ದಾವಣಗೆರೆಯಲ್ಲಿ ಐಕಾಂತಿಕ ಜಾಗತಿಕ ಪಂಗಡ ಹಮ್ಮಿಕೊಂಡಿದ್ದ ಪಾರಂಪರಿಕ ಬೀಜೋತ್ಸವದಲ್ಲಿ ಬೀಜಮಾತೆ ಬೀಬಿ ಜಾನ್, ಶಿವಾನಂದ ಕಳವೆ, ತಿಪ್ಪೇಸ್ವಾಮಿ, ಡಾ.ಟಿ.ಎನ್. ದೇವರಾಜ್, ಜಾಕೋಬ್ ನೆಲ್ಲಿತ್ತಾನಂ, ರಾಘವ, ಸತೀಶ್ ವಲ್ಲೇಪುರೆ ಇತರರಿದ್ದರು.  
ದಾವಣಗೆರೆ

ದೇಸಿ ಬೀಜ ರಕ್ಷಣೆಯೇ ಆರೋಗ್ಯದ ರಹದಾರಿ

ಪ್ರಮುಖ ಮುಖ್ಯಾಂಶಗಳು

  • ಮಿಶ್ರ ಬೆಳೆ ಬೇಸಾಯದತ್ತ ರೈತರು ಒತ್ತು ನೀಡಲಿ
  • ಧಾರವಾಡದ ಬೀಜಮಾತೆ ಬೀಬಿ ಜಾನ್ ಅನಿಸಿಕೆ
  • ದಾವಣಗೆರೆಯಲ್ಲಿ ಪಾರಂಪರಿಕ ಬೀಜೋತ್ಸವ
ದಾವಣಗೆರೆ: ದೇಸಿ ಬೀಜಗಳ ತಳಿ ಸಂರಕ್ಷಣೆಯಿಂದ ಆರೋಗ್ಯ ಸುಧಾರಣೆ ಆಗಲಿದೆ. ಈ ವಿಚಾರದಲ್ಲಿ ಸರ್ಕಾರ ಸಹಕಾರ ನೀಡಿದರೆ ಸಾವಯವ ಕೃಷಿಗೂ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಧಾರವಾಡದ ಬೀಜಮಾತೆ ಬೀಬಿ ಜಾನ್ ಹೇಳಿದರು.
ನಗರದ ದೃಶ್ಯಕಲಾ ಕಾಲೇಜು ಆವರಣದಲ್ಲಿ ಐಕಾಂತಿಕ ಜಾಗತಿಕ ಪಂಗಡದ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಪಾರಂಪರಿಕ ಬೀಜೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಭಾಗದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆ ಆಗುತ್ತಿದೆ. ಸಿರಿಧಾನ್ಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕಿದೆ. ಈ ವಿಚಾರದಲ್ಲಿ ರೈತರು ಸರ್ಕಾರವನ್ನು ಒತ್ತಾಯಿಸುವ ಜತೆಗೆ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ದೇಸಿ ಬೀಜಗಳ ತಳಿ ರಕ್ಷಣೆ ಉದ್ದೇಶದ ಈ ಉತ್ಸವ, ದೇಶಿ ಬೀಜ ಬ್ಯಾಂಕ್ ಸ್ಥಾಪನೆಗೆ ಪ್ರೋತ್ಸಾಹ ದೊರಕಿದೆ ಎಂದ ಅವರು, ರೈತರು ಮಿಶ್ರ ಬೆಳೆ ಪದ್ಧ್ದತಿಯತ್ತ ಆದ್ಯತೆ ನೀಡುವ ಮೂಲಕ ಭೂಮಿಯ ಫಲವತ್ತತೆ ಹಾಗೂ ಆರೋಗ್ಯ ಕಾಪಾಡಬೇಕು ಎಂದು ಹೇಳಿದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ್ ಮಾತನಾಡಿ, ದೇಸಿ ಬೀಜಗಳ ಪ್ರದೇಶ ವಿಸ್ತರಣೆ ಆಗಬೇಕಿದೆ. ಬೀಜಗಳ ಉಳಿವಿನ ಸದುದ್ದೇಶದ ಇಂತಹ ಕಾರ್ಯಕ್ರಮಗಳು ಸರಳತೆ ಹಾಗೂ ನೆಮ್ಮದಿಯ ಬದುಕಿಗೆ ಪೂರಕ ಆಗಿವೆ. ಸೃಜನಶೀಲ, ಪರಿಸರಸ್ನೇಹಿ ಮತ್ತು ಸಮುದಾಯಮುಖಿ ಜೀವನಶೈಲಿಗೆ ಈ ಕಾರ್ಯಕ್ರಮ ಉತ್ತೇಜಿಸಲಿದೆ ಎಂದರು.
ಆಹಾ ತಯಾರಿಕೆಗೆ ಬಳಸುವ ವಸ್ತುಗಳನ್ನು ಸರಾಸರಿ ಸಾವಿರ ಕಿ.ಮೀ.ಗಿಂತ ಹೆಚ್ಚು ದೂರದಿಂದ ಸಾಗಣೆ ಮಾಡಿಕೊಂಡಾಗ ಹೆಚ್ಚುವರಿ ವೆಚ್ಚ ಆಗಲಿದೆ. ಇದನ್ನು ತಡೆಯಲು ಸ್ಥಳೀಯವಾಗಿ ಬೆಳೆದ ಉತ್ಪನ್ನಗಳಿಂದ ತಯಾರಿಸಲು ಪ್ರೇರಣೆ ನೀಡಬೇಕಿದೆ ಎಂದರು.
ಕೃಷಿ ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ ತಾಯಿಯಂತೆ ಮಗಳು ಎಂಬ ಗಾದೆಯಂತೆ ಬೀಜ ಹಾಕಿದಂತೆ ಬೆಳೆ ಎಂಬುದೂ ಸತ್ಯವಾಗಿದೆ. ಗುಣಮಟ್ಟದ ಬೀಜ ಬಿತ್ತನೆಯಿಂದ ಶೇ60ರಷ್ಟು ಇಳುವರಿ ನಿರೀಕ್ಷಿಸಬಹುದು. ದೇಸಿ ಬೀಜಗಳ ಸಂರಕ್ಷಣೆಗೆ ಸರ್ಕಾರ ಹಾಗೂ ಸಂಘಟನೆಗಳು ಕೂಡ ಒತ್ತು ನೀಡುತ್ತಿವೆ ಎಂದರು.
ಕಡಿಮೆ ಬೆಲೆಗೆ ರೈತರಿಂದಲೇ ನೇರವಾಗಿ ದೇಸಿ ಬೀಜ ಮಾರಾಟವಾದರೆ ಬೀಜ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಇಂತಹ ಬೀಜಗಳ ಮೂಲಕ ಮನೆಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳಬೇಕಿದೆ. ದೇಸಿ ಬೀಜಗಳಿಂದ ಆರೋಗ್ಯ ನಮ್ಮನ್ನು ಹಿಂಬಾಲಿಸಲಿದೆ. ಇದರಿಂದ ವಿಟಮಿನ್ ಬೀಜಗಳನ್ನು ನಂಬುವ ಅಗತ್ಯ ಬಾರದು ಎಂದು ತಿಳಿಸಿದರು.
ಕೃಷಿಯೆಂಬ ಹತ್ತು ತಲೆಮಾರಿನ ಜ್ಞಾನ ಹಾಗೂ ಬದಲಾದ ಹವಾಮಾನ ಕುರಿತು ಮಾತನಾಡಿದ ಕೃಷಿ ಮತ್ತು ಪರಿಸರ ಬರಹಗಾರ ಶಿವಾನಂದ ಕಳವೆ, ಹೆದ್ದಾರಿಗಳಾದಷ್ಟು ಅಡಕೆ ಮರಗಳು ಹೆಚ್ಚಾಗಿವೆ. ಪ್ರಾದೇಶಿಕ ಬೆಳೆವಾರು ರೈತರ ಸಂಕಷ್ಟಗಳೂ ಇವೆ. ಪ್ರತಿ ಬೆಳೆಯ ಹಿಂದೆ ಬೆಳೆದು ಬಂದ ಜ್ಞಾನದಿಂದಾಗಿ ಹಿಂದಿನ ತಳಿಗಳು ಈಗಲೂ ಉಳಿದಿವೆ ಎಂದರು.
10 ಮಿ.ಮೀ. ಮಳೆಯಾದರೆ 8 ಲಕ್ಷ ರೂ. ಆದಾಯ ತೆಗೆಯಬಹುದು ಎಂಬ ಕಲ್ಪನೆ ರೈತರಲ್ಲಿದೆ. 1800ರ ಕಾಲದಲ್ಲಿ ಫ್ರಾನ್ಸಿಸ್ ಬುಕನನ್ ಅಭ್ಯಾಸ ಮಾಡಿದ್ದ ಬೆಳೆಗಳ ತಳಿಗಳಲ್ಲಿ 2001ರಲ್ಲೂ ಕೆಲವು ಉಳಿದಿದ್ದವು. ಇಂತಹ ಬೀಜ ತಳಿಗಳ ಪರಂಪರೆ ಬೇಕಾಗಿದೆ. ಹಿಂದಿನ ಕೃಷಿ ಜ್ಞಾನಿಗಳಲ್ಲಿ ಪಶು ಪ್ರೀತಿಯೂ ಇತ್ತು ಎಂದು ಹೇಳಿದರು.
ಛತ್ತೀಸ್‌ಘಡದ ಭಾರತ್ ಬೀಜ್ ಮಂಚ್‌ನ ಸಂಚಾಲಕ ಜಾಕೋಬ್ ನೆಲ್ಲಿತ್ತಾನಂ, ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ.ಸತೀಶ್ ಕುಮಾರ್ ಪಿ. ವಲ್ಲೇಪುರೆ, ಮೈಸೂರಿನ ಸಚ್ಚು, ಐಕಾಂತಿಕ ಜಾಗತಿಕ ಪಂಗಡದ ರೂವಾರಿ ರಾಘವ್ ಇತರರಿದ್ದರು.
ಬೀಜ ಹಾಗೂ ಧಾನ್ಯ ವೈವಿಧ್ಯ
ಪಾರಂಪರಿಕ ಬೀಜೋತ್ಸವದಲ್ಲಿ ವಿವಿಧ ಬೀಜ ಮಾರಾಟಗಾರರು ತಂತಮ್ಮ ಮಳಿಗೆಗಳಲ್ಲಿ ಬೀಜ ವೈವಿಧ್ಯವನ್ನೇ ಅನಾವರಣಗೊಳಿಸಿದರು.
ತಮಿಳುನಾಡಿನ ಸೇಲಂ, ಕೊಂಡಕೊಪ್ಪಂ, ಹೈದರಾಬಾದ್, ಹಾವೇರಿ ಜಿಲ್ಲೆಯ ಶಿಗ್ಗಾಂವ್ ಹಾಗೂ ತಿಮ್ಮಾಪುರ, ಧಾರವಾಡ ತಾಲೂಕಿನ ಕುಂದಗೋಳ, ಮೈಸೂರಿನ ಬಂಡಿಪಾಳ್ಯ, ಬೆಳ್ತಂಗಡಿ, ಹೊಳಲ್ಕೆರೆ, ಚಿಕ್ಕಜಾಜೂರಿನಿಂದ ಹಲವರು ತಂತಮ್ಮ ಧಾನ್ಯ ಸರಕು, ಆಯುರ್ವೇದ ವಸ್ತುಗಳನ್ನು ಪ್ರದರ್ಶಿಸಿದರು.
ಹಲಸು, ಪಪ್ಪಾಯ, ಚಂದ್ರ ಬಾಳೆ, ಏಲಕ್ಕಿ ಬಾಳೆ, ವಾಟರ್ ಆ್ಯಪಲ್, ಜಿಲಿಂಬ್ರೆ, ದೀವಿ ಹಲಸು, ತೋತಾಪುರಿ, ಉಪ್ಪಿನಕಾಯಿ ಮಾನವಿಕಾಯಿ, ತೆಂಗಿನಕಾಯಿ, ತೆಂಗಿನ ಗಿಣ್ಣ ಎಳ್ಳ- ಬೇಲದ ಹಣ್ಣಿನ ಜ್ಯೂಸ್, ನೀರಾ (ಕಲ್ಪರಸ) ಪೇಯ, ಜೇನು, ಜೋಳ ಗೋಧಿ- ವೆನಿಲ್ಲಾದಿಂದ ತಯಾರಾದ ರುಚಿಕರ ತಿನಿಸುಗಳು ನೋಡುಗರ ಗಮನ ಸೆಳೆದವು.
ಮಡಕೆಗಳಿಂದ ಮಾಡಿದ ಬಳಕೆ ವಸ್ತುಗಳು, ನೀರಿನ ಹೂಜಿಗಳಿದ್ದವು. ರೋಸ್ ವಾಟರ್, ನೇರಳೆ, ಕನಾಕಾಮೃತ ಹಲಸು, ದಾಲಚಿನ್ನಿ ಚಕ್ಕೆ, ರಾಮಫಲ, ಕಾಡು ಬಸಳೆ ಇತ್ಯಾದಿ ಗಿಡಗಳು ಮಾರಾಟಕ್ಕಿದ್ದವು. ಬೀಜಗಳಿಂದಲೇ ತಯಾರಾದ ಆಭರಣಗಳು ಹೆಂಗಳೆಯರನ್ನು ಸೆಳೆದರೆ, ದೇಸಿ ಉತ್ಪನ್ನಗಳಿಂದಲೇ ನಿರ್ಮಿಸಿದ ಸೆಲ್ಫೀ ಪಾಯಿಂಟ್ ದಿನವಿಡೀ ಬಿಜಿಯಾಗಿತ್ತು.