ದಾವಣಗೆರೆ ತಾಲೂಕು ಕಾಡಜ್ಜಿ ಗ್ರಾಮದಲ್ಲಿ ಶುಕ್ರವಾರ ‘ಆತ್ಮ’ ಯೋಜನೆಯಡಿ ಆಯೋಜಿಸಲಾಗಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿ.ಎಂ. ಶ್ರೀಧರಮೂರ್ತಿ, ಮಂಜಮ್ಮ ಬಸವರಾಜ ನಾಯ್ಕ, ಸಣ್ಣಗೌಡ್ರು, ಜಾಹಿರ್ ಅಲಿ, ಪ್ರಭುದೇವ್, ಹಿದಾಯತ್ ಉಲ್ಲಾ, ಹನುಮಂತಪ್ಪ ಇದ್ದರು.
- ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಸಲಹೆ
- ವಿಶ್ವ ಮಣ್ಣು ಆರೋಗ್ಯ ದಿನಾಚರಣೆ
- ‘ಆತ್ಮ’ ಯೋಜನೆಯಡಿ ಕಾರ್ಯಕ್ರಮ
ದಾವಣಗೆರೆ : ರೈತರು ಮಣ್ಣಿನ ಫಲವತ್ತತೆ ಕಾಪಾಡಿ ಮುಂದಿನ ಪೀಳಿಗೆಗೆ ಬಿಟ್ಟುಕೊಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ಹೇಳಿದರು.
ಕೃಷಿ ಇಲಾಖೆಯಿಂದ ತಾಲೂಕಿನ ಕಾಡಜ್ಜಿ ಗ್ರಾಮದಲ್ಲಿ ಶುಕ್ರವಾರ ‘ಆತ್ಮ’ ಯೋಜನೆಯಡಿ ಆಯೋಜಿಸಲಾಗಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರೈತರು ಅತಿಯಾದ ರಾಸಾಯನಿಕ ಕ್ರಮಗಳನ್ನು ಬಳಸಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಕೃಷಿಗೆ ಮಾರಕವಾಗಿ ಪರಿಣಮಿಸಿದೆ. ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ರೈತರಿಗೆ ತಿಳಿಸಿದರು.
ಕಾಡಜ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಮ್ಮ ಬಸವರಾಜ ನಾಯ್ಕ ಮಾತನಾಡಿ, ಪ್ರತಿಯೊಬ್ಬ ರೈತರು ತಪ್ಪದೇ ಮಣ್ಣು ಹಾಗೂ ನೀರು ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಪೋಷಕಾಂಶಗಳ ನಿರ್ವಹಣೆ ಮಾಡಬೇಕು. ರೈತರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಆರ್.ಕೆ.ವಿ.ವೈ. ಯೋಜನೆಯಡಿ ರೈತರ ಜಮೀನಿನಲ್ಲಿ ಮಣ್ಣು ಮಾದರಿ ಸಂಗ್ರಹಿಸಿ ಪರೀಕ್ಷಾ ಕೇಂದ್ರದಲ್ಲಿ ವಿಶ್ಲೇಷಣೆ ಮಾಡಿದ ಮಣ್ಣು ಪರೀಕ್ಷಾ ಕಾರ್ಡ್‌ಗಳನ್ನು ರೈತರಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಮಣ್ಣು ವಿಜ್ಞಾನಿ ಸಣ್ಣಗೌಡ್ರು ಮಣ್ಣಿನ ಫಲವತ್ತತೆ ಬಗ್ಗೆ ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಜಾಹಿರ್ ಅಲಿ, ಕೃಷಿ ಪತ್ತಿನ ಸಂಘದ ನಿರ್ದೇಶಕರಾದ ಪ್ರಭುದೇವ್, ಹಿದಾಯತ್ ಉಲ್ಲಾ, ಪ್ರಗತಿಪರ ರೈತರಾದ ಹನುಮಂತಪ್ಪ, ಲಿಂಗರಾಜ್, ಬಸವರಾಜ ನಾಯ್ಕ, ನೇಗಿಲ ಸಿರಿ ರೈತ ಉತ್ಪಾದಕ ಸಂಸ್ಥೆ ನಿರ್ದೇಶಕ ಬಸವರಾಜ್, ಆತ್ಮ ಯೋಜನೆ ತಾಲೂಕು ವ್ಯವಸ್ಥಾಪಕ ವೆಂಕಟೇಶ್, ಕಾಡಜ್ಜಿ ಗ್ರಾಮದ ರೈತರು, ರೈತ ಮಹಿಳೆಯರು ಇದ್ದರು.