ದಾವಣಗೆರೆ ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ, ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿ.ಎಂ. ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್, ಮಲ್ಲಾ ನಾಯಕ್ ಇದ್ದರು. 
ದಾವಣಗೆರೆ

ಬರ ನಿರೋಧಕ ಬೆಳೆ ಪದ್ಧತಿಗೆ ಆದ್ಯತೆ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚನೆ
  • ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ
ದಾವಣಗೆರೆ : ಜಿಲ್ಲೆಯಲ್ಲಿ ಕೃತಿಕಾ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಶೇ. 100ರಷ್ಟು ಬರಗಾಲ ಆವರಿಸುವ ಆತಂಕ ಎದುರಾಗಿದ್ದು, ರೈತರು ಯಾವುದೇ ಜಮೀನನ್ನು ಪಾಳು ಬಿಡದಂತೆ ಕಡ್ಡಾಯವಾಗಿ ಬರ ನಿರೋಧಕ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು. ಕುಡಿಯುವ ನೀರು, ಉದ್ಯೋಗ ಸೃಷ್ಟಿ, ಮೇವು ಸಂಗ್ರಹಣೆಗೆ ಆದ್ಯತೆ ಕೊಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿ.ಪಂ. ಸಭಾಂಗಣದಲ್ಲಿ ಬುಧವಾರ, ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬ ತಹಸೀಲ್ದಾರರು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ವಿಸ್ತರಣಾಧಿಕಾರಿಗಳು, ಪಿಡಿಒ ಹಾಗೂ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಿರಬೇಕು ಎಂದು ತಿಳಿಸಿದರು.
ಪ್ರತಿ 15 ದಿನಗಳಿಗೊಮ್ಮೆ ರೈತರೊಂದಿಗೆ ಸಭೆ ನಡೆಸಿ ನೀರು, ಮೇವು, ರಸಗೊಬ್ಬರ ಹಾಗೂ ಬೆಳೆಗಳ ಬಗ್ಗೆ ಚರ್ಚಿಸಬೇಕು. ಜಿಲ್ಲೆಯ ಎಲ್ಲ ಮಳೆ ಮಾಪನ ಕೇಂದ್ರಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಖುದ್ದಾಗಿ ಪರಿಶೀಲಿಸಬೇಕು. ತಹಸೀಲ್ದಾರರು ಕನಿಷ್ಠ 5 ಕೇಂದ್ರಗಳಿಗಾದರೂ ಭೇಟಿ ನೀಡಬೇಕು ಎಂದರು.
ರೈತರನ್ನು ಮನವೊಲಿಸಿ ನವಧಾನ್ಯಗಳು, ನವಣೆ, ಶೇಂಗಾ, ದ್ವಿದಳ ಧಾನ್ಯಗಳು, ಕಡಲೇಕಾಯಿ, ತೊಗರಿ, ಸೋಯಾ ಹಾಗೂ ಸಜ್ಜೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಆಗಸ್ಟ್ ಅಥವಾ ಅಕ್ಟೋಬರ್ ಅಂತ್ಯದೊಳಗೆ ಹುರುಳಿ ಬೆಳೆಯನ್ನು ಬಿತ್ತನೆ ಮಾಡಲು ಅವಕಾಶವಿದೆ. ಜಮೀನನ್ನು ಖಾಲಿ ಬಿಡದಂತೆ ನೋಡಿಕೊಳ್ಳಬೇಕು. ಅತಿ ಹೆಚ್ಚು ನೀರು ಬೇಡುವ ಬಾಳೆ, ಅಡಿಕೆ ಮುಂತಾದ ಹೊಸ ತೋಟಗಾರಿಕಾ ಬೆಳೆಗಳ ನಾಟಿಯನ್ನು ಮುಂದೂಡುವಂತೆ ರೈತರಿಗೆ ಮನದಟ್ಟು ಮಾಡಬೇಕು ಎಂದು ತಿಳಿಸಿದರು.
ಪ್ರಸ್ತುತ ಸನ್ನಿವೇಶದಲ್ಲಿ ಬೆಳೆ ವಿಮೆ ಪ್ರಕ್ರಿಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ನರೇಗಾ ಹಾಗೂ ಕೃಷಿ ಇಲಾಖೆಯಡಿ ನಿರ್ಮಿಸಲಾದ ಕೃಷಿ ಹೊಂಡ ಮತ್ತು ಚೆಕ್‌ಡ್ಯಾಂಗಳಲ್ಲಿನ ಕಳೆ ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ, ಹೂಳೆತ್ತಿ ಮಳೆ ನೀರನ್ನು ಹಿಡಿದಿಡಲು ಸಜ್ಜುಗೊಳಿಸಬೇಕು ಎಂದು ಹೇಳಿದರು.

ಮೇವು ಕೊರತೆ ಇಲ್ಲ

ಜಿಲ್ಲೆಯಲ್ಲಿ 63 ವಾರಗಳಿಗಾಗುವಷ್ಟು ಮೇವು ಲಭ್ಯವಿದೆ, ಮೇವಿನ ಕೊರತೆ ಇಲ್ಲ ಎಂದು ಡಿಸಿ ಗಂಗಾಧರ ಸ್ವಾಮಿ ತಿಳಿಸಿದರು.
ಆರ್.ಐ, ವಿ.ಎ ಹಾಗೂ ಪಿಡಿಒಗಳು ಹೆಚ್ಚು ಮೇವಿರುವ ರೈತರನ್ನು ಮನವೊಲಿಸಿ, ಪ್ರತಿ ಕಡೆಯಿಂದ ಒಂದೊಂದು ಹೊರೆ ಮೇವನ್ನು ಸಂಗ್ರಹಿಸಿ ಸುರಕ್ಷಿತವಾಗಿ ದಾಸ್ತಾನು ಮಾಡಬೇಕು. ಜಿಲ್ಲೆಯ ಮೇವು ಬೇರೆ ಜಿಲ್ಲೆಗಳಿಗೆ ರಫ್ತಾಗದಂತೆ ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲ. ರಸಗೊಬ್ಬರ ದಾಸ್ತಾನನ್ನು ಪ್ರತಿದಿನ ಪರಿಶೀಲಿಸಬೇಕು. ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಆಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗದಂತೆ, ಪ್ರತಿ 15 ದಿನಗಳಿಗೊಮ್ಮೆ ಕೊಳವೆಬಾವಿಗಳ ಅಂತರ್ಜಲ ಮಟ್ಟದ ಸ್ಥಿತಿಗತಿಯನ್ನು ಕಡ್ಡಾಯವಾಗಿ ವೈಯಕ್ತಿಕವಾಗಿ ಪರಿಶೀಲಿಸಿ ಜಿಲ್ಲಾಧಿಕಾರಿ ಹಾಗೂ ಸಿಇಒ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಕಾಲುವೆಗಳಿಗೆ ಸದ್ಯ ನೀರು ಬಿಡದಿರುವ ಕಾರಣ, ಬಾಕಿ ಇರುವ ಎಲ್ಲ ದುರಸ್ತಿ ಕಾಮಗಾರಿಗಳ ಪ್ರಸ್ತಾವನೆಯನ್ನು ಸಿಎಂ ಕಚೇರಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಮನುಷ್ಯ ಶಕ್ತಿಯನ್ನು ಬಳಸಿ ಮಾಡುವ ಹೂಳೆತ್ತುವ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಲು ಹಾಗೂ ಯಂತ್ರೋಪಕರಣಗಳ ಅಗತ್ಯವಿರುವ ಕಾಮಗಾರಿಗಳ ವರದಿಯನ್ನು ಪ್ರತ್ಯೇಕವಾಗಿ ಸಲ್ಲಿಸುವಂತೆ ಸೂಚನೆ ನೀಡಿದರು.

ಕ್ರಿಯಾಯೋಜನೆ ರೂಪಿಸಿ

ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಬರ ಪೀಡಿತ ಪ್ರದೇಶಗಳ ಜನರಿಗೆ ಉದ್ಯೋಗ ನೀಡಲು ವಿಬಿಜಿ ರಾಮ್‌ಜಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯು 10ರಿಂದ 12 ದಿನಗಳ ಒಳಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಪ್ರಸಕ್ತ ವರ್ಷ ಬರಗಾಲ ಎದುರಾಗುವ ಸಾಧ್ಯತೆ ಇರುವುದರಿಂದ, ಕಳೆದ ಮೇ ತಿಂಗಳಿನಿಂದ ಜಿಲ್ಲೆಯಲ್ಲಿ ಸುಮಾರು 6 ಲಕ್ಷ ಕಾರ್ಮಿಕರು ನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಷ್ಟೇ ಪ್ರಮಾಣದ ಮಾನವ ದಿನಗಳನ್ನು ಸೃಜಸಲು ಹಾಗೂ ರಾಜ್ಯ ಸರ್ಕಾರದಿಂದಲೂ ಹೆಚ್ಚಿನ ಗುರಿ ಪಡೆಯಲು ಕ್ರಮ ವಹಿಸಲಾಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆಯನ್ನು ಸಹಾಯವಾಣಿ ಮುಖಾಂತರ ನಿರ್ವಹಿಸಲಾಗುತ್ತಿದೆ. ಮರೇನಹಳ್ಳಿ ಮತ್ತು ಉಡಾಳ ಗ್ರಾಮಗಳಲ್ಲಿ ಕಂಡುಬಂದಿದ್ದ ನೀರಿನ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು.
ತುರ್ತು ಕ್ರಿಯಾ ಯೋಜನೆಯಡಿ ಬಿಡುಗಡೆಯಾಗಿರುವ 3 ಕೋಟಿ ರೂ. ಅನುದಾನದಲ್ಲಿ ಹೊಸ ಬೋರ್‌ವೆಲ್‌ಗಳ ಕೊರೆಯುವಿಕೆ, ರೀ-ಡ್ರಿಲ್ಲಿಂಗ್ ಹಾಗೂ ಇತರೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಶೇ. 90ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾ ನಾಯಕ್ ಸಭೆಯಲ್ಲಿದ್ದರು.