ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಕೃತಿ ವಿಕೋಪ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ, ತಹಸೀಲ್ದಾರ್ ಗುರುಬಸವರಾಜ್, ಇಒ ಕೆಂಚಪ್ಪ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಎಇಇ ಶಿವಮೂರ್ತಿ ಇದ್ದರು.Drought
- ಶಾಸಕ ಬಿ. ದೇವೇಂದ್ರಪ್ಪ ಹೇಳಿಕೆ
- ಪ್ರಕೃತಿ ವಿಕೋಪ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆ
ಜಗಳೂರು: ಮಳೆ ಕೊರತೆಯಿಂದ ಎದುರಾಗಬಹುದಾದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ನಡೆಸಿದೆ. ಕುಡಿಯುವ ನೀರು ಪೂರೈಕೆಗೆ ವಿಶೇಷ ಒತ್ತು ನೀಡಲಾಗಿದ್ದು, ಬೆಳೆ ನಷ್ಟ ಸಮೀಕ್ಷೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕಂದಾಯ ಹಾಗೂ ತಾಲೂಕು ಪಂಚಾಯತಿ ವತಿಯಿಂದ ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆ ಕೈಕೊಟ್ಟಿರುವ ಪ್ರದೇಶಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಬೇಕು. ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಅಗತ್ಯವಿದ್ದಲ್ಲಿ ಮೇವು ಬ್ಯಾಂಕ್ ಆರಂಭಿಸಬೇಕು ಎಂದು ಸೂಚಿಸಿದರು. ತಾಲೂಕಿನಲ್ಲಿ ಇತ್ತೀಚೆಗೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಎಲ್ಲೆಲ್ಲಿ ಸಮಸ್ಯೆಗಳಿವೆಯೋ ತಕ್ಷಣ ಪರಿಶೀಲಿಸಿ ಸರಿಪಡಿಸಬೇಕು. ಲೈನ್‌ಮನ್‌ಗಳು ಹಾಗೂ ಇಂಜಿನಿಯರ್‌ಗಳು ರೈತರೊಂದಿಗೆ ಉಡಾಫೆಯಿಂದ ಮಾತನಾಡುವುದು ಮತ್ತು ನಿರ್ಲಕ್ಷೃ ತೋರುವುದನ್ನು ಸಹಿಸುವುದಿಲ್ಲ ಎಂದು ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ಅವರಿಗೆ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಗುರುಬಸವರಾಜ್ ಮಾತನಾಡಿ, ತಾಲೂಕಿನಲ್ಲಿ ಮಳೆ ಪ್ರಮಾಣ ತೀವ್ರ ಕುಸಿದಿದೆ. ಜೂನ್ ತಿಂಗಳಲ್ಲಿ 56.9 ಮಿ.ಮೀ ಮಳೆಯಾಗಬೇಕಿತ್ತು, ಆದರೆ 37.6 ಮಿ.ಮೀ ಮಳೆಯಾಗಿದೆ. ಬಹುತೇಕ ಕಡೆ ಬಿತ್ತನೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಎಲ್ಲ ಇಲಾಖೆಗಳಿಂದ ಸಂಪೂರ್ಣ ಮಾಹಿತಿ ಪಡೆದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಮೇವಿನ ಅಭಾವ ನೀಗಿಸಲು ಪಶುಸಂಗೋಪನಾ ಇಲಾಖೆಯಿಂದ ಮೇವಿನ ಮಿನಿಕಿಟ್‌ಗಳನ್ನು ವಿತರಿಸಿ, ಮೇವು ಬೆಳೆಯಲು ರೈತರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದೀಕ್‌ಉಲ್ಲಾ ಮಾತನಾಡಿ, ನೀರಿನ ನಿರ್ವಹಣೆಗೆ ಬಿಡುಗಡೆಯಾಗಿದ್ದ 60 ಲಕ್ಷ ರೂ. ಅನುದಾನದಲ್ಲಿ 30 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಉಚ್ಚಂಗಿಪುರ ಮತ್ತು ಮರೇನಹಳ್ಳಿ ಗ್ರಾಮಗಳ ತೊಂದರೆ ನಿವಾರಿಸಲಾಗಿದ್ದು, 28 ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ಮಾತನಾಡಿ, ತಾಲೂಕಿನ 56 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶ ಪೈಕಿ ಕೇವಲ 9,300 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಪ್ರಮುಖ ಬೆಳೆಯಾದ ಮೆಕ್ಕೆಜೋಳ ಈ ಬಾರಿ ಕಡಿಮೆ ಬಿತ್ತನೆಯಾಗಿದ್ದು, ರಾಗಿ ಬಿತ್ತನೆಗೆ ಇನ್ನೂ ಅವಕಾಶವಿದೆ. ಬರಗಾಲದ ಮುನ್ಸೂಚನೆ ಇರುವುದರಿಂದ ಕೃಷಿ ಇಲಾಖೆ ಸಜ್ಜಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಇಒ ಕೆಂಚಪ್ಪ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಜಿಪಂ ಎಇಇ ಶಿವಮೂರ್ತಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಲಿಂಗರಾಜ್ ಇತರರಿದ್ದರು.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ಸೂಚನೆ
ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ತಮ್ಮ ಕರ್ತವ್ಯದ ಕೇಂದ್ರ ಸ್ಥಾನದಲ್ಲೇ ಇರಬೇಕು. ರಜೆ ಪಡೆಯಲು ಅಥವಾ ಕೇಂದ್ರ ಸ್ಥಾನ ತೊರೆಯಲು ಮೇಲಧಿಕಾರಿಗಳ ಪೂರ್ವಾನುಮತಿ ಕಡ್ಡಾಯ. 22 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಅಧಿಕಾರಿಗಳು ದಿನದ 24 ಗಂಟೆಯೂ ಸನ್ನದ್ಧರಾಗಿ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು, ದೂರು ಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಶಾಸಕರು ಎಚ್ಚರಿಸಿದರು.
ಗ್ರಾಮಗಳಲ್ಲಿ ನೀರು ಪೋಲು
ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗದಂತೆ ಗ್ರಾಪಂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹಳ್ಳಿಗಳಲ್ಲಿ ಮುಂಜಾನೆ ಮತ್ತು ಸಂಜೆ ವೇಳೆ ನಲ್ಲಿಗಳಲ್ಲಿ ನೀರು ವ್ಯರ್ಥವಾಗಿ ಹರಿಯದಂತೆ ವ್ಯವಸ್ಥೆ ಮಾಡಬೇಕು. ನೀರುಗಂಟಿಗಳಿಗೆ ಎಚ್ಚರಿಕೆ ನೀಡಬೇಕೆಂದು ತಹಸೀಲ್ದಾರ್ ಸಭೆಯ ಗಮನಕ್ಕೆ ತಂದರು.