ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ವಲಯ ಪೈಪ್ ಬ್ಯಾಂಡ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತೋಳಹುಣಸೆಯ ಪಿಎಸ್‌ಎಸ್‌ಆರ್ ವಸತಿ ಶಾಲೆಯ ಪೈಪ್ ಬ್ಯಾಂಡ್ ತಂಡವು ಪ್ರಶಸ್ತಿ ಪಡೆಯಿತು. ತೆಲಂಗಾಣ ರಾಜ್ಯದ ಶಾಲಾ ಶಿಕ್ಷಣ ನಿರ್ದೇಶಕ ನವೀನ್ ನಿಕೋಲಸ್, ರಾಧರೆಡ್ಡಿ, ರಾಜೀವ್, ಶ್ರೀನಾಥ ಇತರರಿದ್ದರು.  
ದಾವಣಗೆರೆ

ನವದೆಹಲಿ ಪರೇಡ್‌ಗೆ ಪಿಎಸ್‌ಎಸ್‌ಆರ್ ಶಾಲಾ ತಂಡ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಪೈಪ್ ಬ್ಯಾಂಡ್ ಸ್ಪರ್ಧೆಗೆ ಅರ್ಹತೆ
  • ದಕ್ಷಿಣ ವಲಯದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
  • ಲಯಬದ್ಧ ಪ್ರದರ್ಶನ, ಶಿಸ್ತಿನ ಕವಾಯತಿಗೆ ಸಂದ ಗೌರವ
ದಾವಣಗೆರೆ: ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ತೋಳಹುಣಸೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲಮಾಧ್ಯಮ ವಸತಿ ಶಾಲೆ (ಶಿವಗಂಗೋತ್ರಿ)ಯ ಪೈಪ್ ಬ್ಯಾಂಡ್ ತಂಡವು ಆಯ್ಕೆಯಾಗಿದೆ.
ಭಾರತ ಸರ್ಕಾರ ಹಾಗೂ ತೆಂಗಾಣ ಸರ್ಕಾರದ ಸಂಯುಕ್ತಾಶ್ರಯದಲ್ಲಿ ಹೈದರಾಬಾದ್‌ನ ಜೈ ಶಂಕರ ಕೃಷಿ ವಿಶ್ವವಿದ್ಯಾಲಯ ಕ್ರೀಡಾ ಸಂಕೀರ್ಣದಲ್ಲಿ ನಡೆದ ದಕ್ಷಿಣ ವಲಯ ಪೈಪ್ ಬ್ಯಾಂಡ್ ಸ್ಪರ್ಧೆಯಲ್ಲಿ ಈ ಶಾಲಾ ತಂಡವು ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಗೆಲ್ಲುವ ಮೂಲಕ ರಾಷ್ಟ್ರ ಮಟ್ಟದ ಸ್ಪರ್ಧೆ ಜತೆಗೆ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಗೆ ಅರ್ಹತೆ ಪಡೆದಿದೆ.
ದಕ್ಷಿಣ ಭಾರತದ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 25 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಆಕರ್ಷಕ ವೇಷಭೂಷಣ, ಶಿಸ್ತ್ತುಬದ್ಧ ಕವಾಯತು, ಬ್ಯಾಂಡ್ ಸಮೂಹದ ಲಯಬದ್ಧ ಪ್ರದರ್ಶನದೊಂದಿಗೆ ಆಯ್ಕೆಯಾಗಿದೆ.
ವಿಜೇತ ತಂಡಕ್ಕೆ ಬಹುಮಾನ ವಿತರಿಸಿದ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ಶಾಲಾ ಶಿಕ್ಷಣ ನಿರ್ದೇಶಕ ನವೀನ್ ನಿಕೋಲಸ್, ಎಸ್‌ಸಿಆರ್ ನಿರ್ದೇಶಕ ರಾಧರೆಡ್ಡಿ ಮತ್ತು ಜಂಟಿ ನಿರ್ದೇಶಕ ರಾಜೀವ್, ರಾಜ್ಯ ಬ್ಯಾಂಡ್ ಸಂಚಾಲಕ ಶ್ರೀನಾಥ, ಅಧಿಕಾರಿಗಳಾದ ಜಾವೇದ್, ಸತ್ಯನಾರಾಯಣರೆಡ್ಡಿ ಬಾಲರಾಜು, ಚಂದ್ರಗೌಡ್, ವಿಜಯಸಾಗರ್ ಇದ್ದರು.
ಸಾಧಕ ತಂಡ ಹಾಗೂ ತರಬೇತಿ ನೀಡಿದ ಶಾಲೆಯ ಎನ್‌ಸಿಸಿ ಮತ್ತು ಬ್ಯಾಂಡ್ ಟ್ರೂಪಿನ ನಿರ್ದೇಶಕ ಷಡಕ್ಷರ ದೇವ ಅವರಿಗೆ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ, ಶಾಲೆಯ ಅಧ್ಯಕ್ಷ ಎಸ್.ಎಸ್. ಗಣೇಶ್, ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಮೆಚ್ಚುಗೆ ಸೂಚಿಸಿದ್ದಾರೆ.