ಮಾಯಕೊಂಡದ ಅಣಜಿಯಲ್ಲಿ ಇತ್ತೀಚಿಗೆ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ ಉದ್ಘಾಟಿಸಿದರು. ಚಂದ್ರಶೇಖರ್, ಅನಿತಾ, ಎಂ.ಅಶ್ವಿನಿ ನಾಯ್ಕ ಇದ್ದರು.Care
- ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ ಅಭಿಮತ
- ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ
- ಮಕ್ಕಳ ರಕ್ಷಣೆ ಮಾಡುವುದು ಪಾಲಕರ ಕರ್ತವ್ಯ
ಮಾಯಕೊಂಡ: ಪ್ರಸ್ತುತ ಮಹಿಳೆಯರು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್.ಕವಿತಾ ಅಭಿಮತ ವ್ಯಕ್ತಪಡಿಸಿದರು.
ಆನಗೋಡು ಹೋಬಳಿ ಅಣಜಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಇತ್ತೀಚಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಅಪ್ರಾಪ್ತ ವಯಸ್ಸಿನ ಮಕ್ಕಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿರುತ್ತದೆ. ಜತೆಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಹಲವಾರು ಜವಾಬ್ದಾರಿಗಳನ್ನು ಕಲಿಸುವ ಅನಿವಾರ್ಯತೆ ಇದೆ ಎಂದರು.
ಮಕ್ಕಳಿಲ್ಲದ ಪಾಲಕರು ಕಾನೂನು ಪ್ರಕಾರ ದತ್ತು ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯೆ ಅನಿತಾ ಮಾತನಾಡಿ, ಮಹಿಳೆಯರು ಸೂಕ್ತ ಕಾನೂನು ವಿಚಾರಗಳನ್ನು ತಿಳಿದುಕೊಳ್ಳುವುದು ಅತಿ ಅನಿವಾರ್ಯವಾಗಿದ್ದು, ಮಹಿಳೆಯರಿಗೆ ಇರುವ ಉಚಿತ ಕಾನೂನು ನೆರವುಗಳು ಕುರಿತು ತಿಳಿಸಿದರು.
ಧಗ್ರಾಯೋ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮವನ್ನು ಮಾತೃಶ್ರೀ ಹೇಮಾವತಿ ಅವರು ಮಹಿಳೆಯರಿಗೆ ವಿಶೇಷ ಅವಕಾಶಗಳನ್ನು ನೀಡುವ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಎಂದರು.
ಜ್ಞಾನ ವಿಕಾಸ ಕೇಂದ್ರಗಳ ಸದಸ್ಯರಿಗೆ ಪ್ರತಿ ಹಂತದಲ್ಲಿ ಮಹಿಳೆಯರ ಹಕ್ಕು ಮತ್ತು ಕಾನೂನು, ಸರ್ಕಾರಿ ಯೋಜನೆಗಳು, ಶಿಕ್ಷಣ, ಸ್ವ ಉದ್ಯೋಗ, ಕೌಟುಂಬಿಕ ಸಾಮರಸ್ಯ, ಸ್ಪರ್ಧಾತ್ಮಕ ಕಾರ್ಯಕ್ರಮಗಳು, ಸಂಸ್ಕೃತಿ ಸಂಸ್ಕಾರ, ಸ್ವ ಉದ್ಯೋಗ ಪ್ರೇರಣಾ ಶಿಬಿರಗಳ ಮೂಲಕ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲಾಗುತ್ತಿದೆ ಎಂದರು.
ದಿಶಾ ಕಮಿಟಿ ಸದಸ್ಯ ಎಸ್. ಕೆ.ಚಂದ್ರಶೇಖರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಮಹಿಳೆಯರು ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.
ಉಪನ್ಯಾಸಕಿ ಎಂ.ಅಶ್ವಿನಿ ನಾಯ್ಕ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯು ಅತಿ ಪ್ರಮುಖ ಸ್ಥಾನ ವಹಿಸಿದ್ದು ಈ ನಿಟ್ಟಿನಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಉತ್ತಮ ವಿಚಾರವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಆರ್ಥಿಕ ಸ್ವಾವಲಂಬನೆಯೂ ಪ್ರಸ್ತುತ ದಿನಗಳಲ್ಲಿ ಅತಿ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸ್ವ ಉದ್ಯೋಗಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಆದ್ದರಿಂದ ಪ್ರತಿ ಮಹಿಳೆಯು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಣಜಿ ಗ್ರಾಪಂ ಅಧ್ಯಕ್ಷ ಕೆ.ಮಂಜುನಾಥ್, ವಾಲ್ಮೀಕಿ ಸಮುದಾಯ ಭವನ ಅಧ್ಯಕ್ಷ ಬಿ.ಬಸಲಿಂಗಪ್ಪ, ಧಗ್ರಾಯೋ ತಾಲೂಕು ಯೋಜನಾಧಿಕಾರಿ ಡಿ.ಬಿ.ಸತೀಶ್, ವಾಲ್ಮೀಕಿ ಸಮುದಾಯ ಭವನ ಉಪಾಧ್ಯಕ್ಷ ರಾಜಣ್ಣ, ಕೋಶಾಧಿಕಾರಿ ರೇವಣಸಿದ್ದಪ್ಪ, ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರತಿಭಾ, ಮೇಲ್ವಿಚಾರಕಿ ಅಕ್ಷತಾ ಇತರರಿದ್ದರು.