ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಪ್ರಕಾಶ್ ನೇರ್ಲಿಗೆ, ರಾಜೇಂದ್ರ ಗೋಪನಾಳ್, ವೀರೇಶ್ವರ ಮರಡಿ, ಜಿ.ಡಿ. ಬಸವರಾಜಪ್ಪ, ಎಂ.ಎಸ್. ಶಿವಕುಮಾರ್ ಬಾಡಾ ಇದ್ದರು.
- ಗೋವು ಆಧಾರಿತ ಉತ್ಪನ್ನಗಳ ಮಾರಾಟ, ಪುಸ್ತಕ ಪ್ರದರ್ಶನ
- ವಿವಿಧೆಡೆಗಳಿಂದ 800 ರೈತರು ಭಾಗಿಯಾಗುವ ನಿರೀಕ್ಷೆ
- ಕೆಲವು ಬೇಡಿಕೆಗಳ ಈಡೇರಿಕೆಗೆ ಕಿಸಾನ್ ಸಂಘ ಒತ್ತಾಯ
ದಾವಣಗೆರೆ: ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕ, ದಾವಣಗೆರೆ ಸಾವಯವ ರೈತರ ಬಳಗದ ಸಹಯೋಗದಲ್ಲಿ ದಾವಣಗೆರೆ ತಾಲೂಕಿನ ಹಿರೇತೊಗಲೇರಿ ಗ್ರಾಮದ ಶ್ರೀಮತಿ ಕಮಲಮ್ಮ ಗುರುಶಾಂತಪ್ಪ ಸಮುದಾಯ ಭವನದಲ್ಲಿ ಜು.20ರಂದು ಸಾವಯವ ರೈತರ ಸಮ್ಮೇಳನ ನಡೆಯಲಿದೆ.
ಭಾರತೀಯ ಕಿಸಾನ್ ಸಂಘದ ಮೂರನೇ ವರ್ಷದ ಕಾರ್ಯಕ್ರಮ ಇದಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 800ಕ್ಕೂ ಸಾವಯವ ರೈತರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಾಲೂಕು ಘಟಕದ ಪ್ರಕಾಶ್ ನೇರ್ಲಿಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಸಾಯನಿಕ ಗೊಬ್ಬರದಿಂದ ಮುಕ್ತರಾಗಿ ಸಾವಯವ ಗೊಬ್ಬರದ ಮೂಲಕವೂ ಅನೇಕರು ಮಾದರಿ ಕೃಷಿ ನಡೆಸುತ್ತಿದ್ದಾರೆ. ಗಿಡಮೂಲಿಕೆ ಮೂಲಕ ಔಷಧ, ಗೊಬ್ಬರ, ಕೀಟನಾಶಕ ತಯಾರಿ ಬಗ್ಗೆಯೂ ಕೃಷಿಕರಿಗೆ ತಿಳಿಸುವ ಹಿನ್ನೆಲೆಯಲ್ಲಿ ಈ ಸಮ್ಮೇಳನ ನಡೆಯುತ್ತಿದೆ.
ಸಾವಯವ ಕೃಷಿ ಕುರಿತಾದ ಪುಸ್ತಕಗಳ ಪ್ರದರ್ಶನ, ಗೋವು ಆಧಾರಿತ ಉತ್ಪನ್ನಗಳ ಮಾರಾಟ ಇರಲಿದೆ. ಇದೇ ವೇಳೆ ಸಾವಯವ ಕೃಷಿ ಕುರಿತಂತೆ 40 ಅಂಶಗಳುಳ್ಳ ಪುಸ್ತಕ ಬಿಡುಗಡೆಯಾಗಲಿದೆ. ಹಾಗೂ ಕೃಷಿಯಲ್ಲಿ ದೇಶೀ ಗೋವುಗಳ ಮಹತ್ವ ಹಾಗೂ ಪ್ರಾತ್ಯಕ್ಷಿತೆ, ರೈತರ ಜತೆ ಸಂವಾದ ನಡೆಯಲಿವೆ ಎಂದು ಹೇಳಿದರು.
ಬೆಳಗ್ಗೆ 10 ಗಂಟೆಗೆ ಕೊಲ್ಲಾಪುರದ ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದೀಪುರದ ಡಾ. ಮಹೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಪ್ರಾಧ್ಯಾಪಕ ಚಂದ್ರಶೇಖರ ನಾರಾಯಣಪುರ, ವಿಜ್ಞಾನಿ ಬಿ.ಎಂ. ನಾಗಭೂಷಣ ಹಾಗೂ ಸಾಯಿ ಟ್ರಸ್ಟ್‌ನ ಮಾರುತಿರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ರಾಸಾಯನಿಕ ಗೊಬ್ಬರದ ಬದಲಾಗಿ ಕೆಲವು ರೈತರಿಗೆ 1-2 ಎಕರೆ ಮಾದರಿಯಾಗಿ ಸಾವಯವ ಕೃಷಿ ಬೆಳೆಯಲು ಹಾಗೂ ಅದರಿಂದಾಗುವ ಲಾಭ-ನಷ್ಟದ ಕುರಿತಂತೆ ವರದಿ ಸಲ್ಲಿಸಲು ಸರ್ಕಾರ ಉತ್ತೇಜಿಸಬೇಕು. ಸಾವಯವ ಕೃಷಿಕರನ್ನು ಗುರುತಿಸಿ ಅವರಿಗೆ ಸಹಾಯಧನ ನೀಡುವ ಬಗ್ಗೆಯೂ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗೋಪನಾಳ್ ಗ್ರಾಮ ಘಟಕದ ಅಧ್ಯಕ್ಷ ರಾಜೇಂದ್ರ ಗೋಪನಾಳ್, ಸಾವಯವ ಕೃಷಿಕರ ಬಳಗದ ಪದಾಧಿಕಾರಿಗಳಾದ ವೀರೇಶ್ವರ ಮರಡಿ, ಜಿ.ಡಿ. ಬಸವರಾಜಪ್ಪ, ಎಂ.ಎಸ್. ಶಿವಕುಮಾರ್ ಬಾಡಾ ಇದ್ದರು.