ಸುಂಕದಕಟ್ಟೆ ನರಸಿಂಹಸ್ವಾಮಿ ಹಾಗೂ ಮಂಜುನಾಥಸ್ವಾಮಿ ದೇವಾಲಯದಲ್ಲಿ ಅಧಿಕಾರಿಗಳಿಂದ ಹುಂಡಿ ಎಣಿಕೆ ನಡೆಯಿತು. Counting
ದಾವಣಗೆರೆ

ಪ್ರಸಾದನಿಲಯ ನಿರ್ಮಾಣಕ್ಕೆ ಯೋಜನೆ

ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ಪ್ರಸಾದದ ವ್ಯವಸ್ಥೆ, ನೀರಿನ ಸೌಕರ್ಯಕ್ಕೆ ಮನವಿ

ಹೊನ್ನಾಳಿ: ತಾಲೂಕಿನ ಮುಜುರಾಯಿ ಇಲಾಖೆಯ ಸುಂಕದಕಟ್ಟೆ ನರಸಿಂಹಸ್ವಾಮಿ ಹಾಗೂ ಮಂಜುನಾಥಸ್ವಾಮಿ ದೇವಾಲಯದಲ್ಲಿ ಪ್ರಸಾದ ನಿಲಯ ನಿರ್ಮಿಸಲು 50 ಲಕ್ಷ ರೂ.ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ದೇವಾಲಯದ ಅಧ್ಯ ಎಸ್​.ಎ. ಮೋಹನ್​ ಹೇಳಿದರು.

ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹುಂಡಿ ಹಣ ಎಣಿಕೆ ಕಾರ್ಯದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪೂರ್ಣಗೊಂಡಿರುವ ಕಲ್ಯಾಣಮಂಟಪಕ್ಕೂ ಅನುದಾನ ಕೋರಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಕುಡಿಯುವುದಕ್ಕೂ ನೀರು ಯೋಗ್ಯವಾಗಿಲ್ಲದಿರುವ ಕಾರಣ ಪೂಜೆ&ಪುನಸ್ಕಾರ, ಅಡುಗೆ ಹಾಗೂ ಕುಡಿಯಲು ಶುದ್ಧ ನೀರಿನ ಅತ್ಯವಶ್ಯಕತೆಯಿದೆ. ಆದ್ದರಿಂದ ತುಂಗಭದ್ರಾ ನದಿಯಿಂದ ಪೈಪ್​ಲೈನ್​ ಮೂಲಕ ದೇವಸ್ಥಾನಕ್ಕೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಬೇಕು ಎಂದು ಪ್ರಧಾನ ಅರ್ಚಕ ರಾಜು ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ತಹಸೀಲ್ದಾರ್​ ಕವಿರಾಜ್​ ಮಾತನಾಡಿ, ಹುಂಡಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಎಣಿಕೆ ಮಾಡಿ ಬ್ಯಾಂಕಿಗೆ ಜಮಾ ಮಾಡಲಾಗುತ್ತದೆ. ದೇವಸ್ಥಾನದ ಸಮಿತಿಯವರು ಅಭಿವೃದ್ಧಿ ಕಾರ್ಯಗಳ ಕುರಿತು ಪತ್ರ ನೀಡಿದರೆ, ಅದನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಅನುದಾನ ಬಿಡುಗಡೆ ಮಾಡಿಸಲು ಸಹಕಾರಿಯಾಗಲಿದೆ ಎಂದರು.

ಗ್ರೇಡ್​ 2 ತಹಸೀಲ್ದಾರ್​ ಸುರೇಶ್​, ಶಿರಸ್ತೇದಾರ್​ ಮಂಜುನಾಥ್​, ಉಪ ತಹಸೀಲ್ದಾರ್​ ಮಂಜುನಾಥ್​, ರಾಜಸ್ವ ನಿರೀಕರಾದ ರಮೇಶ್​, ಜೆ. ಪ್ರಕಾಶ್​, ರವಿಕುಮಾರ್​, ದಿನೇಶ್​ಬಾಬು ಇತರರಿದ್ದರು.

73.33 ಲಕ್ಷ ರೂ. ಸಂಗ್ರಹ

ಹತ್ತು ತಿಂಗಳ ನಂತರ ಶುಕ್ರವಾರ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಭಕ್ತರು ಕಾಣಿಕೆ ಹಾಗೂ ಹರಕೆ ರೂಪದಲ್ಲಿ ಒಟ್ಟು 73,33,540 ರೂ.ಗಳನ್ನು ಹುಂಡಿಗೆ ಅರ್ಪಿಸಿದ್ದಾರೆ ಎಂದು ತಹಸೀಲ್ದಾರ್​ ಕವಿರಾಜ್​ ತಿಳಿಸಿದರು.

ಹುಂಡಿಯಲ್ಲಿ ವಿಚಿತ್ರ ಬೇಡಿಕೆಗಳು

ಹಣ ಎಣಿಕೆ ಮಾಡಲು ಹುಂಡಿ ತೆರೆದಾಗ ನೋಟುಗಳ ಜೊತೆಗೆ ಕೆಲವು ಚೀಟಿಗಳೂ ಸಿಕ್ಕವೂ. ಅದರಲ್ಲಿ ದೇವರಿಗೆ ವಿಚಿತ್ರ ರೀತಿಯ ಪ್ರಾರ್ಥನೆ ಮಾಡಿಕೊಂಡ ಚೀಟಿಗಳಿದ್ದವು. ಗೃಹಿಣಿಯೊಬ್ಬರು ನನ್ನ ಗಂಡನಿಗೆ ಒಳ್ಳೆ ಬುದ್ಧಿ ಕೊಡಿ, ಬೇಗ ಗುಣಮುಖರಾಗಿ ನಡೆದಾಡುವಂತೆ ಮಾಡಿ, ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಪ್ಪ ಎಂದು ಬರೆದಿದ್ದರು. ಮತ್ತೊಬ್ಬ ಭಕ್ತನೊಬ್ಬ, ನನ್ನ ಹೆಂಡತಿಯನ್ನು ಕೆಟ್ಟ ದೃಷ್ಟಿಯಿಂದ ನೋಡುವ ವ್ಯಕ್ತಿ ಈ ಲೋಕದಲ್ಲೇ ಇರಬಾರದು ದೇವರೇ.. ನನ್ನ ಈ ಬೇಡಿಕೆ ಈಡೇರಿದರೆ 5,001 ರೂ. ಕಾಣಿಕೆ ಹಾಕುತ್ತೇನೆ ಎಂದು ಬರೆದಿದ್ದ.