ಆನಗೋಡು ಬಸ್‌ಸ್ಟಾೃಂಡ್ ಸರ್ಕಲ್‌ನ ರಸ್ತೆ ಬದಿ ಸುಡುವ ಬಿಸಿಲಲ್ಲಿ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು. bus stand
- ಬಿಸಿಲಲ್ಲೇ ನಿಲ್ಲುವ ಪರಿಸ್ಥಿತಿ
- ಉಪಯೋಗವಿಲ್ಲದಂತಾದ ತಾತ್ಕಾಲಿಕ ತಂಗುದಾಣ
- ವೃದ್ಧರು, ಅನಾರೋಗ್ಯ ಪೀಡಿತರ ಗೋಳು ಹೇಳತೀರದು
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ದಾವಣಗೆರೆ ಜಿಲ್ಲೆಯ ಹೋಬಳಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಆನಗೋಡು ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ನಿರ್ಮಾಣಗೊಂಡ ತಾತ್ಕಾಲಿಕ ನಿಲ್ದಾಣವು ಜನರಿಗೆ ಎಳ್ಳಷ್ಟೂ ಪ್ರಯೋಜನಕ್ಕೆ ಬಾರದಂತಾಗಿದೆ.
ರಾಷ್ಟ್ರೀಯ ಹೆದ್ದಾರಿ-4 ಹಾಗೂ ಮಂಡ್ಯ-ಹಡಗಲಿ ರಾಜ್ಯ ಹೆದ್ದಾರಿ-47 ಈ ಗ್ರಾಮದ ಮೂಲಕ ಹಾದು ಹೋಗಿವೆ. ನಿತ್ಯ ನೂರಾರು ಪ್ರಯಾಣಿಕರು ಇಲ್ಲಿಗೆ ಬಂದು ಹೋಗುತ್ತಾರೆ. ಆದರೆ, ಗ್ರಾಮದ ಸರ್ಕಲ್‌ನಲ್ಲಿ ವ್ಯವಸ್ಥಿತ ಬಸ್ ನಿಲ್ದಾಣವಿಲ್ಲದ ಕಾರಣ, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸುಡುವ ಬಿಸಿಲಲ್ಲಿ ರಸ್ತೆ ಬದಿಯಲ್ಲೇ ನಿಂತು ಬಸ್‌ಗಾಗಿ ಕಾಯಬೇಕಿದೆ.
ಗ್ರಾಮದ ಸರ್ಕಲ್‌ನಲ್ಲಿ ಬಸ್ ನಿಲುಗಡೆ ಮಾಡುವ ಸ್ಥಳದಿಂದ 60-70 ಅಡಿ ದೂರದಲ್ಲಿ ಆರ್‌ಡಿಪಿಆರ್ ಇಲಾಖೆ ಕಳೆದ ವರ್ಷ ತಾತ್ಕಾಲಿಕ ನಿಲ್ದಾಣ ನಿರ್ಮಿಸಿದೆ. ಆದರೆ, ಈ ನಿಲ್ದಾಣವು ಬಸ್‌ಗಳು ನಿಲ್ಲುವ ಜಾಗದಿಂದ ತುಂಬ ದೂರವಿರುವುದರಿಂದ ಪ್ರಯಾಣಿಕರು ಅಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಸ್ ಬಂದಾಗ ಓಡಿ ಹೋಗಿ ಹತ್ತುವುದು ವೃದ್ಧರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ದೊಡ್ಡ ಸವಾಲಾಗಿದೆ.
ಆನಗೋಡಿನಲ್ಲಿ ಪಿಯು ಕಾಲೇಜು, ಪ್ರೌಢಶಾಲೆ ಸೇರಿ ಹಲವು ಶಿಕ್ಷಣ ಸಂಸ್ಥೆಗಳಿದ್ದು, ನೂರಾರು ವಿದ್ಯಾರ್ಥಿಗಳು ಸುತ್ತಮುತ್ತಲ ಗ್ರಾಮಗಳಿಂದ ಇಲ್ಲಿಗೆ ಬರುತ್ತಾರೆ. ಇದರೊಂದಿಗೆ ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ಗಳು ಹಾಗೂ ನಾಡಕಚೇರಿಗಳಿಗೆ ಬರುವ ನೂರಾರು ಜನರಿಗೆ ಶೌಚಗೃಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ.
ಆನಗೋಡು ಮತ್ತು ಮಾಯ ಕೊಂಡ ಹೋಬಳಿ ಕೇಂದ್ರಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದರೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶಾಸಕರು ಕೂಡಲೇ ಈ ಬಗ್ಗೆ ಗಮನಹರಿಸಿ ಸುಸಜ್ಜಿತ ಬಸ್ ನಿಲ್ದಾಣ, ಶೌಚಗೃಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಆನಗೋಡು ಗ್ರಾಮದ ಸರ್ಕಲ್‌ನಲ್ಲಿರುವ ತಾತ್ಕಾಲಿಕ ಬಸ್ ನಿಲ್ದಾಣ ಕೇವಲ ಹೆಸರಿಗಷ್ಟೇ ಇದೆ. ಬಸ್ ನಿಲ್ಲುವ ಜಾಗಕ್ಕೂ ನಿಲ್ದಾಣಕ್ಕೂ ಸಂಬಂಧವೇ ಇಲ್ಲದಂತಿದೆ. ಕಾಲೇಜು ಮುಗಿದ ನಂತರ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲೇ ಗಂಟೆಗಟ್ಟಲೆ ಬಿಸಿಲಲ್ಲಿ ಕಾಯಬೇಕಿದೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ, ಬಸ್ ನಿಲ್ದಾಣಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು. ಈ ಭಾಗದ ಜನರ ತೊಂದರೆಗೆ ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕಿದೆ.