ದಾವಣಗೆರೆಯಲ್ಲಿ ಶುಕ್ರವಾರ, ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ’ ಎಂದು ಬರೆಯಲಾದ ಭಿತ್ತಿಪತ್ರಗಳನ್ನು ಹರಿದು ಹಾಕುವ ಮೂಲಕ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ಪರಶುರಾಮ ನಡುಮನಿ, ಶ್ರೀಧರ್, ಮಧು, ಸಾಗರ್ ಇದ್ದರು.
- ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿಕೆ
- ಹಿಂದುಗಳನ್ನು ಹತ್ತಿಕ್ಕುವ ಷಡ್ಯಂತ್ರ
- ಭಿತ್ತಿಪತ್ರ ಹರಿದು ಆಕ್ರೋಶ
ದಾವಣಗೆರೆ : ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ವಿರೋಧಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಹಿಂದುಗಳನ್ನು ಹತ್ತಿಕ್ಕುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ಹಿಂದು ಸಂಘಟನೆಗಳ ನಾಯಕರನ್ನು ಗುರಿಯಾಗಿಟ್ಟುಕೊಂಡು ವಿಧೇಯಕ ರೂಪಿಸಲಾಗಿದೆ ಎಂದು ಆರೋಪಿಸಿದರು. ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ’ ಎಂದು ಬರೆಯಲಾದ ಭಿತ್ತಿಪತ್ರಗಳನ್ನು ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಗೋಹತ್ಯೆಯನ್ನು ವಿರೋಧಿಸಿದರೆ, ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸಿದರೆ, ಮತಾಂತರದ ವಿರುದ್ಧ ಧ್ವನಿ ಎತ್ತಿದರೆ, ಜಾಗ ಕಬಳಿಸಿ ಕಟ್ಟಿದ ಪ್ರಾರ್ಥನಾ ಮಂದಿರಗಳ ಬಗ್ಗೆ ಮಾತನಾಡಿದರೆ, ಸ್ವಾಮೀಜಿಗಳು ಗೋರಕ್ಷಣೆಯ ಬಗ್ಗೆ, ಮತಾಂತರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರೆ ಅದು ದ್ವೇಷವೆ?, ಇದಕ್ಕೆ ಸರ್ಕಾರ ನೀಡುವ ವ್ಯಾಖ್ಯಾನವೇನು ಎಂದು ಪ್ರಶ್ನಿಸಿದರು.
ಈ ವಿಧೇಯಕದ ವಿರುದ್ಧ ಶ್ರೀರಾಮಸೇನೆ ಹೋರಾಟ ನಡೆಸಲಿದೆ. ಇದನ್ನು ವಾಪಸ್ ತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಕ್ರಿಸ್ಮಸ್ ಹಬ್ಬದ ದಿನವಾದ ಡಿ. 25 ರಂದು ಮಾತ್ರ ಸರ್ಕಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದೆ. ಆದರೆ ಕಾನ್ವೆಂಟ್ ಶಾಲೆಗಳಿಗೆ 10 ದಿನ ರಜೆ ನೀಡಲಾಗುತ್ತದೆ. ಇದು ನಿಯಮ ಬಾಹಿರವಾಗಿದೆ. ಸರ್ಕಾರ ಇದನ್ನು ತಡೆಗಟ್ಟಬೇಕು ಎಂದು ಹೇಳಿದರು.
ಆದರೆ ದಸರಾ ಸಂದರ್ಭದಲ್ಲಿ 10 ದಿನಗಳ ರಜೆ ಇದ್ದರೂ ಕಾನ್ವೆಂಟ್ ಶಾಲೆಗಳು ಕಾರ್ಯ ನಿರ್ವಹಿಸುತ್ತವೆ, ಪರೀಕ್ಷೆಗಳು ನಡೆಯುತ್ತವೆ. ಇದರಿಂದ ಮಕ್ಕಳು ಹಬ್ಬ ಆಚರಿಸದಂತಾಗುತ್ತದೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕ್ರಿಸ್ಮಸ್ ಮರುದಿನದಿಂದಲೇ ಕಾನ್ವೆಂಟ್‌ಗಳ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ. ಅಗತ್ಯವೆನಿಸಿದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ಕೂಡಾ ಗೋಮಾಂಸ ರಫ್ತು ಮಾಡುವುದನ್ನು ನಿಲ್ಲಿಸಬೇಕು. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 3 ಸಾವಿರ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತದೆ. ಕನ್ನಡಪರ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಬೇಕು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಬೇಕು ಎಂದು ಹೇಳಿದರು.
ಶ್ರೀರಾಮಸೇನೆ ಮುಖಂಡರಾದ ಪರಶುರಾಮ ನಡುಮನಿ, ಶ್ರೀಧರ್, ಮಧು, ಸಾಗರ್ ಸುದ್ದಿಗೋಷ್ಠಿಯಲ್ಲಿದ್ದರು.