ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ ಪ್ರಕರಣಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡ ಸ್ವತ್ತುಗಳನ್ನು ಇಲಾಖೆ ವತಿಯಿಂದ ವಾರಸುದಾರರಿಗೆ ದಾವಣಗೆರೆಯಲ್ಲಿ ಶುಕ್ರವಾರ ಹಿಂದಿರುಗಿಸಲಾಯಿತು. ಡಾ. ಬಿ.ಆರ್. ರವಿಕಾಂತೇಗೌಡ, ಉಮಾ ಪ್ರಶಾಂತ್, ಪರಮೇಶ್ವರ ಹೆಗಡೆ, ಶರಣಬಸವೇಶ್ವರ ಬಿ. ಇನ್ನಿತರ ಅಧಿಕಾರಿಗಳು ಇದ್ದರು. 
ದಾವಣಗೆರೆ

ವಾರಸುದಾರರಿಗೆ 20.38 ಕೋಟಿ ಮೌಲ್ಯದ ಸ್ವತ್ತು ವಾಪಸ್

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಇಲಾಖೆಯಿಂದ ಕ್ರಮ
  • ವಿವಿಧ ಠಾಣೆಗಳ ಪ್ರಕರಣ ಪತ್ತೆ
  • ಕವಾಯತು ಪರಿವೀಕ್ಷಣೆ
ದಾವಣಗೆರೆ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ ಪ್ರಕರಣಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡ ಅಂದಾಜು 20.38 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಇಲಾಖೆ ವತಿಯಿಂದ ವಾರಸುದಾರರಿಗೆ ಶುಕ್ರವಾರ ಹಿಂದಿರುಗಿಸಲಾಯಿತು.
ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರ ನೇತೃತ್ವದಲ್ಲಿ, ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಉಪಸ್ಥಿತಿಯಲ್ಲಿ ಸ್ವತ್ತು ಹಿಂದಿರುಗಿಸುವ ಪರೇಡ್ ಹಮ್ಮಿಕೊಳ್ಳಲಾಗಿತ್ತು.
ನ. 30ರ ವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಸ್ವತ್ತು ಕಳವು ಪ್ರಕರಣಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡಗಳು ಕಾರ್ಯಾಚರಣೆ ನಡೆಸಿ ಭೇದಿಸಿದ್ದವು. ಜತೆಗೆ ಕಳವಾಗಿದ್ದ ಸ್ವತ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದರು. ಆ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲು ನ್ಯಾಯಾಲಯದ ಅನುಮತಿ ಪಡೆಯಲಾಗಿತ್ತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗಿಸ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ.ಎಸ್, ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಬಿ, ಡಿಎಆರ್ ಡಿವೈಎಸ್ಪಿ ಪ್ರಕಾಶ್ ಪಿ.ಬಿ. ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಅಪರಾಧ ವಿಭಾಗದ ಸಿಬ್ಬಂದಿ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಇದೇ ವೇಳೆ ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಮಹಾ ನಿರೀಕ್ಷಕರ ಸೇವಾ ಕವಾಯತು ಹಮ್ಮಿಕೊಳ್ಳಲಾಗಿತ್ತು. ಐಜಿಪಿ ಅವರು ಸೇವಾ ಕವಾಯತು ಗೌರವ ವಂದನೆ ಸ್ವೀಕರಿಸಿ, ಕವಾಯತು ಪರಿವೀಕ್ಷಣೆ ನಡೆಸಿದರು.
ಚಿನ್ನ, ಬೆಳ್ಳಿ, ನಗದು
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಕಾರ್ಯಾಚರಣೆ ನಡೆಸಿ ಒಟ್ಟು 173 ಪ್ರಕರಣಗಳನ್ನು ಪತ್ತೆ ಮಾಡಿ, ಅಂದಾಜು 19.64 ಕೋಟಿ ರೂ. ಮೌಲ್ಯದ 24 ಕೆಜಿ 726 ಗ್ರಾಂ ತೂಕದ ಬಂಗಾರ ಆಭರಣ ಮತ್ತು 24.35 ಲಕ್ಷ ರೂ. ಮೌಲ್ಯದ 26 ಕೆಜಿ 672 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, ಒಟ್ಟು 85.68 ಲಕ್ಷ ರೂ. ನಗದು ಹಣ, 46.28 ಲಕ್ಷ ರೂ. ಮೌಲ್ಯದ 90 ವಿವಿಧ ಮಾದರಿ ವಾಹನಗಳು, 73.80 ಲಕ್ಷ ರೂ. ಮೌಲ್ಯದ 492 ವಿವಿಧ ಮಾದರಿಯ ಮೊಬೈಲ್ಗಳು (2025 ಸಾಲಿನಲ್ಲಿ) ಹಾಗೂ 16.81 ಲಕ್ಷ ರೂ. ಮೌಲ್ಯದ ಕೃಷಿ ಉಪಕರಣಗಳು ಮತ್ತು ಇತರೆ ವಸ್ತುಗಳು ಸೇರಿ ಒಟ್ಟು 20.38 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.