ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಪ್ರತಿಭಟನೆ ನಡೆಸಿತು. protest
ದಾವಣಗೆರೆ

ಜಗಳೂರಿನಲ್ಲಿ ಬಿಸಿಯೂಟ ತಯಾರಕರ ಫೆಡರೇಷನ್‌ನಿಂದ ಪ್ರತಿಭಟನೆ

ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನಕ್ಕೆ ಆಗ್ರಹ

ಜಗಳೂರು: ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ, ಭವಿಷ್ಯ ನಿಧಿ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಸಮಿತಿಯ ನೇತೃತ್ವದಲ್ಲಿ ನೂರಾರು ಬಿಸಿಯೂಟ ತಯಾರಕರು ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ ತನ್ಮೂಲಕ ಕಲಿಕಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಬಿಸಿಯೂಟ ತಯಾರಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸರ್ಕಾರ ಕೆಲಸಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ ಎಂದು ಆರೋಪಿಸಿದರು.

ಬಿಸಿಯೂಟ ಯೋಜನೆಯಲ್ಲಿ ಆರಂಭದಿಂದ ಮಾಸಿಕ ವೇತನ 650, 450, 400 ರೂ. ಸಂಭಾವನೆ ಪಡೆಯುತ್ತಾ ಅನೇಕ ವರ್ಷಗಳಿಂದ ದುಡಿಯುತ್ತಾ ಬಂದಿದ್ದಾರೆ. ಆದರೆ, ಅವರಿಗೆ ಇದುವರೆಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ ಸಂಘಟನೆ ರಾಜ್ಯಾಧ್ಯಕ್ಷ ಆವರಗೆರೆ ಚಂದ್ರು ದೂರಿದರು. ಬಿಸಿಯೂಟ ತಯಾರಕರು ಈವರೆಗೂ ಅಲ್ಪ ಸಂಭಾವನೆಯಿಂದ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೂ ಕನಿಷ್ಟ ವೇತನ ನಿಗದಿಪಡಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಸಿಯೂಟ ತಯಾರಕರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಂಭಾವನೆ ಯನ್ನು ಪ್ರಧಾನ ಮಂತ್ರಿಗಳು ಹೆಚ್ಚಿಸಿದ್ದು ಅದರಂತೆ ಬಿಸಿ ಯೂಟ ತಯಾರಕರ ಸಂಭಾವನೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಿಸಿಯೂಟ ತಯಾರಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ಕನಿಷ್ಟ ವೇತನ ನಿಗದಿಪಡಿಸಬೇಕು. ನ್ಯಾಯಾಲಯವು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಇದರನ್ವಯ ಬಿಸಿಯೂಟ ತಯಾರಕರು ಸಂಘಟಿತ ಕಾರ್ಮಿಕರಂತೆ ಪರಿಗಣಿಸಿ ಕನಿಷ್ಟ ವೇತನ ಮಾಸಿಕ 18 ಸಾವಿರ ರೂ. ನೀಡಬೇಕು ಎಂದು ಮನವಿ ಮಾಡಿದರು.

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಪದಾಧಿಕಾರಿಗಳಾದ ಕೆಚ್ಚೇನಹಳ್ಳಿ ಭಾರತಿ, ಗೀತಮ್ಮ, ರೇಣುಕಮ್ಮ, ನಾಗವೇಣಿ, ಲಕ್ಷ್ಮೀ ಮತ್ತಿತರರಿದ್ದರು.