ನವದೆಹಲಿಯಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ರಾಜ್ಯದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ರಾಧಾಕೃಷ್ಣ, ಸಾಗರ್ ಖಂಡ್ರೆ, ಜಿ. ಕುಮಾರ್ ನಾಯಕ್, ಕೆ. ರಾಜಶೇಖರ್ ಹಿಟ್ನಾಳ್ ಮತ್ತು ಇ. ತುಕಾರಾಂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಮನವಿ ಸಲ್ಲಿಸಿದರು.
- ಕೇಂದ್ರ ಸಚಿವ ಕಿರಣ್ ರಿಜಿಜುಗೆ ಸಂಸದರ ಮನವಿ
- ಡಾ.ಪ್ರಭಾ ಮಲ್ಲಿಕಾರ್ಜುನ್ ನೇತೃತ್ವ
ದಾವಣಗೆರೆ : ಕಲ್ಯಾಣ ಕರ್ನಾಟಕ ಭಾಗದ ಅಲ್ಪಸಂಖ್ಯಾತ ಸಮುದಾಯಗಳ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೋರಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಂಸದರು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಮನವಿ ಸಲ್ಲಿಸಿದರು.
ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಒಳಪಡುವ ಹರಪನಹಳ್ಳಿ ತಾಲೂಕಿನಲ್ಲಿ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಅಗತ್ಯ ಅನುದಾನ ಹಾಗೂ ಮಂಜೂರಾತಿ ನೀಡುವಂತೆ ಸಂಸದರು ಕೋರಿದರು.
ವಿಶೇಷವಾಗಿ ಶಾಲಾ ಕಟ್ಟಡಗಳು, ಹೆಚ್ಚುವರಿ ತರಗತಿ ಕೊಠಡಿಗಳು, ಬಾಲಕ, ಬಾಲಕಿಯರ ವಸತಿ ನಿಲಯಗಳು, ಐಟಿಐ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳು, ಕೌಶಲಾಭಿವೃದ್ಧಿ ಕೇಂದ್ರಗಳು, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಯಿ-ಮಕ್ಕಳ ಆರೋಗ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ನೆರವು ನೀಡುವಂತೆ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಅಂತರವನ್ನು ಕಡಿಮೆ ಮಾಡಿ, ಶಿಕ್ಷಣ ಮತ್ತು ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಮೂಲಕ ಹರಪನಹಳ್ಳಿ ಸೇರಿ ಈ ಭಾಗದ ಜನರಿಗೆ ಉತ್ತಮ ಸೌಲಭ್ಯ ಮತ್ತು ಅವಕಾಶಗಳನ್ನು ಕಲ್ಪಿಸುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಸಂಸದರಾದ ರಾಧಾಕೃಷ್ಣ, ಸಾಗರ್ ಖಂಡ್ರೆ, ಜಿ. ಕುಮಾರ್ ನಾಯಕ್, ಕೆ. ರಾಜಶೇಖರ್ ಹಿಟ್ನಾಳ್ ಮತ್ತು ಇ. ತುಕಾರಾಂ ಇದ್ದರು.