ದಾವಣಗೆರೆಯಲ್ಲಿ ಬುಧವಾರ ಆಯೋಜಿಸಿದ್ದ, ಕೃಷಿ ಇಲಾಖೆಯ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಎಸ್ಪಿ ಎಚ್.ಟಿ.ಶೇಖರ್ ಅವರು ಕೃಷಿ ರಕ್ಷಕ ಕೈಪಿಡಿ, ಭಿತ್ತಿಪತ್ರ ಬಿಡುಗಡೆ ಮಾಡಿದರು. ಕೆ.ಜಿಯಾವುಲ್ಲಾ, ರೇಷ್ಮಾ ಕೌಸರ್, ಡಾ.ರಾಘವೇಂದ್ರ ಪ್ರಸಾದ್, ಡಾ.ಮಹೇಶ್ ಇತರರಿದ್ದರು.  
ದಾವಣಗೆರೆ

ಬೆಳೆ ವಿಮೆಯಡಿ ಹೆಚ್ಚಿನ ಪರಿಹಾರಕ್ಕೆ ಯೋಜಿಸಿ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ರೈತ ಮುಖಂಡರ ಜತೆ ಸಭೆ ನಡೆಸಿ ನಿರ್ಧರಿಸಿ
  • ಮೇವು ಸಂಗ್ರಹಣೆಗೆ ಸಂಕೋಚ ಬೇಡ
  • ಕೃಷಿ ಅಧಿಕಾರಿಗಳಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
ದಾವಣಗೆರೆ: ಕೃಷಿ ಬೆಳೆ ವಿಮೆ ಯೋಜನೆಯಡಿ ರೈತರಿಗೆ ಹೆಚ್ಚಿನ ಲಾಭ ಬರುವ ನಿಟ್ಟಿನಲ್ಲಿ ವಿಮೆಯ ಸೂಕ್ತ ಹಂತದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ರೈತ ಮುಖಂಡರ ಸಭೆ ನಡೆಸಿ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ, ಕೃಷಿ ಇಲಾಖೆಯ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳೆವಿಮೆ ಯೋಜನೆಗೆ ನೋಂದಣಿಗೆ ಇನ್ನು 9 ದಿನಗಳು ಬಾಕಿ ಇದೆ. ಹೀಗಾಗಿ ಹೆಚ್ಚು ರೈತರು ವಿಮೆಗೆ ಒಳಪಡುವಂತೆ ಜಾಗೃತಿ ಮೂಡಿಸಿ ಎಂದರು.
ಪ್ರತಿಕೂಲ ಹವಾಮಾನದಿಂದಾಗಿ ಶೇ.75ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬಿತ್ತನೆ ವಿಫಲವಾದಲ್ಲಿ ಶೇ.25ರಷ್ಟು ಗರಿಷ್ಠ ಪರಿಹಾರಕ್ಕೆ ಸೀಮಿತಗೊಳಿಸಲು ಬಿತ್ತನೆ ವೈಫಲ್ಯ (ಪ್ರಿವೆಂಟೆಡ್ ಸೋಯಿಂಗ್)ಹಂತದಡಿ ಅವಕಾಶವಿದೆ. ಇದರ ಬದಲಾಗಿ ಮಧ್ಯಂತರ ಬೆಳೆ ವೈಫಲ್ಯ, ಕೊಯ್ಲೋತ್ತರ ಬೆಳೆ ನಷ್ಟ ನೀಡುವ ಅವಕಾಶಗಳೂ ಇವೆ. ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ. ರೈತ ಮುಖಂಡರ ಜತೆ ಚರ್ಚಿಸಿ ನಿರ್ಧರಿಸಿ ಎಂದರು.
ಉಪಗ್ರಹ ಚಿತ್ರದಲ್ಲಿ ಬೆಳೆಗಳು ಹಸಿರು ವರ್ಣದಲ್ಲಿದ್ದರೂ ಒಣಗಿರುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲಿಸಿ ವಾಸ್ತವ ವರದಿ ಮಾಡಬೇಕು. ಪ್ರತಿ ಹೋಬಳಿಯಲ್ಲಿ ಕನಿಷ್ಠ 10 ಬೆಳೆ ಹಾನಿಗೀಡಾದ ಗ್ರಾಮಗಳನ್ನು ಗುರುತಿಸಿ ಸರ್ವೇ ನಡೆಸಬೇಕು. ಹೀಗಾದಲ್ಲಿ ಕೇಂದ್ರ ತಂಡ ಕರೆದೊಯ್ಯಲು ಅನುಕೂಲವಾಗಲಿದೆ ಎಂದರು.
ಮುಂದಿನ ಮೇ ಅವಧಿವರೆಗೆ ಮೇವು ಕಾಪಾಡಿಕೊಳ್ಳಬೇಕಿದೆ. ಪಶುಪಾಲನೆ ಇಲಾಖೆ ಅಧಿಕಾರಿಗಳು, ತಾಪಂ, ಇಒ, ಗ್ರಾಮ ಲೆಕ್ಕಿಗರೊಂದಿಗೆ ರೈತರ ಮನೆಗಳಿಗೆ ತೆರಳಿದರೆ ಗೋಶಾಲೆಗೆ ಹಿಡಿ ಮೇವು ದಾನ ನೀಡಲಿದ್ದಾರೆ. ಜಾನುವಾರುಗಳಿಗೆ ಅನುಕೂಲವಾಗುವಂತೆ ರಾಗಿ, ಅಲಸಂದಿ, ಹುರುಳಿ ಬಿತ್ತನೆಗೆ ಕ್ರಮ ವಹಿಸಬೇಕು. ಮೇವಿನ ಕಿಟ್ ನೀಡಬೇಕು ಎಂದೂ ಸೂಚಿಸಿದರು. ಹೊನ್ನಾಳಿ ಭಾಗದಲ್ಲಿ 15 ಎಕರೆ ರಾಗಿ ಬೆಳೆಯಲಾಗಿದ್ದು ಸುಮಾರು 60 ಟನ್ ಮೇವು ಸಿಗಲಿದೆ ಎಂದು ಕೃಷಿ ಉಪನಿರ್ದೇಶಕಿ ಹಂಸವೇಣಿ ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜೆ. ಜಿಯಾವುಲ್ಲಾ ಮಾತನಾಡಿ ಮಂಗಳವಾರ ಜಿಲ್ಲೆಯಲ್ಲಿ 8ಮಿಮೀ ಮಳೆಯಾಗಿದೆ. ಇದೇ ರೀತಿ ಮಳೆಯಾದರೆ ಬೆಳೆಗಳಿಗೆ ಅನುಕೂಲವಾಗಲಿದೆ. ಇದುವರೆಗೆ ಶೇ.42 ಮಳೆ ಕೊರತೆ ಇದೆ. ಜಿಲ್ಲೆಯಲ್ಲಿ ಶೇ.12.35ರಷ್ಟು ಬಿತ್ತನೆ ಆಗಿದೆ, 62622 ಮೆ.ಟನ್ ರಸಗೊಬ್ಬರದ ದಾಸ್ತಾನಿದೆ. ಈವರೆಗೆ 23438 ರೈತರು ಬೆಳೆವಿಮೆಯಡಿ ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು. ಸೂಕ್ಷ್ಮ ನೀರಾವರಿ, ಕೃಷಿ ಯಂತ್ರೋಪಕರಣಗಳ ಯೋಜನೆಯಡಿ ನೆರೆಹೊರೆಯ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆಗೆ ಕಡಿಮೆ ಅನುದಾನ ಬರುತ್ತಿದೆ ಎಂದು ಹೇಳಿದರು. ಈ ಸಂಬಂಧ ಮೇಲಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಡಿಸಿ ಹೇಳಿದರು.
ಜಿಲ್ಲೆಯಲ್ಲಿ ಅಡಕೆ ಬೆಳೆಗಳಿಗೆ ಹೆಚ್ಚಿನ ನೀರು ಹಾಯಿಸದೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳುವಂತೆಯೂ ಹಾಗೂ ಅಡಕೆ ಮಧ್ಯೆ ಅಂತರ ಬೆಳೆಗಳನ್ನು ಬೆಳೆಸಲು ರೈತರಿಗೆ ಜಾಗೃತಿ ಮೂಡಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಫ್ರೂಟ್ಸ್ ತಂತ್ರಾಂಶದಡಿ 183504 ರೈತರ ಐಡಿ ಸೃಜಿಸಲಾಗಿದೆ, 387328 ಸರ್ವೇ ನಂಬರ್ ಗಳನ್ನು ಸೇರ್ಪಡೆ ಮಾಡಲಾಗಿದ್ದು, ಬಾಕಿ ಇರುವ ಐಡಿಗಳನ್ನು ಸೃಜಿಸಲು ಕ್ರಮವಹಿಸುವಂತೆಯೂ ಹೇಳಿದರು.
ಇದೇ ಸಂದರ್ಭದಲ್ಲಿ ಡಿಸಿ, ಎಸ್ಪಿ ಅವರು ಕೃಷಿ ರಕ್ಷಕ ಕೈಪಿಡಿ, ಭಿತ್ತಿಪತ್ರ ಬಿಡುಗಡೆ ಮಾಡಿದರು. ಕೃಷಿ ಮಾಹಿತಿ ಮತ್ತು ಯೋಜನಾ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ರಾಘವೇಂದ್ರ ಪ್ರಸಾದ್, ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ.ಮಹೇಶ್, ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಇತರೆ ಅಧಿಕಾರಿಗಳಿದ್ದರು.

ಬೆಳೆ ವಿಮೆ ಯೋಜನೆಯಲ್ಲಿ ವಿಮಾ ಕಂಪನಿ ಅಧಿಕಾರಿಗಳು, ಪ್ರತಿನಿಧಿಗಳು ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಆಮಿಷಕ್ಕೆ ಬಲಿಯಾಗಿ ಸುಳ್ಳು ವರದಿ ನೀಡಬಾರದು. ರೈತರಿಗೆ ಅನ್ಯಾಯ ಎಸಗಿಸಿದರೆ ಸಹಿಸುವುದಿಲ್ಲ. ಅವ್ಯವಹಾರ ನಡೆಸಿದವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದೂ ಡಿಸಿ ಗಂಗಾಧರಸ್ವಾಮಿ ಎಚ್ಚರಿಸಿದರು.


ಹಾವೇರಿ ಜಿಲ್ಲೆಯಿಂದ ಬ್ರಾಂಡೆಡ್ ಅಲ್ಲದ, ಮೆಕ್ಕೆಜೋಳದ ನಕಲಿ ಬಿತ್ತನೆ ಬೀಜಗಳು ಬರುತ್ತಿರುವ ಮಾಹಿತಿ ಇದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದ ಡಿಸಿ, ಭದ್ರಾ ಡ್ಯಾಂನಲ್ಲಿ ನಿರೀಕ್ಷಿತ ನೀರು ಸಂಗ್ರಹವಾದಲ್ಲಿ ಮುಂದಿನ ಮೇವರೆಗೆ ಕುಡಿವ ನೀರಿನ ಸಮಸ್ಯೆ ನೀಗಬಹುದು ಎಂದು ಡಿಸಿ ಗಂಗಾಧರಸ್ವಾಮಿ ಹೇಳಿದರು.