ವಿಡಿಯೋ ಸಂವಾದನಿರತ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಡಾ. ಶಮ್ಲಾ ಇಕ್ಬಾಲ್ ಹಾಗೂ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ.
- ‘ಚೈಲ್ಡ್ ಹೆಲ್ಪ್‌ಲೈನ್’ ಸಂಖ್ಯೆ ಕಡ್ಡಾಯ ಪ್ರದರ್ಶನ
- ಉಸ್ತುವಾರಿ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ಸೂಚನೆ
- ಜಿಲ್ಲಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ
ದಾವಣಗೆರೆ: ಜಿಲ್ಲೆಯ ಶಾಲಾವಾರು ಕಡ್ಡಾಯವಾಗಿ ‘ಚೈಲ್ಡ್ ಹೆಲ್ಪ್‌ಲೈನ್’ ಸಂಖ್ಯೆ ಪ್ರದರ್ಶಿಸಬೇಕು. ಶಿಕ್ಷಕರು, ವಾರ್ಡನ್‌ಗಳಿಗೆ ಪೋಕ್ಸೊ, ಮಕ್ಕಳ ಹಕ್ಕುಗಳು ಹಾಗೂ ಆನ್‌ಲೈನ್ ವಂಚನೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಡಾ. ಶಮ್ಲಾ ಇಕ್ಬಾಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ತಂತ್ರಜ್ಞಾನ ಆಧಾರಿತ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ ಈ ಯೋಜನೆಗಾಗಿ 20 ಕೋಟಿ ರೂ. ಅನುದಾನ ಕೋರಲಾಗಿದ್ದು, ಪ್ರಾಥಮಿಕ ಹಂತವಾಗಿ ಕನಿಷ್ಠ 10 ಕೋಟಿ ರೂ. ಬಿಡುಗಡೆಯಾದಲ್ಲಿ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು. ಯೋಜನೆಗೆ ಸಚಿವರು ಹಾಗೂ ಐಟಿ ಇಲಾಖೆಯ ಉನ್ನತ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ವಸತಿ ನಿಲಯಗಳಲ್ಲಿ ಸದ್ಯಕ್ಕೆ ವಿದ್ಯಾರ್ಥಿಗಳಿಲ್ಲದಿದ್ದರೂ, ಹೊಸ ಶೈಕ್ಷಣಿಕ ವರ್ಷಕ್ಕೆ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ. ಇನ್ನುಮುಂದೆ ಪ್ರತಿ ತಿಂಗಳು ಹಾಸ್ಟೆಲ್‌ಗಳಲ್ಲಿ ಸಂಜೆ ವೇಳೆ ಅರ್ಧ ಗಂಟೆಗಳ ಕಾಲ ವಚನ, ಮಹಿಳಾ ಹಾಗೂ ದಲಿತ ಸಾಹಿತ್ಯ ಕುರಿತಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸಂಸದರು ಇದಕ್ಕೆ ಚಾಲನೆ ನೀಡುವರು ಎಂದರು.
ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದ ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಸ್ವಂತ ನಿವೇಶನ ಮಂಜೂರು ಮಾಡಲಾಗಿದ್ದು, ಅನುದಾನ ಬಂದ ತಕ್ಷಣ ಕಟ್ಟಡ ನಿರ್ಮಾಣ ಆರಂಭವಾಗಲಿದೆ. ನಿಲಯಾರ್ಥಿಗಳಿಗೆ ಹೆಲ್ತ್‌ಕಾರ್ಡ್ ನೀಡಿ, ಪ್ರತಿ ತಿಂಗಳು ಕಡ್ಡಾಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಸ್ಸೆೆಸ್ಸೆಲ್ಸಿ-ಪಿಯು ಫಲಿತಾಂಶ ಉತ್ತಮಪಡಿಸಲು ಶಿಕ್ಷಣ ಇಲಾಖೆ ವಿಶೇಷ ಶ್ರಮ ವಹಿಸುತ್ತಿದ್ದು, ಫಲಿತಾಂಶದಲ್ಲಿ ಹಿಂದುಳಿದ ಶಾಲೆಗಳನ್ನು ಅಧಿಕಾರಿಗಳು ದತ್ತು ಪಡೆದು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಿಇಒ ಅವರೊಂದಿಗೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುತ್ತಿದ್ದು, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕಳೆದ ವರ್ಷ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿಲ್ಲ. ಕಳೆದ ತಿಂಗಳು ಶಾದಿಮಹಲ್‌ನಲ್ಲಿ, ಅಪ್ರಾಪ್ತ ಬಾಲಕಿಯರ ಬಾಲ್ಯವಿವಾಹ ತಡೆಯಲಾಗಿದೆ. ಕೆಲವು ನರ್ಸಿಂಗ್ ಹೋಂಗಳಲ್ಲಿ ಶೇ.100 ರಷ್ಟು ಸಿಸೇರಿಯನ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ, ವೈದ್ಯರ ಸಭೆ ಕರೆದು ಕಡ್ಡಾಯವಾಗಿ ನೈಸರ್ಗಿಕ ಹೆರಿಗೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣ ತಗ್ಗಿದೆ. ಇದು ರಾಜ್ಯದ ಸರಾಸರಿಗಿಂತ ಕಡಿಮೆ ಇರುವುದು ದೊಡ್ಡ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಚರ್ಮರೋಗ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಅರವಳಿಕೆ ತಜ್ಞರ ಹುದ್ದೆಗಳು ಖಾಲಿ ಇದ್ದು, ಲಭ್ಯ ಸಂಪನ್ಮೂಲಗಳಲ್ಲೇ ಉತ್ತಮ ಸೇವೆ ನೀಡಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಂಪೂರ್ಣ ಸಜ್ಜಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಅಡಿಕೆ-ತೆಂಗಿನ ಜತೆಗೆ ಹಣ್ಣು-ತರಕಾರಿ ಬೆಳೆಗಳಿಗೂ ಉತ್ತೇಜನ ನೀಡಲಾಗುತ್ತಿದ್ದು, ಹನಿ ನೀರಾವರಿ ಯೋಜನೆ ಸಬ್ಸಿಡಿ ಪ್ರಕ್ರಿಯೆ ಸರಳಗೊಳಿಸಲಾಗಿದೆ.
ಗ್ರಾಮೀಣ ಭಾಗದ ಜಲಜೀವನ ಮಿಷನ್ ಯೋಜನೆಯಡಿ ಪೈಪ್‌ಲೈನ್, ನಲ್ಲಿ ಸಂಪರ್ಕ ಕಾರ್ಯಗಳು ಕೊನೆಯ ಹಂತದಲ್ಲಿದ್ದು, ಬೇಸಿಗೆಯಲ್ಲಿ ಕುಡಿವ ನೀರಿನ ಅಭಾವ ಸೃಷ್ಟಿಯಾಗದಂತೆ ಎಚ್ಚರ ವಹಿಸಲಾಗಿದೆ. ಎರಡು ವರ್ಷಗಳಿಗೆ ಆಗುವಷ್ಟು ಮೇವನ್ನು ಮುನ್ನೆಚ್ಚರಿಕೆಯಾಗಿ ಶೇಖರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ದಾವಣಗೆರೆಯಲ್ಲಿ ಬೀದಿನಾಯಿಗಳಿಗೆ ಲಸಿಕಾಕರಣ ಮತ್ತು ಸ್ಟೆರಿಲೈಸೇಶನ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದ್ದು, ಶೇ.80ರಷ್ಟು ಯಶಸ್ಸು ಸಾಧಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಎಸ್ಪಿ ಡಾ.ಎಚ್.ಟಿ. ಶೇಖರ್, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.