ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಕೈಲಾಸ ಮಾನಸ ಸರೋವರದ ಪರಿಸರದಲ್ಲಿ.
- ಕೈಲಾಸ ಮಾನಸ ಸರೋವರ ಯಾತ್ರೆ
- ಆಧ್ಯಾತ್ಮಿಕವಾದ ದೊಡ್ಡ ಶಕ್ತಿ
ದಾವಣಗೆರೆ : ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಕೈಲಾಸ ಮಾನಸ ಸರೋವರದ ಪರಿಕ್ರಮವನ್ನು ಅನೇಕ ಮಠಾಧೀಶರ ಜತೆಗೂಡಿ, ಯಶಸ್ವಿಯಾಗಿ ಪೂರೈಸಿ ಮರಳಿದ್ದಾರೆ.
ಯಾತ್ರೆಯಿಂದ ವಾಪಸಾಗಿ ಶನಿವಾರ ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಶ್ರೀಶೈಲ ಮಠಕ್ಕೆ ಆಗಮಿಸಿದ ಜಗದ್ಗುರುಗಳು ಸುದ್ದಿಗಾರರೊಂದಿಗೆ ಮಾತನಾಡಿ, ಪರಿಕ್ರಮದ ಫಲವನ್ನು ಲೋಕ ಕಲ್ಯಾಣಕ್ಕೆ ಅರ್ಪಿಸುವುದಾಗಿ ತಿಳಿಸಿದರು.
ಕೈಲಾಸ ಮಾನಸ ಸರೋವರ ಜಗತ್ತಿನ ಪ್ರಸಿದ್ಧ ಆಧ್ಯಾತ್ಮಿಕ, ಧಾರ್ಮಿಕ ಕೇಂದ್ರವಾಗಿದೆ. ಕೈಲಾಸ ಪರ್ವತ ಕೇವಲ ಜಡವಾದುದಲ್ಲ, ಚೈತನ್ಯಪೂರ್ಣವಾದ ಮಹಾ ಪರ್ವತ, ದೇವತೆಗಳ ವಾಸಸ್ಥಾನವಾಗಿದೆ ಎಂದು ಬಣ್ಣಿಸಿದರು.
ಮೌಂಟ್ ಎವರೆಸ್ಟ್ ಶಿಖರವನ್ನು ಇದುವರೆಗೆ 7 ಸಾವಿರಕ್ಕೂ ಹೆಚ್ಚು ಮಂದಿ ಏರಿದ್ದಾರೆ. ಆದರೆ ಇಲ್ಲಿಯವರೆಗೆ ಕೈಲಾಸ ಪರ್ವತವನ್ನು ಯಾರೂ ಹತ್ತಿಲ್ಲ. ಹತ್ತಲು ಪ್ರಯತ್ನಿಸಿದವರು ಒಂದಿಲ್ಲ ಒಂದು ತೊಂದರೆಗೆ ಒಳಗಾಗಿ ಅರ್ಧಕ್ಕೇ ವಾಪಸಾಗಿದ್ದಾರೆ. ಕೈಲಾಸದಲ್ಲಿ ಆಧ್ಯಾತ್ಮಿಕವಾದ ದೊಡ್ಡ ಶಕ್ತಿ ಇದೆ ಎಂದು ಹೇಳಿದರು.
ಆ ಪರ್ವತವನ್ನು ಹತ್ತಲು ಪ್ರಯತ್ನಿಸಿದವರೆಲ್ಲರೂ ಹಾನಿಗೆ ಒಳಗಾಗಿದ್ದರಿಂದ ಚೀನಾ ದೇಶ ಆ ಪರ್ವತವನ್ನು ಏರಲು ಶಾಶ್ವತ ನಿರ್ಬಂಧವನ್ನು ಹೇರಿದೆ. ಇದಕ್ಕೆ ಕಾರಣ ಅಲ್ಲಿರುವ ದೈವೀ ಶಕ್ತಿ. ದೂರದಿಂದಲೇ ಆ ಪರ್ವತದ ಪ್ರದಕ್ಷಿಣೆ ಮಾಡಿ ಭಕ್ತಿಯನ್ನು ಅರ್ಪಿಸುವ ಪದ್ಧತಿ ಇದೆ ಎಂದು ತಿಳಿಸಿದರು.
ದೇಶ ಸುಭಿಕ್ಷವಾಗಲಿ, ನಾಡು ಸಮೃದ್ಧವಾಗಲಿ, ಲೋಕ ಕಲ್ಯಾಣವಾಗಲಿ ಎಂದು ಕೈಲಾಸದೊಡೆಯನಿಗೆ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.
ದುರ್ಗಮ ಯಾತ್ರೆಯ ಸವಾಲು
ಈ ಯಾತ್ರೆ ಅತ್ಯಂತ ದುರ್ಗಮ, ಕಠಿಣವಾದ, ಮಾನಸಿಕ ಧೈರ್ಯ, ಸ್ಥೈರ್ಯವನ್ನು ಕೊನೆಯ ವರೆಗೂ ಪರೀಕ್ಷಿಸುವಂಥದು. ಅದೆಲ್ಲವನ್ನೂ ಸಹಿಸಿಕೊಂಡು ಅಲ್ಲಿಗೆ ತಲುಪಿದಾಗ, ಅದ್ಭುತವಾದ, ಶಬ್ದಗಳಿಗೆ ನಿಲುಕದ ಆಧ್ಯಾತ್ಮಿಕ ಶಕ್ತಿ ಕೈಲಾಸ ಪರ್ವತದಲ್ಲಿ ಇರುವುದು ಅನುಭವಕ್ಕೆ ಬಂದಿತು ಎಂದು ಶ್ರೀಶೈಲ ಜಗದ್ಗುರುಗಳು ತಿಳಿಸಿದರು.
ಅಲ್ಲಿರುವ ಎಲ್ಲ ಪರ್ವತಗಳು ಕಡಿದಾಗಿ, ಚೂಪಾಗಿ, ಚೌಕಾಗಿವೆ. ಕೈಲಾಸ ಪರ್ವತ ದೇವಸ್ಥಾನದ ಗೋಪುರ ಆಕಾರದಲ್ಲಿದೆ. ಅದನ್ನು ನೋಡಿದರೆ ಎಲ್ಲರೂ ತಲೆಬಾಗುವಂಥ ದಿವ್ಯತೆ, ಆಧ್ಯಾತ್ಮಿಕ ಶಕ್ತಿ (ಕಾಸ್ಮಿಕ್ ಎನರ್ಜಿ) ಕಾಣಿಸುತ್ತದೆ ಎಂದು ಹೇಳಿದರು.
ಮಾನಸ ಸರೋವರದಲ್ಲಿರುವ ನೀರು ಅತ್ಯಂತ ತಿಳಿ, ಶುದ್ಧ ಮತ್ತು ರುಚಿಯಾಗಿರುತ್ತದೆ. ಅದರ ಪಕ್ಕದಲ್ಲೇ ಇರುವ ರಾಕ್ಷಸ ಸರೋವರದ ನೀರು ಉಪ್ಪು, ಕಲ್ಮಶದಿಂದ ಕೂಡಿದ, ವಿಷಯುಕ್ತವಾಗಿರುತ್ತದೆ. ಒಂದೇ ಭೂಮಿಯಲ್ಲಿ ಎರಡು ಬಗೆಯ ನೀರಿರುವುದು ನೋಡಿದರೆ ಅದರ ಹಿಂದೆ ದೈವೀ ಶಕ್ತಿ ಇರುವುದನ್ನು ಗಮನಿಸಬಹುದು ಎಂದರು.
ಒಟ್ಟು ಮೂರು ದಿನಗಳ ಪರಿಕ್ರಮ. ಮೊದಲ ದಿನ 12 ಕಿ.ಮೀ, 2ನೇ ದಿನ 22 ಕಿ.ಮೀ. ಪಾದಯಾತ್ರೆ. ಮೊದಲನೇ ದಿನ ಅಷ್ಟು ಕಠಿಣವಾಗಿರಲಿಲ್ಲ, ಆದರೆ ಆಮ್ಲಜನಕದ ಕೊರತೆ, ಮೈನಸ್ ಡಿಗ್ರಿ ಉಷ್ಣಾಂಶದ, ಮೈಕೊರೆಯುವ ಚಳಿ ದೊಡ್ಡ ಸವಾಲು.
ಎರಡನೇ ದಿನದ ಪಾದಯಾತ್ರೆ ಅದಕ್ಕಿಂತ ಕಠಿಣ. ಸಮುದ್ರ ಮಟ್ಟಕ್ಕಿಂತ 18741 ಅಡಿ ಎತ್ತರಕ್ಕೆ ಹೋಗಬೇಕು. ಅತ್ಯಂತ ಕಡಿದಾದ ದಾರಿ. ಸಾಹಸಿಗಳು, ಆತ್ಮವಿಶ್ವಾಸ ಇರುವವರು ಮಾತ್ರ ಅಲ್ಲಿಗೆ ಹೋಗಬಲ್ಲರು. ಅಂಥದರಲ್ಲೂ ಕೆಲವರು ದೀಡ್ ನಮಸ್ಕಾರ ಹಾಕುತ್ತಿದ್ದರು, ಮತ್ತೆ ಕೆಲವರು ಕುದುರೆ ಮೇಲೆ ತೆರಳಿದರು. ಮೂರನೇ ದಿನ 8 ಕಿ.ಮೀ. ತೆರಳಬೇಕು. ಇಡೀ ಯಾತ್ರೆಯಲ್ಲಿ ಕುದುರೆಯನ್ನು ಬಳಸದೇ ಪಾದಯಾತ್ರೆಯ ಮೂಲಕವೇ ಪರಿಕ್ರಮ ಪೂರೈಸಿ, ಆರೋಗ್ಯವಾಗಿ ಮರಳಿರುವುದು ದೈವ ಸಂಕಲ್ಪ ಎಂದು ತಿಳಿಸಿದರು.
ಭಗವಂತನ ಪ್ರೇರಣೆ
ಮೊದಲು ವೀಸಾ ಬರಲಿಲ್ಲ, ಸರಿಯಾದ ಸಮಯಕ್ಕೆ ತಲುಪಲು ಆಗಲಿಲ್ಲ, ನಮ್ಮ ಸೇವೆಗೆ ಬರುವ ವ್ಯಕ್ತಿಯ ವೀಸಾ ಆಗಲಿಲ್ಲ. ಆತನನ್ನು ಬಿಟ್ಟು ಏಕಾಂಗಿಯಾಗಿ ಪಾದಯಾತ್ರೆ ಮಾಡಬೇಕಾಯಿತು. ಭಗವಂತ ಎಲ್ಲ ರೀತಿ ಪರೀಕ್ಷೆ ಮಾಡಿ ತನ್ನ ಬಳಿ ಕರೆಸಿಕೊಳ್ಳುತ್ತಾನೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ಜೀವಂತ ಇರುವಾಗ ಅಥವಾ ದೇಹ ಬಿಟ್ಟ ಮೇಲೆ ಕೈಲಾಸಕ್ಕೆ ಹೋಗಬೇಕು ಎಂಬುದು ಭಾರತದ ಪ್ರತಿಯೊಬ್ಬ ಆಸ್ತಿಕರ ಹೆಬ್ಬಯಕೆಯಾಗಿರುತ್ತದೆ. ನಾವು ಈ ಸಮಯದಲ್ಲಿ ಅಲ್ಲಿಗೆ ಯಾತ್ರೆ ಮಾಡಿಕೊಂಡು ಬರುತ್ತೇವೆ ಎನ್ನುವ ಕಲ್ಪನೆ ಇರಲಿಲ್ಲ. ಗುಂತಕಲ್‌ನ ಮಂಜುನಾಥ ಸ್ವಾಮಿ ಎಂಬ ಪ್ರವಾಸಿ ಏಜೆಂಟ್ ಕಳೆದ 4 ವರ್ಷಗಳಿಂದ ಯಾತ್ರೆಗೆ ಬರುವಂತೆ ಕೇಳುತ್ತಿದ್ದ. ಇದು ಕೈಲಾಸನಾಥನ ಕರೆ ಇರಬೇಕು ಎಂದು ಭಾವಿಸಿ ಯಾತ್ರೆಗೆ ಸಮ್ಮತಿ ಸೂಚಿಸಿದೆವು. ಅನೇಕ ಮಠಾಧೀಶರೂ ಜತೆಗೆ ಆಗಮಿಸಿದರು ಎಂದು ಹೇಳಿದರು.