ಜಗಳೂರು: ಬಿಜೆಪಿಗೆ ಎಸ್ಸಿ ಮೋರ್ಚಾ ತಾಲೂಕು ಉಪಾಧ್ಯಕ್ಷ ತುಪ್ಪದಹಳ್ಳಿ ಪೂಜಾರಿ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು, ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇನೆ. ರಾಜಕಾರಣದಲ್ಲಿ ಸಕ್ರಿಯವಾಗಿರುವ ಕಾರಣ ನನ್ನ ವೈಯಕ್ತಿಕ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ಪಕ್ಷದ ಹುದ್ದೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಶಾಸಕ, ಪಕ್ಷದ ಮುಖಂಡ ಎಸ್.ವಿ. ರಾಮಚಂದ್ರ ಅವರ ಬಗ್ಗೆ ಅತಿಯಾದ ಅಭಿಮಾನವಿದೆ. ಉತ್ತಮ ಸಲಹೆ, ಸಹಕಾರ ನೀಡಿದ್ದಾರೆ. ಈ ಹಂತಕ್ಕೆ ನಾನು ಬೆಳೆಯಲು ಪ್ರಮುಖ ಕಾರಣರಾಗಿದ್ದಾರೆ. ಪಕ್ಷದ ಕೆಲಸ ಹೊರತುಪಡಿಸಿ ವೈಯಕ್ತಿಕವಾಗಿ ಅವರೊಂದಿಗೆ ಇರುತ್ತೇನೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಹೆಚ್ಚು ಪಾಲ್ಗೊಂಡು ಜನರ ಪರವಾಗಿ ಕೆಲಸ ಮಾಡುತ್ತೇನೆ. ಅನ್ಯಾಯದ ವಿರುದ್ಧ ಹೋರಾಡುತ್ತೇನೆ. ಇದುವರೆಗೂ ಪಕ್ಷದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಾರಣ ಏನು?
ಬಿಜೆಪಿ ಎಸ್ಸಿ ಮೋರ್ಚಾಕ್ಕೆ ತಾಲೂಕು ಉಪಾಧ್ಯಕ್ಷರಾಗಿದ್ದ ತುಪ್ಪದಹಳ್ಳಿ ಪೂಜಾರಿ ಅವರು ತಮ್ಮ ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿರುವುದು ತಾಲೂಕು ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಪೂಜಾರಿ ಸಿದ್ದಪ್ಪ ಇತ್ತೀಚೆಗಷ್ಟೆ ಬಿಜೆಪಿ ಮಂಡಲ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು. ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಅವರೊಂದಿಗೆ ಗುರುತಿಸಿಕೊಂಡು ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದರು. ಇತ್ತೀಚೆಗೆ ಜಿಲ್ಲಾ ಬಿಜೆಪಿ ಸಂಘಟನೆಯಲ್ಲಿ ಎಸ್‌ಸಿ ಮೋರ್ಚಾಕ್ಕೆ ವಕೀಲ ಹನುಮಂತಪ್ಪ ಎಂಬುವರನ್ನು ನೇಮಕ ಮಾಡಲಾಗಿತ್ತು. ಪಕ್ಷದಲ್ಲಿ ಹಿರಿತನ ಇದ್ದರೂ ಎಸ್‌ಸಿ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡಲಿಲ್ಲ, ಪಕ್ಷಕ್ಕಾಗಿ ದುಡಿದಿರುವುದನ್ನು ನಾಯಕರು ಗುರುತಿಸಲಿಲ್ಲ ಎಂಬ ಬೇಸರವೇ ಪೂಜಾರಿ ಬಸಪ್ಪ ಅವರ ರಾಜೀನಾಮೆಗೆ ಕಾರಣ ಎಂದು ಹೇಳಲಾಗಿದೆ.