ದರು. 
ದಾವಣಗೆರೆ

ಪಲ್ಸ್ ಪೋಲಿಯೋ 96ರಷ್ಟು ಸಾಧನೆ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಮೊದಲ ದಿನವೇ 1,32,517 ಮಕ್ಕಳಿಗೆ ಲಸಿಕೆ
  • ಜಿಲ್ಲಾದ್ಯಂತ 1174 ಸಿಬ್ಬಂದಿ ನಿಯೋಜನೆ
  • ಅಭಿಯಾನ ಯಶಸ್ವಿಗೆ ಜಿಪಂ ಸಿಇಒ ಸೂಚನೆ
ದಾವಣಗೆರೆ: ಜಿಲ್ಲಾದ್ಯಂತ ಹಮ್ಮಿಕೊಂಡಿರುವ ನಾಲ್ಕು ದಿನಗಳ ರಾಷ್ಟ್ರೀಯ ಪಲ್ಸ್ ಪೋಲಿಯೋ ವಿಶೇಷ ಲಸಿಕಾ ಅಭಿಯಾನ ಆರಂಭವಾಗಿದ್ದು ಮೊದಲ ದಿನವೇ ಶೇ.96.49 ರಷ್ಟು ಸಾಧನೆ ಮಾಡಲಾಗಿದೆ.
ಜಿಲ್ಲಾದ್ಯಂತ 5 ವರ್ಷದೊಳಗಿನ 1,37,339 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಪೈಕಿ ಭಾನುವಾರ, 1,32,517 ಮಕ್ಕಳಿಗೆ ಲಸಿಕೆ ನೀಡಲಾಯಿತು. 500ಕ್ಕೂ ಹೆಚ್ಚು ಬೂತ್‌ಗಳಲ್ಲಿ 1090 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ಗುರುತಿಸಿ ಲಸಿಕೆ ಕೊಡಿಸಿದರು.
ಲಸಿಕಾ ಅಭಿಯಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 1174 ಸಿಬ್ಬಂದಿ ನಿಯೋಜಿಸಲಾಗಿದೆ. ಸೋಮವಾರದಿಂದ 3 ದಿನಗಳ ಕಾಲ ಮನೆ ಮನೆ ಭೇಟಿ ನೀಡಿ ಕಾರ್ಯಾಚರಣೆ ಮಾಡಲಿದೆ. 5 ಸಂಚಾರಿ ತಂಡ ಹಾಗೂ ರೈಲು-ಬಸ್ ನಿಲ್ದಾಣ, ತಂಗುದಾಣದಲ್ಲಿನ ಮಕ್ಕಳಿಗೆ 44 ಟ್ರಾನ್ಸಿಸ್ಟ್ ತಂಡದ ಸಿಬ್ಬಂದಿ ಲಸಿಕೆ ನೀಡಲಿದ್ದಾರೆ.
ಬಾಷಾನಗರದಲ್ಲಿ ಚಾಲನೆ :ನಗರದ ಬಾಷಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಬ್ದುಲ್ ರೆಹಮಾನ್ ಎಂಬ 4 ತಿಂಗಳ ಮಗುವಿಗೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಅವರು ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದರು.
ವಿಶೇಷ ಅಭಿಯಾನದಲ್ಲಿ ಯಾವ ಮಗುವೂ ಸಹ ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗ್ರಾಮೀಣ, ನಗರ ಪ್ರದೇಶ ಸೇರಿ ಎಲ್ಲಾ ಭಾಗಗಳ ಅರ್ಹ ಮಕ್ಕಳನ್ನು ಗುರುತಿಸಿ ಗುರಿ ಸಾಧಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಸಮನ್ವಯದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಡಿಎಚ್‌ಒ ಡಾ. ಎಸ್. ಷಣ್ಮುಖಪ್ಪ ಮಾತನಾಡಿ, ಜಿಲ್ಲೆಯನ್ನು ಸಂಪೂರ್ಣ ಪೋಲಿಯೋ ಮುಕ್ತವಾಗಿಸಲು ಆರೋಗ್ಯ ಇಲಾಖೆ ಪಣತೊಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 18,28,153 ಜನಸಂಖ್ಯೆಯಿದ್ದು, 3,79,338 ಮನೆಗಳಿವೆ. ಈ ಪೈಕಿ 5 ವರ್ಷದ ಒಳಗಿನ 1,37,339 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ ಎಂದರು.
ಗುರುತಿಸಲಾದ ಬೂತ್‌ಗಳಲ್ಲಿ ಲಸಿಕೆ ಹಾಕುವ ಜತೆಗೆ ಜುಲೈ 1ರವರೆಗೆ ಲಸಿಕೆ ಹಾಕುವ ಉದ್ದೇಶವಿದೆ. ನಿಯೋಜಿತ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದು, ವಲಸೆ ಕಾರ್ಮಿಕರ ಮಕ್ಕಳು, ಕೂಲಿಗಾಗಿ ಹೋಗುವ ಕುಟುಂಬಗಳ ಮಕ್ಕಳು ಸೇರಿ ಯಾವ ಮಗುವು ಲಸಿಕೆಯಿಂದ ವಂಚಿತವಾಗದಂತೆ ನಿಗಾ ಇಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರೇಣುಕಾರಾಧ್ಯ ಮಾತನಾಡಿ, ಭಾರತ ಪೋಲಿಯೋಮುಕ್ತ ದೇಶವಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ 5 ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿನ ನಾಗರಿಕರು ಭಾರತಕ್ಕೆ ಬಂದು ಹೋಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆ ಭಾಗವಾಗಿ ಅಭಿಯಾನ ನಡೆಯುತ್ತಿದೆ ಎಂದರು. ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ.ಚಂದ್ರಶೇಖರ್ ಇತರೆ ಅಧಿಕಾರಿಗಳಿದ್ದರು.