ಹೊನ್ನಾಳಿಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಪ್ರಾರಂಭಕ್ಕೆ ವಿರೋಧಿಸಿ ಪಾಲಕರು, ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. Protest 
ದಾವಣಗೆರೆ

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಸ್ಥಗಿತಕ್ಕೆ ಪಾಲಕರು-ಮಕ್ಕಳ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಹೊನ್ನಾಳಿಯಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ
  • ಶಾಸಕ ಡಿ.ಜಿ. ಶಾಂತನಗೌಡಗೆ ಮನವಿ
ಹೊನ್ನಾಳಿ: ಹೊನ್ನಾಳಿ-ನ್ಯಾಮತಿ ತಾಲೂಕಿನ ಅರಬಗಟ್ಟೆ, ಯರೆಚಿಕ್ಕನ ಹಳ್ಳಿ ಹಾಗೂ ಸವಳಂಗ ಗ್ರಾಮದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಪ್ರಾರಂಭವನ್ನು ವಿರೋಧಿಸಿ ಪಾಲಕರು, ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲ್ಲಿ ಸೋಮವಾರ ಹೊನ್ನಾಳಿಯಲ್ಲಿ ಪ್ರತಿಭಟನೆ ನಡೆಸಿದರು. ಸಂಗೊಳ್ಳಿರಾಯಣ್ಣ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿ ಹಾಗೂ ಬಿಇಒ ಕಚೇರಿವರೆಗೆ ಪ್ರತಿಭಟನೆ ನಡೆಸಿ ಶಾಸಕರಿಗೆ ಮನವಿ ಸಲ್ಲಿಸಿದರು. Protest
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ಶಿಕ್ಷಣ ಅಭಿವೃದ್ಧಿ ಹೆಸರಲ್ಲಿ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಪ್ರಾರಂಭಿಸಲು ಮುಂದಾಗಿರುವುದು ಖಂಡನೀಯ ಎಂದರು.
ಈಗಾಗಲೆ ಬಿಇಒ ನೇತೃತ್ವದಲ್ಲಿ 3 ಕೆಪಿಎಸ್ ವ್ಯಾಪ್ತಿಯ ಶಾಲೆಗಳ ಎಸ್‌ಡಿಎಂಸಿ, ಶಾಲಾ ಮುಖ್ಯಶಿಕ್ಷಕರ ಸಭೆ ನಡೆಸಿದ್ದಾರೆ. ಆದರೆ, ಶಾಲೆಗಳ ವಿಲೀನಕ್ಕೆ ಪಾಲಕರು ಒಪ್ಪದ ಕಾರಣ ಸಭೆ ಅರ್ಧಕ್ಕೆ ನಿಂತು ಹೋಗಿದೆ. ವಿರೋಧಗಳ ಮಧ್ಯೆ ಕೆಪಿಎಸ್ ಶಾಲೆಗಳ ಆರಂಭಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕೆಪಿಎಸ್ ಶಾಲೆಗಳಿಗೆ ನೀಡುವ ಸೌಕರ್ಯಗಳನ್ನು ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳಿಗೆ ನೀಡಿದರೆ ಎಷ್ಟೋ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಅವಳಿ ತಾಲೂಕಿನಲ್ಲಿ ಆರಂಭಿಸಲು ಹೊರಟಿರುವ 3 ಕೆಪಿಎಸ್ ಶಾಲೆಗಳನ್ನು ನಿಲ್ಲಿಸಬೇಕು. ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ಮಾಡಿದಲ್ಲಿ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಅವಳಿ ತಾಲೂಕಿಗೆ 3 ಕೆಪಿಎಸ್ ಶಾಲೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ, ಪ್ರಸ್ತುತ ಇರುವ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ತಿಳಿಸಿದರು. ಅರಬಗಟ್ಟೆ, ಯರೆಚಿಕ್ಕನಹಳ್ಳಿ ಹಾಗೂ ಸವಳಂಗ ವ್ಯಾಪ್ತಿಗೆ ಬರುವ ಬನ್ನಿಕೋಡು, ಕೆಂಗಲಹಳ್ಳಿ, ಸರಸ್ವತಿ ಬಡಾವಣೆ, ಸೋಗಿಲು, ಮಾದಾಪುರ, ಕೊಡತಾಳು, ಮಾಚೇನಹಳ್ಳಿ, ಸಾಲಬಾಳು, ಮಾದನಬಾವಿ, ಬಸವನಹಳ್ಳಿ, ಬಿಜೋ ಗಟ್ಟೆಯ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾದರು. ಬಿಇಒ ನಿಂಗಪ್ಪ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಮುಚ್ಚಲು ಅವಕಾಶ ನೀಡುವುದಿಲ್ಲ ಹಾಗೂ ಕೆಪಿಎಸ್ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಎಂದು ಒತ್ತಾಯಿಸುವುದಿಲ್ಲ ಎಂದು ಭರವಸೆ ನೀಡಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ಮಧು ತೊಗಲೇರಿ, ಮಂಜುನಾಥ ಕುಕ್ಕುವಾಡ, ಹೊನ್ನಾಳಿ ಅವಳಿ ತಾಲೂಕಿನ ವಿವಿಧ ಶಾಲೆಯ ಎಸ್‌ಡಿಎಂಸಿ ಆಡಳಿತ ಮಂಡಳಿಯ ಮಲ್ಲಿಕಾರ್ಜುನ್, ರಮೇಶ್, ಮೇಘಾ, ವಸಂತರಾವ್, ರಾಜಶೇಖರ್, ಸಂತೋಷ್, ಚಂದ್ರಪ್ಪ, ಕರವೇ ವಿನಯ್, ಸುಮನ್, ಗಂಗಾಧರ್ ಇತರರಿದ್ದರು.