ದಾವಣಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಮಹಾನಗರಪಾಲಿಕೆಗಳ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. ಎಂಎಲ್ಸಿ ಕೆ. ಅಬ್ದುಲ್ ಜಬ್ಬಾರ್, ಡಿಸಿ ಜಿ.ಎಂ. ಗಂಗಾಧರಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್, ಉಮಾ ಪ್ರಶಾಂತ್, ರೇಣುಕಾ, ಎಸ್.ಎಚ್. ಗುರುಮೂರ್ತಿ, ಬಿ. ವೆಂಕಟರಾಮ್, ಕೆ.ಎಸ್.ಗೋವಿಂದರಾಜು, ಪಾಂಡುರಾಜ್ ಇತರರಿದ್ದರು.
- ಎಂಎಲ್ಸಿ ಕೆ. ಅಬ್ದುಲ್ ಜಬ್ಬಾರ್ ಹೇಳಿಕೆ
- ಮಹಾನಗರ ಪಾಲಿಕೆಗಳ ನೌಕರರ ರಾಜ್ಯ ಕ್ರೀಡಾಕೂಟ
- ದಾವಣಗೆರೆಯಲ್ಲಿ ಪೌರನೌಕರರ ಮೊದಲ ಕ್ರೀಡಾಹಬ್ಬ
ದಾವಣಗೆರೆ: ಜನರ ಆರೋಗ್ಯ ಪೌರಕಾರ್ಮಿಕರ ಕೈಯಲ್ಲಿದೆ. ಊರು ಸ್ವಚ್ಛವಾಗಿದ್ದಲ್ಲಿ ಜನಾರೋಗ್ಯ ಸುಧಾರಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಹೇಳಿದರು.
ದಾವಣಗೆರೆ ಮಹಾನಗರಪಾಲಿಕೆ ಹಾಗೂ ದಾವಣಗೆರೆ ಪಾಲಿಕೆ ನೌಕರರ ಸಂಘದ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಮಹಾನಗರಪಾಲಿಕೆಗಳ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಊರು, ಬಡಾವಣೆ ಸ್ವಚ್ಛ ಮಾಡುವ ಪೌರಕಾರ್ಮಿಕರು, ಪೌರಸೇವಾ ನೌಕರರಿಗೂ ಕುಟುಂಬಗಳಿವೆ. ಅವರ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳಲ್ಲಿ ತೊಡಗಬೇಕು ಎಂದು ಹೇಳಿದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ ದಾವಣಗೆರೆ ಪಾಲಿಕೆ ನೌಕರರು ಜಿಲ್ಲಾಡಳಿತ ಸೂಚಿಸಿದ ಕೆಲಸವನ್ನು ಚಾಚೂತಪ್ಪದೇ ನಿರ್ವಹಿಸಿದ್ದಾರೆ ಎಂದು ಹೊಗಳಿದರು. ಕ್ರೀಡಾಭ್ಯಾಸವು ದೈನಂದಿನ ಒತ್ತಡ ನೀಗಿ ದಕ್ಷತೆಯಿಂದ ಕೆಲಸ ಮಾಡಲು ಸಹಕಾರಿಯಾಗಿದೆ. ಪೌರಸೇವಾ ನೌಕರರಿಗೆ ಇದು ಚೊಚ್ಚಲ ಕ್ರೀಡಾಕೂಟ ಆದ್ದರಿಂದ ನೌಕರರು ಗಾಯಾಳು ಆಗಬಹುದು. ಸ್ವಲ್ಪ ಸಿದ್ಧತೆ ನಡೆಸಿ ಎಂದು ಕಿವಿಮಾತು ಹೇಳಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ ದಿನವಹಿ ಕೆಲಸದ ನಡುವೆಯೂ ಆರೋಗ್ಯಪೂರ್ಣ ಜೀವನಶೈಲಿ ರೂಢಿಸಿಕೊಳ್ಳಬೇಕು. ಯಾವುದೇ ಕಾಯಿಲೆ ಬಂದರೂ ಎದುರಿಸಲು ಕ್ರೀಡಾ ಚಟುವಟಿಕೆಗಳು ಅತ್ಯವಶ್ಯ. ದಿನದಲ್ಲಿ 2 ಗಂಟೆ ಕಾಲ ವಾಯುವಿಹಾರ, ಓಟ ಅಥವಾ ಕ್ರೀಡೆಗಳ ಅಭ್ಯಾಸ ಮಾಡಬೇಕು ಎಂದರು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ಕ್ರೀಡಾಕೂಟಗಳಿಂದ ಕ್ರೀಡಾಪಟುಗಳ ಅನುಭವಗಳ ವಿನಿಮಯವೂ ಆಗಲಿದೆ. ಕ್ರೀಡಾಕೂಟದಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆಗೆ ಗಮನ ನೀಡಬೇಕು. ಎರಡು ದಿನಗಳ ಕಾಲ ಕೆಲಸ ಮರೆತು ಖುಷಿಯಿಂದ ಆಟವಾಡಿ ಎಂದು ಹೇಳಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಮಾತನಾಡಿ ಪೌರಸೇವಾ ನೌಕರರು ರಾಜಕಾರಣಿಗಳೂ ಸೇರಿ ಇತರರ ಒತ್ತಡದ ನಡುವೆಯೂ ಕೆಲಸ ನಿರ್ವಹಿಸುವುದು ಅನಿವಾರ್ಯ. ಯಾವುದೇ ಸರ್ಕಾರದ ಆಡಳಿತವಿದ್ದಾಗ್ಯೂ ಜನರ ಸೇವೆ ಮಾಡುವ ಅವಕಾಶ ನಿಮಗಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್. ಮಹಾಂತೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ನಗರಪಾಲಿಕೆ ಆಯುಕ್ತೆ ರೇಣುಕಾ, ಚಿತ್ರದುರ್ಗ ನಗರಸಭೆ ಆಯುಕ್ತೆ ಲಕ್ಷ್ಮೀ, ರಾಜ್ಯ ಪಾಲಿಕೆ ನೌಕರರ ಸಂಘದ ಗೌರವಾಧ್ಯಕ್ಷ ಎಸ್.ಎಚ್. ಗುರುಮೂರ್ತಿ, ಉಪಾಧ್ಯಕ್ಷ ಬಿ. ವೆಂಕಟರಾಮ್, ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ದಾವಣಗೆರೆ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪಾಂಡುರಾಜ್, ನಿರ್ದೇಶಕ ಎಂ.ಎಚ್. ಉದಯಕುಮಾರ್, ಪ್ರಿಯಾಂಕಾ, ಮಂಜುನಾಥ ಚವ್ಹಾಣ್, ಎ. ನಾಗರಾಜ್, ಕೆ.ಎಂ. ವೀರೇಶ್ ಇತರರಿದ್ದರು.
ಆರೋಗ್ಯ ಸಂಜೀವಿನಿ ಜಾರಿಗೊಳಿಸಿ
ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪೌರ ನೌಕರರಿಗೆ ಅವಕಾಶ ಸಿಗದಿದ್ದರಿಂದ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸಿದ್ದೇವೆ. ನಮಗೆ ಕೆಜೆಐಡಿ ಕೂಡ ಇಲ್ಲ. ಪೌರಸೇವಾ ನೌಕರರಿಗೆ ಕನಿಷ್ಠ ಆರೋಗ್ಯ ಸಂಜೀವಿನಿ ಜಾರಿಗೊಳಿಸಲು ಶಾಸಕರು ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಪಾಲಿಕೆ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಜಿ. ನಾಗರಾಜ್ ಆಗ್ರಹಿಸಿದರು.
12 ಪಾಲಿಕೆಗಳ 1000 ಪಟುಗಳು ಭಾಗಿ
ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಪೌರ ನೌಕರರ ರಾಜ್ಯ ಕ್ರೀಡಾಕೂಟದಲ್ಲಿ 14 ನಗರಪಾಲಿಕೆಗಳ ಪೈಕಿ ದಾವಣಗೆರೆ, ಶಿವಮೊಗ್ಗ, ಕಲುಬುರಗಿ, ಬೀದರ್, ಮೈಸೂರು, ಮಂಗಳೂರು, ಬೆಳಗಾವಿ, ವಿಜಯಪುರ, ತುಮಕೂರು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಒಟ್ಟು 12 ಪಾಲಿಕೆ) ಒಟ್ಟು 1000ಕ್ಕೂ ಹೆಚ್ಚು ನೌಕರರು ಪಾಲ್ಗೊಂಡಿದ್ದರು.
ದಿನವಿಡೀ ಸ್ವಚ್ಛತೆ, ಕುಡಿವ ನೀರು, ರಸ್ತೆ- ಚರಂಡಿ ನಿರ್ಮಾಣ, ಕಂದಾಯ ವಸೂಲಾತಿ ಕಾರ್ಯದಲ್ಲಿ ತೊಡಗಿರುತ್ತಿದ್ದ ನೌಕರರು, ಪೌರಕಾರ್ಮಿಕರು ಶುಕ್ರವಾರ ಎಲ್ಲವನ್ನೂ ಮರೆತು ಆಟೋಟಗಳಲ್ಲಿ ಮಗ್ನರಾಗಿದ್ದರು. ಎರಡು ದಿನದ ಕೂಟದಲ್ಲಿ ಕ್ರಿಕೆಟ್, ಕಬಡ್ಡಿ, ಷಟಲ್ ಬ್ಯಾಡ್ಮಿಂಟನ್, ಥ್ರೋಬಾಲ್, ಹಗ್ಗ-ಜಗ್ಗಾಟ, 100 ಮೀ. ಓಟ, ಗುಂಡು ಎಸೆತ, ಭರ್ಚಿ ಎಸೆತ ಸ್ಪರ್ಧೆಗಳಿವೆ.
ಸಿಎಂ ಸಿದ್ದರಾಮಯ್ಯ ನಗರಪಾಲಿಕೆ ನೌಕರರ ಬಗ್ಗೆ ಕಾಳಜಿ ಹೊಂದಿದ್ದು, ಅನೇಕ ಪೌರಕಾರ್ಮಿಕರನ್ನು ನೇರಪಾವತಿಗೆ ಒಳಪಡಿಸಿದ್ದಾರೆ. ರಾಜ್ಯದ ಮಹಾನಗರಪಾಲಿಕೆಗಳ ಹೊರ ಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸುವ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡುವೆ. ಪಾಲಿಕೆಗಳ ನೌಕರರ ಹಿತ ಕಾಯಲು ಅಧಿವೇಶನದಲ್ಲಿ ಹೋರಾಟ ಮಾಡಲಿದ್ದೇನೆ. ಪೌರ ನೌಕರರ ಕ್ರೀಡಾಕೂಟ ಪ್ರತಿವರ್ಷವೂ ನಡೆಯಲಿ.