ದಾವಣಗೆರೆಯಲ್ಲಿ ಶನಿವಾರ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು. ಸಂಘಟನೆಯ ಮುಖಂಡರಾದ ಹೊನ್ನೂರು ಮುನಿಯಪ್ಪ, ಎಚ್.ಜಿ. ಉಮೇಶ್ ಆವರಗೆರೆ, ಮಧು ತೊಗಲೇರಿ, ಐರಣಿ ಚಂದ್ರು, ಹನುಮಂತಪ್ಪ, ಗಣೇಶಚಾರಿ, ಪಿ.ಪಿ. ಮರುಳಸಿದ್ದಪ್ಪ, ಪ್ರಕಾಶ್, ಲಕ್ಷ್ಮಣ, ನಾಗರಾಜ ರೆಡ್ಡಿ ಭಾಗವಹಿಸಿದ್ದರು. 
ದಾವಣಗೆರೆ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ
  • ವಿದ್ಯುತ್ ಖಾಸಗೀಕರಣಕ್ಕೆ ವಿರೋಧ
ದಾವಣಗೆರೆ : ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸಬೇಕು. ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿ, ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿ ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು. ತಹಸೀಲ್ದಾರ್ ರಾಜೇಶ್ ಅವರಿಗೆ ಮನವಿ ಸಲ್ಲಿಸಿದರು.
ಯೂರಿಯಾ ಮತ್ತು ಡಿಎಪಿ ಗೊಬ್ಬರದ ಕೊರತೆ ಉಂಟಾಗಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಗೊಬ್ಬರಗಳು ಮಾರಾಟವಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು ಗೊಬ್ಬರದ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಅಭಾವ ಇದೆ. ರೈತರಿಗೆ ಮೋಸವಾಗುತ್ತಿದ್ದರೂ ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿದರು.
ಡೀಸೆಲ್ ಮತ್ತು ಪೆಟ್ರೋಲ್, ಅಡುಗೆ ಅನಿಲದ ಬೆಲೆಗಳು ತಿಂಗಳಲ್ಲಿ ಹಲವು ಬಾರಿ ಏರಿಕೆಯಾಗಿವೆ. ದುಪ್ಪಟ್ಟು ದರದಿಂದಾಗಿ ಸಾಮಾನ್ಯ ಜನರು ಮತ್ತು ರೈತರು ತೊಂದರೆಗೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸಿ ಜನವಿರೋಧಿ ಆಡಳಿತ ನಡೆಸುತ್ತಿವೆ. ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಹೋರಾಟವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ರಾಜ್ಯದ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಮತ್ತು ಜೆಸ್ಕಾಂ ನಿಗಮಗಳ 19 ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ವಿದ್ಯುತ್ ವಿತರಣಾ ಕೇಂದ್ರಗಳನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ವಹಿಸುತ್ತಿರುವುದನ್ನು ವಿರೋಧಿಸುವುದಾಗಿ ತಿಳಿಸಿದರು.
ಖಾಸಗಿ ಕಂಪನಿಗಳು ತಮ್ಮ ಲಾಭವನ್ನೆ ಮುಖ್ಯವಾಗಿ ನೋಡುತ್ತಾರೆ ಹೊರತು ಜನ ಸಾಮಾನ್ಯರ ಬೇಕು ಬೇಡಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಸರ್ಕಾರಗಳು ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಮತ್ತು ವಿದ್ಯುತ್ ವಿತರಣಾ ಕೇಂದ್ರಗಳ ಖಾಸಗೀಕರಣವನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಸಂಘಟನೆಯ ಮುಖಂಡರಾದ ಹೊನ್ನೂರು ಮುನಿಯಪ್ಪ, ಎಚ್.ಜಿ. ಉಮೇಶ್ ಆವರಗೆರೆ, ಮದು ತೊಗಲೇರಿ, ಐರಣಿ ಚಂದ್ರು, ಹನುಮಂತಪ್ಪ, ಗಣೇಶಚಾರಿ, ಪಿ.ಪಿ. ಮರುಳಸಿದ್ದಪ್ಪ, ಪ್ರಕಾಶ್, ಲಕ್ಷ್ಮಣ, ನಾಗರಾಜ ರೆಡ್ಡಿ ಭಾಗವಹಿಸಿದ್ದರು.