ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕಾಯಕಲ್ಪ ಕಂಡ ದಾವಣಗೆರೆ ಹೊರವಲಯದ ಯರಗುಂಟೆ ಕೆರೆ.
- ಐದು ವರ್ಷದಲ್ಲಿ 35 ಜಲಪಾತ್ರೆಗಳ ಕಾಯಕಲ್ಪ
- 2.77 ಕೋಟಿ ರೂ. ನೆರವಿತ್ತ ಧರ್ಮಸ್ಥಳ ಸಂಸ್ಥೆ
- ಕೃಷಿಕರಿಗೂ ಹಿಗ್ಗು ತಂದ ಅಂತರ್ಜಲ ವೃದ್ಧಿ
ದಾವಣಗೆರೆ: ಕೆರೆಗಳ ಹೂಳೆತ್ತಿ ಅಂತರ್ಜಲ ಸಮಸ್ಯೆ ತಗ್ಗಿಸುವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹತ್ವಾಕಾಂಕ್ಷಿ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮ ದಾವಣಗೆರೆ ಜಿಲ್ಲೆಗೆ ಫಲದಾಯಕ ಎನಿಸಿದೆ.
ಆಯಾ ಸ್ಥಳೀಯ ಸಂಸ್ಥೆ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಜಿಲ್ಲೆಯ ಅನೇಕ ಜಲಪಾತ್ರೆಗಳು ಪುನಶ್ಚೇತನಗೊಂಡಿವೆ. ಮಳೆನೀರು ಇಂಗಿಸಿ ಅಂತರ್ಜಲ ಪ್ರಮಾಣ ಹಿಗ್ಗಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದು ಅನೇಕ ರೈತ ಕುಟುಂಬಕ್ಕೆ ಶಕ್ತಿ ತುಂಬಿವೆ. ಪ್ರಾಣಿ ಮತ್ತು ಪಕ್ಷ್ಷಿ ಸಂಕುಲಕ್ಕೂ ಜಲಸಂಪತ್ತು ಒದಗಿಸಿವೆ.
2021-22ರ ಅವಧಿಯಿಂದ ಇದುವರೆಗೆ ಕಳೆದೈದು ವರ್ಷದಲ್ಲಿ ಜಿಲ್ಲೆಯ 35 ಕೆರೆಗಳು ಕಾಯಕಲ್ಪ ಕಂಡಿವೆ. ಒಟ್ಟು 261.5 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 2.77 ಕೋಟಿ ರೂ.ಗಳ ದೊಡ್ಡ ಇಡುಗಂಟನ್ನು ಧರ್ಮಸ್ಥಳ ಸಂಸ್ಥೆ ಇರುವರೆಗೆ ಧಾರೆ ಎರೆದಿದೆ. ಪ್ರತಿ ಮಳೆಗಾಲದಲ್ಲಿ ಅನೇಕ ಕೆರೆಗಳ ಒಡಲು ಜೀವಕಳೆಗೆ ಸಾಕ್ಷಿಯಾಗಲಿದೆ.
ಗ್ರಾಮಗಳಲ್ಲಿ ಕುಡಿವ ನೀರಿಗಾಗಿ ಇರುವ ಕೆರೆಗಳನ್ನು ದುರಸ್ತಿಗೊಳಿಸಬೇಕೆಂಬ ಹೇಮಾವತಿ ವೀರೇಂದ್ರ ಹೆಗ್ಗಡೆ ಅವರ ಸದಾಶಯವೇ 2016-17ರಲ್ಲಿ ಯೋಜನೆಯಾಗಿ ಮಾರ್ಪಾಡಾಯಿತು.
ಸರ್ಕಾರಿ ಕೆರೆಯನ್ನು ಸರ್ವೇ ಮಾಡಿಸಿ ಒತ್ತುವರಿ ತೆರವಾದ ಕೆರೆ ಆಯ್ಕೆ ಮಾಡಲಾಗುತ್ತದೆ. ಮಳೆ ಅಥವಾ ಇತರ ಮೂಲಗಳಿಂದ ನೀರು ತುಂಬುವ ಸಾಧ್ಯತೆ ಇರುವ ಹಾಗೂ ನಾಲೆಗಳ ಮೂಲಕ ಹರಿದುಬರುವ ವ್ಯವಸ್ಥೆ ಇರಬೇಕು. ಇಲ್ಲಿ ತೆಗೆಯುವ ಹೂಳನ್ನು ಸ್ಥಳೀಯರು ಸಾಗಾಟ ಮಾಡಬೇಕು.
ಕೆರೆ ಕಾಮಗಾರಿಗೂ ಮುನ್ನ ಸ್ಥಳೀಯ ಸಂಸ್ಥೆಯ ಅಧಿಕಾರಿ, ಅಧ್ಯಕ್ಷರಿಂದ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. 15 ಮಂದಿ ಸ್ಥಳೀಯರು ಒಳಗೊಂಡ ಕೆರೆ ಅಭಿವೃದ್ಧಿ ಸಮಿತಿ ರಚಿಸಿ, ಕೆರೆ ಕಾಮಗಾರಿ ಪೂರ್ಣಗೊಂಡ ನಂತರ ಹಸ್ತಾಂತರ ಮಾಡಲಾಗುತ್ತದೆ. ಹೂಳೆತ್ತಲಾದ ಮಣ್ಣಿನ ವಿಲೇವಾರಿ ಜತೆಗೆ ಕೆರೆಯ ಸ್ವಚ್ಛತೆಯ ಹೊಣೆ ಸಮಿತಿಯದಾಗಿದೆ. ಕಾಮಗಾರಿಗೆ ರಿಯಾಯಿತಿ ದರದಲ್ಲಿ ಜೆಸಿಬಿ/ಹಿಟಾಚಿ ಯಂತ್ರ ಒದಗಿಸಲಾಗುತ್ತದೆ. \
ಹಿರೇಉಡ ತಾಂಡ, ಕೊರಟಿಕೆರೆ, ಪಾಂಡೋಮಟ್ಟಿ, ಕಂಚಿಗನಾಳ್, ಗೊಪ್ಪೇನಹಳ್ಳಿ, ಚಿಕ್ಕಬೆನ್ನೂರು, ಹಿರೇಉಡ, ದೋಣಿಹಳ್ಳಿ, ಜೋಳದಾಳ್, ಆಗರಬನ್ನಿಹಟ್ಟಿ, ಜಿ. ಮಲ್ಲಿಗೇನಹಳ್ಳಿ, ಜಿ.ಟಿ. ಕಟ್ಟೆ, ಹರಳಹಳ್ಳಿ, ಹೊಸ ಪಾಳ್ಯ, ಕತ್ತಿಗೆ, ಮಾದೇನಹಳ್ಳಿ, ಕುಂಕುವ, ರಾಮೇಶ್ವರ, ನೇರ್ಲಿಗೆ, ಕೋಲ್ಕುಂಟೆ, ಮಲ್ಲಾಪುರ, ಆಲೂರು, ಕತ್ತಲಗೆರೆ, ಚಿರಡೋಣಿ, ಕಾಟೇನಹಳ್ಳಿ, ಲಕ್ಕಾಪುರ, ಚಿಕ್ಕಮ್ಮನಹಳ್ಳಿ, ಬಿಸ್ತುವಳ್ಳಿ, ಹವಳದಂಡಿ, ಯರಗುಂಟೆೆ, ವಿಠ್ಠಲಾಪುರ, ಒಡೆಯರ ಹತ್ತೂರು, ಕೆಂಗಾಪುರ, ಸಂತೇಬೆನ್ನೂರು ಮೊದಲಾದ ಗ್ರಾಮಗಳಲ್ಲಿನ ಕೆರೆಗಳು ಐದು ವರ್ಷದಲ್ಲಿ ದುರಸ್ತಿಭಾಗ್ಯ ಕಂಡಿವೆ.
ಕಳೆದ ವರ್ಷ 20 ಎಕರೆ ವ್ಯಾಪ್ತಿಯ ವಿಶಾಲವಾದ, ಹೊನ್ನಾಳಿ ತಾಲೂಕಿನ ಒಡೆಯರಹತ್ತೂರು ಗ್ರಾಮದ ಅಯ್ಯನಕೆರೆ 12.50 ಲಕ್ಷ ರೂ., ದಾವಣಗೆರೆ ತಾಲೂಕಿನ ವಿಠ್ಠಲಾಪುರ ಕೆರೆಗೆ 8.34 ಲಕ್ಷ ರೂ. ನಲ್ಲಿ ಅಭಿವೃದ್ಧಿ ಕಂಡಿವೆ. ಈ ವರ್ಷ ಆಯಾ ಗ್ರಾಪಂಗಳು ನೀಡುವ ಪ್ರಸ್ತಾವದಡಿ ಏಳು ಕೆರೆ ಆಯ್ದುಕೊಳ್ಳಬೇಕಿದೆ. ಸದ್ಯಕ್ಕೆ ಗುಡಾಳ್ ಗ್ರಾಮದ ಕೆರೆಯಲ್ಲಿ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ದಾವಣಗೆರೆ ನಗರಕ್ಕೆ ಹೊಂದಿಕೊಂಡಂತೆ 5 ಎಕರೆ ಜಾಗ ನೀಡಿದರೆ ಅಲ್ಲಿ ಮಾದರಿಯಾದ ಹೊಸ ಕೆರೆ ಅಭಿವೃದ್ಧಿ ಪಡಿಸುವ ಉದ್ದೇಶವಿದೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ಸಂಸ್ಥೆಯು ಮನವಿಪತ್ರವನ್ನೂ ಸಲ್ಲಿಸಿದೆ ಎನ್ನುತ್ತಾರೆ ಸಿಬ್ಬಂದಿ ಪ್ರವೀಣ್.
ದಾವಣಗೆರೆ ಹೊರವಲಯದ (45ನೇ ವಾರ್ಡ್) ಯರಗುಂಟೆ ಗ್ರಾಮದಲ್ಲಿ ಅಭಿವೃದ್ಧಿಗೊಂಡ ಕೆರೆಯು ಬಾಯಾರಿದೆ! ಇನ್ನೂ ಹಸ್ತಾಂತರಗೊಳ್ಳದ ಈ ಕೆರೆಗೆ 10 ಲಕ್ಷ ರೂ.ಗಳ ತಂತಿಬೇಲಿ ಹಾಕಿಸುವ ಜತೆಗೆ 50ಕ್ಕೂ ಹೆಚ್ಚು ಹಣ್ಣಿನ ಗಿಡ ನೆಟ್ಟು ಸುಂದರ ಪರ‌್ಯಾವರಣ ನಿರ್ಮಿಸುವ ಉದ್ದೇಶೆ ಧರ್ಮಸ್ಥಳ ಸಂಸ್ಥೆಗಿದೆ.
ದಾವಣಗೆರೆ ನಗರಪಾಲಿಕೆ ವತಿಯಿಂದ ಒತ್ತುವರಿ ತೆರವಾದ ಬಳಿಕ, ಧರ್ಮಸ್ಥಳ ಕೈಗೆತ್ತಿಕೊಂಡ ಸರ್ಕಾರಿ ಗೋಕಟ್ಟೆ ಕೆರೆಯ ಕಾಯಕಲ್ಪ ಎರಡು ವರ್ಷದಲ್ಲಿ ಪೂರ್ಣಗೊಂಡಿದೆ. 5 ಲಕ್ಷ ರೂ. ಮೊತ್ತದಲ್ಲಿ 1 ಎಕರೆ 30 ಗುಂಟೆ ಜಾಗದ ಕೆರೆ ಪ್ರದೇಶದ ಹೂಳೆತ್ತಲಾಗಿದೆ. ಪಾಲಿಕೆ ವತಿಯಿಂದ 38 ಲಕ್ಷ ರೂ. ವೆಚ್ಚದಲ್ಲಿ, ಮಣ್ಣಿನ ಸವಕಳಿ ತಪ್ಪಿಸಲು ಸುತ್ತಲೂ ಕಲ್ಲು ಹಾಸು ಅಳವಡಿಸಲಾಗಿದೆ.
ಮಳೆಗಾಲದಲ್ಲಿ ಹೆಚ್ಚಿನ ಮಳೆಯಾದಲ್ಲಿ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ನಿಲ್ಲಲಿದೆ. ಇದರ ಹೊರತಾಗಿ ನೀರಿನ ಮೂಲವಿಲ್ಲ. ಈ ಜಲಪಾತ್ರೆಗೆ ಶಾಶ್ವತ ನೀರೊದಗಿಸುವ ವ್ಯವಸ್ಥೆಯಾದಲ್ಲಿ ಜನ-ಜಾನುವಾರುಗಳಿಗೂ ನೆರವಾಗಲಿದೆ. ಈ ಬಗ್ಗೆ ಜಿಲ್ಲಾಡಳಿತ, ನಗರಪಾಲಿಕೆ ಗಮನ ಹರಿಸಬೇಕಿದೆ.
ನಮ್ಮೂರು ನಮ್ಮ ಕೆರೆ ಯೋಜನೆಯಿಂದ ಆಯಾ ಗ್ರಾಮ, ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ. ಹೂಳೆತ್ತಿದ ಮಣ್ಣು ರೈತರು ಪಡೆಯಲು ಅನುಕೂಲವಾಗಿದೆ. ಈಗಾಗಿ ಜನರು ಸರ್ಕಾರದ ಯೋಜನೆಗಳ ಬದಲಾಗಿ ಧರ್ಮಸ್ಥಳ ಸಂಸ್ಥೆಯಿಂದಲೇ ಕೆರೆ ಪುನಶ್ಚೇತನಕ್ಕೆ ಹೆಚ್ಚು ಬೇಡಿಕೆ ಬರುತ್ತಿವೆ. ಕೆರೆ ಅಂಗಳದಲ್ಲಿ ಅರಣ್ಯೀಕರಣ ಹಾಗೂ ಸ್ವಚ್ಛತೆ ಕಾರ್ಯದಲ್ಲಿ ಸಂಸ್ಥೆಯಿಂದ ಸಹಕಾರ ನೀಡುವ ಜತೆಗೆ ಫಾಲೋಅಪ್ ಮಾಡಲಾಗುತ್ತದೆ.
— ಎಂ. ಲಕ್ಷ್ಮಣ್,- ಜಿಲ್ಲಾ ನಿರ್ದೇಶಕರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ.