ದಾವಣಗೆರೆಯ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಸಂಜೆ ವಿಶೇಷ ತರಗತಿ ನಡೆಸುತ್ತಿರುವುದು.
- ಶಾಲೆಗಳ ಶ್ರೇಣೀಕರಣ
- ಪ್ರಗತಿಗೆ ಕಾರ್ಯತಂತ್ರ
- ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ದಾವಣಗೆರೆ : ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯು ಪ್ರತಿ ವರ್ಷದಂತೆ ಈ ಬಾರಿಯೂ (2025-26ನೇ ಸಾಲಿಗೆ) ನಿರ್ದಿಷ್ಟ ಯೋಜನೆಯನ್ನು ರೂಪಿಸಿದೆ. ಶಾಲೆಗಳನ್ನು ಎ, ಬಿ ಮತ್ತು ಸಿ ಎಂದು ಶ್ರೇಣೀಕರಿಸಿ ಅದಕ್ಕೆ ಅನುಗುಣವಾಗಿ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದಿದೆ.
ಜಿಲ್ಲೆಯಲ್ಲಿ ಒಟ್ಟು 474 ಪ್ರೌಢಶಾಲೆಗಳಿವೆ. ಅವುಗಳಲ್ಲಿ 135 ಸರ್ಕಾರಿ, 32 ಇತರ ಸರ್ಕಾರಿ ಶಾಲೆಗಳು, 169 ಅನುದಾನಿತ, 138 ಅನುದಾನ ರಹಿತ ಶಾಲೆಗಳು ಸೇರಿವೆ.
ಕಳೆದ ವರ್ಷ (2024-25ನೇ ಸಾಲಿನಲ್ಲಿ) ನಡೆದ ಎಸ್ಸೆಸ್ಸೆಲ್ಸಿ 1, 2 ಮತ್ತು 3ನೇ ಪರೀಕ್ಷೆ ಸೇರಿ ಒಟ್ಟು 16,008 ವಿದ್ಯಾರ್ಥಿಗಳು (ಶೇ. 80.16 ರಷ್ಟು) ಉತ್ತೀರ್ಣರಾಗಿದ್ದರು. 2025 ರಲ್ಲಿ 23,208 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಬರುವ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ-1ಕ್ಕೆ 81 ಕೇಂದ್ರಗಳನ್ನು ನಿಗದಿ ಮಾಡಲಾಗಿದೆ.
‘ಸಿ’ ಗುಂಪಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು
ಬಿ ಮತ್ತು ಸಿ ಗುಂಪಿನ ಶಾಲೆಗಳಿಗೆ ಸಂದರ್ಶನ ಹಾಗೂ ಮಾರ್ಗದರ್ಶನ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ.
ಶಿಕ್ಷಕರ ನಿಯೋಜನೆ, ಅತಿಥಿ ಶಿಕ್ಷಕರು, ನಿವೃತ್ತ ಶಿಕ್ಷಕರು, ಪದವೀಧರರಾದ ಹಳೆಯ ವಿದ್ಯಾರ್ಥಿಗಳನ್ನು ಬೋಧನೆಗೆ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.
‘ಸಿ’ ಗುಂಪಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಅವರಿಗೆ ಪಾಸಿಂಗ್ ಪ್ಯಾಕೇಜ್ ನೀಡಿ ಶೇ. 50 ರಷ್ಟು ಅಂಕ ಗಳಿಸುವಂತೆ ಪ್ರೇರೇಪಿಸಲಾಗುತ್ತಿದೆ.
ಪ್ರತಿ ವಾರ ಘಟಕ ಪರೀಕ್ಷೆ/ಕಿರು ಪರೀಕ್ಷೆಗಳ್ನು ನಡೆಸುವುದು, ಪಾಲಕರ ಸಭೆ ಕರೆದು ವಿದ್ಯಾರ್ಥಿಗಳ ಪ್ರಗತಿ ತಿಳಿಸಿ, ಅವರ ಮಕ್ಕಳು ಹೆಚ್ಚು ಆಸಕ್ತಿಯಿಂದ ಓದುವ ನಿಟ್ಟಿನಲ್ಲಿ ಪ್ರೇರೇಪಿಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಸಮಯ ಅಪವ್ಯಯವಾಗದಂತೆ ವೈಯಕ್ತಿಕ ಅಭ್ಯಾಸದ ವೇಳಾಪಟ್ಟಿ ಸಿದ್ಧಪಡಿಸಿ ನೀಡಲು ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ತರಗತಿ, ಗುಂಪು ಅಧ್ಯಯನ
ಎಲ್ಲ ಶಾಲೆಗಳಲ್ಲಿ ಬೆಳಗ್ಗೆ 9 ರಿಂದ ವಿಶೇಷ ತರಗತಿಗಳನ್ನು ನಡೆಸುವುದು, ಸಂಜೆ 4.30 ರಿಂದ ಗುಂಪು ಅಧ್ಯಯನ ಕೈಗೊಳ್ಳುವುದು ಸುಧಾರಣಾ ಕ್ರಮಗಳಲ್ಲಿ ಒಂದು.
ಪ್ರತಿ ತಿಂಗಳು ನಾವೀನ್ಯಯುತ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ಆ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೇರೇಪಿಸುವುದು ಉದ್ದೇಶವಾಗಿದೆ.
ನಿಧಾನ ಗತಿಯ ವಿದ್ಯಾರ್ಥಿಗಳ ಕಲಿಕೆ ಬಲವರ್ಧನೆಗೆ ಶಾಲೆಗಳಲ್ಲಿ ‘ಬಡ್ಡಿ ಪೇರಿಂಗ್’ ವ್ಯವಸ್ಥೆ ಕಲ್ಪಿಸುವುದು. ಶಾಲೆಗಳಲ್ಲೇ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಾಗಾರಗಳ ಆಯೋಜನೆ, ಪ್ರತಿ ಶುಕ್ರವಾರ ಪಠ್ಯಕ್ಕೆ ಪೂರಕವಾದ ರಸಪ್ರಶ್ನೆ, ಚರ್ಚಾ ಸ್ಪರ್ಧೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಕಲಿಕೆಗೆ ಪ್ರೇರೇಪಿಸಲಾಗುತ್ತಿದೆ.