ಎಸ್‌ಐಆರ್ ವಿರೋಧಿಸಿ ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಸಹಯೋಗದಲ್ಲಿ ಶನಿವಾರ ದಾವಣಗೆರೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು. ಅನೀಸ್ ಪಾಷಾ, ದಿನೇಶ್ ಕೆ ಶೆಟ್ಟಿ, ದಾದಾಪೀರ್ ನವಿಲೇಹಾಳ್, ಅಪ್ಸರ್ ಕೊಡ್ಲಿಪೇಟೆ, ಅನಿತಾಬಾಯಿ ಮಾಲತೇಶ್, ರಾಜೇಶ್ವರಿ, ಕವಿತಾ, ದಾಕ್ಷಾಯಣಮ್ಮ ಇತರರಿದ್ದರು.  
ದಾವಣಗೆರೆ

ಎಸ್‌ಐಆರ್ ವಿರೋಧಿಸಿ ಸಂಘಟನೆಗಳ ಹೋರಾಟ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ತೀವ್ರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಹೇಳಲಿ ನಕಾರ
  • ಪ್ರಜಾತಂತ್ರದ ಅಡಿಪಾಯಕ್ಕೆ ಧಕ್ಕೆ ತರುವ ಹುನ್ನಾರ
  • ಗ್ರಾಪಂ, ವಾರ್ಡ್‌ವಾರು ಕರಡು ಪಟ್ಟಿ ಪ್ರಕಟಿಸಲಿ
ದಾವಣಗೆರೆ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಸಹಯೋಗದಲ್ಲಿ ಶನಿವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು, ಚುನಾವಣಾ ಆಯೋಗದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.
ಎಸ್‌ಐಆರ್ ಮೂಲಕ ದೇಶದ ಪ್ರಜಾತಂತ್ರದ ಅಡಿಪಾಯ ಬುಡಮೇಲು ಮಾಡುವ ಹಾಗೂ ದೇಶವನ್ನು ಸಂವಿಧಾನದ ನಿರ್ದೇಶನಕ್ಕೆ ವಿರುದ್ಧ ದಿಕ್ಕಿನಲ್ಲಿ ಒಯ್ಯುವ ಪ್ರಯತ್ನ ನಡೆದಿದೆ. ಕರ್ನಾಟಕ ಅಪಾಯದ ಹೊಸ್ತಿಲಲ್ಲಿದೆ. ರಾಜ್ಯ ಸರ್ಕಾರ ಈ ಯೋಜನೆ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸದ್ಯದ ಸ್ವರೂಪದ ಎಸ್‌ಐಆರ್ ಒಪ್ಪದಿರುವ ಬಗ್ಗೆ ಕರ್ನಾಟಕ ಸರ್ಕಾರ ಘೋಷಿಸುವ ಜತೆಗೆ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಐದು ಮೂಲ ಬದಲಾವಣೆಗಳನ್ನು ಮಾಡದಿದ್ದರೆ ಸಹಕರಿಸುವುದಿಲ್ಲ ಎಂದೂ ಸ್ಪಷ್ಟವಾಗಿ ತಿಳಿಸಬೇಕು ಎಂದರು.
ಲಾಜಿಕಲ್ ಡಿಸ್ಕ್ರಿಪೆನ್ಸಿ ಎನ್ನುವ ಅತಂತ್ಯ ಅವೈಜ್ಞಾನಿಕ, ಅವಾಸ್ತವಿಕ, ಅಪಾರದರ್ಶಕ ಹಾಗೂ ದುರುದ್ದೇಶಪೂರಿತ ವಿಧಾನವನ್ನು ಕರ್ನಾಟಕದಲ್ಲಿ ಅಳವಡಿಸಬಾರದು. ಕರಡು ಪಟ್ಟಿ ತಯಾರಾದ ನಂತರ ಯಾರ ಮತವನ್ನಾದರೂ ಸುಲಭವಾಗಿ ಹುಡುಕುವ ಹಾಗೂ ಪಾರದರ್ಶಕವಾಗಿರಿಸುವ ಕಂಪ್ಯೂಟರ್ ರೀಡಬಲ್ ಫಾರ್ಮ್ಯಾಟಿನಲ್ಲಿ ನೀಡಬೇಕು.
ಮತದಾರರ ಪಟ್ಟಿ ಅಂತಿಮಗೊಳಿಸುವ ಮುನ್ನ ಚುನಾವಣಾ ಆಯೋಗದ ಮ್ಯಾನ್ಯುಯಲ್‌ನ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್‌ಗಳಲ್ಲಿ ಮತದಾರರ ಕರಡು ಪಟ್ಟಿಯನ್ನು ಬಹಿರಂಗವಾಗಿ ಪ್ರಕಟಿಸಿ, ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ, ಮುಕ್ತವಾದ ರೀತಿಯಲ್ಲಿ, ಎಲ್ಲರ ಸಮ್ಮುಖದಲ್ಲಿ ತಿದ್ದುಪಡಿ ಮಾಡಬೇಕು. ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ 1 ವರ್ಷ ಅವಧಿ ನಿಗದಿ ಮಾಡಬೇಕು.
ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಅಲೆಮಾರಿಗಳು, ಆದಿವಾಸಿಗಳು, ದಲಿತರು, ಬಡ ಅಲ್ಪಸಂಖ್ಯಾತರು ಮುಂತಾದ ದಾಖಲೆಗಳ ಗಂಭೀರ ಸಮಸ್ಯೆ ಎದುರಿಸುತ್ತಿರುವ ಜನ ವರ್ಗಗಳು ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ವಂಚಿತರಾಗದಂತೆ ಒಳಗೊಳ್ಳಲು ಅವರಿಗಾಗಿ ವಿಶೇಷ ಸರಳ ಕ್ರಮಗಳನ್ನು ರೂಪಿಸಬೇಕು.
ರಾಜ್ಯದ ಒಬ್ಬ ಅರ್ಹ ಮತದಾರರೂ ಸಹ ಜನ್ಮಸಿದ್ಧ ಹಕ್ಕನ್ನು ಕಳೆದುಕೊಳ್ಳದಂತೆ ರಾಜ್ಯ ಸರ್ಕಾರ ವಿಶೇಷ ಕ್ರಮಗಳಿಗೆ ಮುಂದಾಗಬೇಕು. : ವೈಜ್ಞಾನಿಕ, ಜನಸ್ನೇಹಿ ವಿಧಾನವನ್ನು ಬಳಸಿ ರಾಜ್ಯ ಚುನಾವಣಾ ಆಯೋಗದ ಮೂಲಕ ಸ್ಥಳೀಯ ಸಂಸ್ಥೆಗಳಿಗಾಗಿ ತಯಾರಿಸಲಾಗುವ ರಾಜ್ಯ ಮತದಾರರ ಪಟ್ಟಿ ಪರಿಷ್ಕರಿಸಬೇಕು.
ವಿಶೇಷ ಗ್ರಾಮ ಸಭೆ, ವಾರ್ಡ್ ಸಭೆಗಳನ್ನು ನಡೆಸಿ ಮತದಾರರ ಪಟ್ಟಿ ಪರಿಶೀಲಿಸಿ ಕರ್ನಾಟಕದ ಪಕ್ಕಾ ಪಟ್ಟಿ ಸಿದ್ಧಪಡಿಸಬೇಕು. ವಿಶೇಷ ಗ್ರಾಮಸಭೆಗಳಲ್ಲಿ ಪರಿಶೀಲನೆಗೊಂಡು ಧೃಡಗೊಂಡ ಮತದಾರರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು. ದಾಖಲೆ ಇಲ್ಲದವರಿಗೆ ನಿವಾಸಿ ಧೃಡೀಕರಣ ಪತ್ರವನ್ನು ತಕ್ಷಣವೇ ವಿತರಿಸಬೇಕು.
ಪ್ರ್ರತಿ ಗ್ರಾಪಂ, ವಾರ್ಡ್‌ವಾರು ಮತದಾರರ ನೆರವು ಕೇಂದ್ರಗಳನ್ನು ತೆರೆದು ಜನರಿಗೆ ಅಗತ್ಯವಾದ ಮೂಲ ದಾಖಲೆಗಳನ್ನು ತ್ವರಿತವಾಗಿ ನೀಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಚಾಲಕರಾದ ಅನೀಸ್ ಪಾಷಾ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ದಾದಾಪೀರ್ ನವಿಲೇಹಾಳ್, ರವಿನಾರಾಯಣ್, ಜಸ್ಟಿನ್ ಜೈಕುಮಾರ್, ಅಪ್ಸರ್ ಕೊಡ್ಲಿಪೇಟೆ, ಎಚ್.ಸಿ. ಮಲ್ಲಪ್ಪ, ಇಸ್ಮಾಯಿಲ್ ದೊಡ್ಮನಿ, ತಾಹಿರ್, ಹಾಲಪ್ಪ, ಅಯೂಬ್ ಪೈಲ್ವಾನ್, ಅನಿತಾ ಬಾಯಿ, ಮೈನುದ್ದೀನ್, ಸಲ್ಮಾ ಮಲ್ಲಿಕಾರ್ಜುನ್, ಗಿರೀಶ್, ಪ್ರಕಾಶ, ಮಂಜುನಾಥ, ಅಂಜನಪ್ಪ ಮತ್ತು ಇತರರು ಪಾಲ್ಗೊಂಡಿದ್ದರು.