ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಅನಿಲ್ ಕುಮಾರ್, ಶ್ಯಾಮ್, ಮಲ್ಲಿಕಾರ್ಜುನ್, ಶಶಿ, ರಾಕೇಶ್, ವಿಶ್ವನಾಥ ಇತರರಿದ್ದರು.
- ಮಾಯಕೊಂಡ ಶಾಸಕರ ಲಂಚಗುಳಿತನ
- ದಂಧೆಕೋರರಿಗೆ ಪೊಲೀಸರೇ ಕಾವಲುಗಾರರು
- ಎಂ.ಬಸವರಾಜನಾಯ್ಕ ಗಂಭೀರ ಆರೋಪ
ದಾವಣಗೆರೆ: ಜಿಲ್ಲಾದ್ಯಂತ ಇಸ್ಪೀಟ್ ಜೂಜಾಟ ಮಿತಿಮೀರಿದೆ. ದಂಧೆಕೋರರ ರಕ್ಷಣೆಗೆ ನಿಂತ ಪೊಲೀಸ್ ಅಧಿಕಾರಿಗಳಿಂದಲೇ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ಲಂಚ ವಸೂಲಿಗೆ ಇಳಿದಿದ್ದಾರೆ ಎಂದು ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಗಂಭೀರ ಆರೋಪ ಮಾಡಿದರು.
ಗುಡ್ಡಗಾಡು ಪ್ರದೇಶ, ರೈತರ ಜಮೀನುಗಳಲ್ಲಿ ಇಸ್ಪೀಟ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇದರಿಂದಾಗಿ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬರುವಂತಾಗಿದೆ. ಪೊಲೀಸರು ಕೂಡ ಅಕ್ರಮ ದಂಧೆಕೋರರಿಗೆ ಕಾವಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮಾಯಕೊಂಡ ಕ್ಷೇತ್ರದ ಗುಡಾಳು ಗ್ರಾಮದ ಗುಡ್ಡದಲ್ಲಿ ನಿತ್ಯ 200 ಜನರು ಜೂಜಾಟ ಆಡುತ್ತಿದ್ದಾರೆ. ಬಸವಾಪಟ್ಟನದ ಚಿಕ್ಕಗುಡ್ಡದಮ್ಮ ದೇಗುಲದ ಬೆಟ್ಟ ಹಾಗೂ ಚಿನ್ಮೂಲಾದ್ರಿ ಬೆಟ್ಟ ಮತ್ತು ಪರ್ವತ ಶ್ರೇಣಿಯಲ್ಲಿ ನಿತ್ಯವೂ ಈ ದಂಧೆ ನಿರ್ವಾಹತವಾಗಿದೆ. ಸಾರ್ವಜನಿಕರು ದೂರು ನೀಡಿದರೆ, ಕೆಲ ಪೊಲೀಸ್ ಅಧಿಕಾರಿಗಳು ‘ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳಿ’ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಅಕ್ರಮದ ವಿರುದ್ಧ ಸಾಗರಪೇಟೆ ವೃತ್ತದಲ್ಲಿ ಬಿಜೆಪಿಯಿಂದ ಎರಡು ಬಾರಿ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಶಾಸಕರ ಆದೇಶವಿದ್ದು, ನಿತ್ಯ ಅವರಿಗೇ ಮಾಮೂಲಿ ತಲುಪುತ್ತಿದೆ ಎಂಬುದಾಗಿ ಪೊಲೀಸ್ ಅಧಿಕಾರಿಗಳೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅಕ್ರಮ ನಿಲ್ಲದಿದ್ದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ರೂಪಿಸಲಾಗುವುದು. ಇಸ್ಪೀಟ್ ದಂಧೆ ತಡೆಯದಿದ್ದಲ್ಲಿ ಜಿಲ್ಲಾದ್ಯಂತ ಹೋರಟಕ್ಕಿಳಿಯಲಾಗುವುದು ಎಂದು ಹೇಳಿದರು.
ಮಾಯಕೊಂಡ ಮಂಡಲ ಅಧ್ಯಕ್ಷ ಬಿ.ಜೆ.ಸಚಿನ್ ಮಾತನಾಡಿ, ಮಾಯಕೊಂಡ ಕ್ಷೇತ್ರದಲ್ಲಿ ಮೂರು ಠಾಣಾ ವ್ಯಾಪ್ತಿಯಲ್ಲೂ ಇಸ್ಪೀಟ್ ದಂಧೆ ಜೊರಾಗಿದೆ. ಪ್ರತಿ ತಿಂಗಳು ಇಲಾಖೆಯ ಉನ್ನತ ಅಧಿಕಾರಿಗಳ ವರ್ಗಾವಣೆ ಹಾಗೂ ಪ್ರೋತ್ಸಾಹಕ್ಕಾಗಿ ಕನಿಷ್ಠ 15 ರಿಂದ 40 ಲಕ್ಷ ರೂ. ಲಂಚ ನೀಡುತ್ತಿರುವುದೇ ಈ ಎಲ್ಲ ಅಕ್ರಮಕ್ಕೆ ಮೂಲವಾಗಿದೆ ಎಂದರು.
ಮಾಯಕೊಂಡ ಶಾಸಕರು ತಕ್ಷಣವೇ ತಮ್ಮ ನಡವಳಿಕೆ ಬದಲಿಸಿಕೊಳ್ಳಬೇಕು. ಅಧಿಕಾರಿಗಳಿಂದ ಲಂಚ ವಸೂಲಿ ಹಾಗೂ ಹೊಸ ಕಾಮಗಾರಿಗೆ ಶೇ.20. ಹಳೇ ಕಾಮಗಾರಿಗಳಿಗೆ ಶೇ.15ರಷ್ಟು ಕಮೀಷನ್ ಪಡೆಯುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅನಿಲ್ ಕುಮಾರ್, ಶ್ಯಾಮ್, ಮಲ್ಲಿಕಾರ್ಜುನ್, ಶಶಿ, ರಾಕೇಶ್, ವಿಶ್ವನಾಥ ಇತರರಿದ್ದರು.