ಸಾಮಾಜಿಕ ಭದ್ರತೆ ಪಿಂಚಣಿ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು. ಪಾಲಯ್ಯ, ಮಡ್ರಳ್ಳಿ ಪರುಸಪ್ಪ, ಕಾಮಗೇತನಹಳ್ಳಿ ಮಲ್ಲೇಶ್ ಇತರರಿದ್ದರು.pension
- ರೈತ ಸಂಘದಿಂದ ಪ್ರತಿಭಟನೆ
- ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಕೆ
ಜಗಳೂರು: ಆದಾಯ ಮಿತಿ ಹಾಗೂ ನಕಲಿ ದಾಖಲೆಗಳ ನೆಪವೊಡ್ಡಿ ತಾಲೂಕಿನ ಸುಮಾರು 9 ಸಾವಿರ ಫಲಾನುಭವಿಗಳ ಸಾಮಾಜಿಕ ಭದ್ರತೆ ಪಿಂಚಣಿಯನ್ನು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಮಂಗಳವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿತು.
ರೈತ ಸಂಘದ ತಾಲೂಕಾಧ್ಯಕ್ಷ ಸಿ.ಎಂ. ಹೊಳೆ ಚಿರಂಜೀವಿ ಮಾತನಾಡಿ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಅಂಗವಿಕಲರ ಪಿಂಚಣಿ ಸೇರಿ ವಿವಿಧ ಮಾಸಾಶನಗಳು ಕಳೆದ ಮೂರು ತಿಂಗಳಿಂದ ಬಿಡುಗಡೆಯಾಗಿಲ್ಲ. ಅವೈಜ್ಞಾನಿಕ ಆದಾಯ ಮಿತಿ ಮತ್ತು ನೆಪಗಳನ್ನು ಹೇಳಿ 9 ಸಾವಿರಕ್ಕೂ ಹೆಚ್ಚು ಬಡ ಫಲಾನುಭವಿಗಳಿಗೆ ಪಿಂಚಣಿ ಕಡಿತಗೊಳಿಸಿರುವುದು ಖಂಡನೀಯ ಎಂದರು.
ಬೆಲೆ ಏರಿಕೆಯ ಈ ಕಾಲದಲ್ಲಿ ಬಡವರು, ವೃದ್ಧರು ಹಾಗೂ ಅಂಗವಿಕಲರು ಔಷಧ ಮತ್ತು ಜೀವನ ನಿರ್ವಹಣೆಗೆ ಈ ಪಿಂಚಣಿಯನ್ನೇ ನೆಚ್ಚಿಕೊಂಡಿದ್ದಾರೆ. ಸರ್ಕಾರ ದುರ್ಬಲ ವರ್ಗದವರ ಬದುಕಿನೊಂದಿಗೆ ಆಟವಾಡುವುದನ್ನು ನಿಲ್ಲಿಸಿ, ತಕ್ಷಣವೇ ಸ್ಥಗಿತಗೊಂಡಿರುವ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು ಮಾತನಾಡಿ, ಅನರ್ಹರನ್ನು ತೆಗೆಯುವ ನೆಪದಲ್ಲಿ ಅರ್ಹ ಬಡ ಫಲಾನುಭವಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಎಲ್ಲರ ಖಾತೆಗೆ ಬಾಕಿ ಪಿಂಚಣಿ ಜಮೆ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಗುರುಬಸವರಾಜ್, ತಾಲೂಕಿನಲ್ಲಿ ಒಟ್ಟು 34 ಸಾವಿರ ಪಿಂಚಣಿದಾರರಿದ್ದು, ಅದರಲ್ಲಿ 9,547 ಜನರ ದಾಖಲೆಗಳನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಸುಳ್ಳು ದಾಖಲೆ ಹಾಗೂ ವಯಸ್ಸಿನ ಮಿತಿ ಕೊರತೆ ಸೇರಿ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮ ಮಟ್ಟದ ಅಧಿಕಾರಿಗಳಿಂದ ಪುನರ್ ಪರಿಶೀಲನೆ ನಡೆಸಿ, ಅರ್ಹರಿದ್ದರೆ ಮರು ಪಿಂಚಣಿ ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಪಾಲಯ್ಯ, ರೈತ ಸಂಘದ ಮಡ್ರಳ್ಳಿ ಪರುಸಪ್ಪ, ಕಾಮಗೇತನಹಳ್ಳಿ ಮಲ್ಲೇಶ್, ಸಹದೇವರೆಡ್ಡಿ, ತಿಪ್ಪೇಸ್ವಾಮಿ, ಬಸವರಾಜ್, ಚೌಡಮ್ಮ, ರುದ್ರಮ್ಮ ಮತ್ತಿತರರಿದ್ದರು.