ಚನ್ನಗಿರಿ ಪುರಸಭೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸರ್ವಮಂಗಳಾ,ಮುಖ್ಯಾಧಿಕಾರಿ ಕೃಷ್ಣ ಡಿ. ಪಟ್ಟೆಮನಿ, ಸದಸ್ಯರು ಇದ್ದರು.
- ಮನವೊಲಿಕೆ ನಂತರ ಸದಸ್ಯರು ಭಾಗಿ
- ಅಭಿವೃದ್ಧಿ ಕುರಿತು ಚರ್ಚೆಗೆ ಬಿಗಿಪಟ್ಟು
- ಉಪಾಧ್ಯಕರ ಕೊಠಡಿಯಲ್ಲಿ ಸದಸ್ಯರ ಪ್ರತ್ಯೇಕ ಸಭೆ
ಚನ್ನಗಿರಿ: ಪಾಲನೆಯಾಗದ ಶಿಷ್ಟಾಚಾರ, ಅಧಿಕಾರಿ ಮತ್ತು ಸಿಬ್ಬಂದಿ ವರ್ತನೆಗೆ ಅಸಮಾಧಾನ, ಆರಂಭದಲ್ಲಿ ಸಭೆಯಿಂದ ದೂರ ಉಳಿದು ಮನವೊಲಿಕೆಯ ನಂತರ ಆಗಮಿಸಿದ ಸದಸ್ಯರು ಅಭಿವೃದ್ಧಿಯ ಚರ್ಚೆಯ ಬದಲಾಗಿ ಕಾಲಹರಣ.!
ಇವು ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ವಿಶೇಷಗಳು.
ಬೆಳಗ್ಗೆ ಸಭೆ ಆರಂಭವಾಗುವ ಹೊತ್ತಿಗೆ ಕಚೇರಿಗೆ ಬಂದ 16 ಸದಸ್ಯರು ಹೊರಗುಳಿಯಲು ನಿರ್ಧರಿಸಿ ಉಪಾಧ್ಯಕ್ಷರ ಕೊಠಡಿಯಲ್ಲಿ ಪ್ರತ್ಯೇಕವಾಗಿ ಸೇರಿ ವಾರ್ಡ್‌ಗಳ ಸಮಸ್ಯೆ ಮತ್ತು ಅಭಿವೃದ್ಧಿಗಳ ಬಗ್ಗೆ ಚರ್ಚೆ ಮಾಡುವುದಾದರೆ ಮಾತ್ರ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಇದಕ್ಕೆ ಒಪ್ಪಿದ ಬಳಿಕ ಅಂದರೆ ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಸಭೆ ಕಾಲಹರಣದಿಂದ ಮಧ್ಯಾಹ್ನ 1 ಕ್ಕೆ ಆರಂಭವಾಯಿತು.
ಸದಸ್ಯ ನಂಜುಂಡಪ್ಪ ಮಾತನಾಡಿ, ವಾರ್ಡ್‌ಗಳಲ್ಲಿರುವ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತು ಚರ್ಚಿಸಬೇಕಾದ ಕಾರಣ ಮೊದಲೇ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು. ವಾರದ ಮೊದಲು ಸದಸ್ಯರಿಗೆ ನೋಟಿಸ್ ನೀಡಬೇಕು. ಚರ್ಚಿಸುವ ವಿಷಯಗಳ ಕುರಿತು ಅಜೆಂಡಾ ತಯಾರಿಸಬೇಕು. ಇದಾವುದನ್ನೂ ಮಾಡದೇ ಸಭೆ ಇರುವಾಗ ಆಹ್ವಾನ ನೀಡುವುದು ಶಿಷ್ಟಾಚಾರವಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕಸ ವಿಲೇವಾರಿ ಘಟಕದ ಅಭಿವೃದ್ಧಿ, ದುರಸ್ತಿಗೆ ಬಂದ ಅನುದಾನವನ್ನು ಅನೇಕ ಬಾರಿ ಬಳಕೆ ಮಾಡಲಾಗಿದೆ. ನಮಗೆ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಲು ಆಗುತ್ತಿಲ್ಲ. ವಾರ್ಡ್ ಅಭಿವೃದ್ಧಿಗೆ ಸದಸ್ಯರ ಅನುದಾನ ವಿನಿಯೋಗಿಸದೆ ಬೇರೆ ಕಡೆ ಉಪಯೋಗಿಸಲಾಗುತ್ತಿದೆ. ಕಚೇರಿಗೆ ಸುಮ್ಮನೆ ಬಂದು ಹೋಗುವುದಾಗಿದೆ ಎಂದು ಕಿಡಿ ಕಾರಿದರು.
ಅಮೀರ್ ಅಹ್ಮದ್ ಮಾತನಾಡಿ, ಎಷ್ಟು ಬಾರಿ ಕೇಳಿದರೂ ಅಧಿಕಾರಿಗಳು ಹಳೆಯ ಪುರಸಭೆ ಕಟ್ಟಡದಲ್ಲಿ ಇದ್ದಂಥ ಪ್ಯಾನ್, ಸಿಸಿ ಕ್ಯಾಮರಾ ಇತರ ಸಾಮಾಗ್ರಿಗಳ ಮಾಹಿತಿ ನೀಡುತ್ತಿಲ್ಲ. ಪುರಸಭೆಯಲ್ಲಿ ಉಪಯೋಗಿಸಿ ಮೂಲೆ ಹಿಡಿದ ಟ್ರಾೃಕ್ಟರ್‌ನ ಸಾಮಗ್ರಿಗಳನ್ನು ಬಿಚ್ಚಿಕೊಂಡು ಹೋಗಲಾಗಿದೆ. ಮೊದಲೇ ಹರಾಜಿಗೆ ಹಾಕಿದ್ದರೆ ಅನುಕೂಲವಾಗುತ್ತಿತ್ತು ಎಂದರು.
ಯಾರೂ ಸದಸ್ಯರ ಮಾತನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. 6 ತಿಂಗಳಿಗೊಮ್ಮೆ ಸಭೆ ಕರೆಯಲಾಗುತ್ತದೆ. ಆದರೆ ಅಜೆಂಡಾದಲ್ಲಿ ಕೇವಲ ಭೂ ಪರಿವರ್ತನೆ ವಿಷಯಗಳು ಮಾತ್ರ ಇರುತ್ತವೆ ಎಂದು ಹೇಳಿದರು.
ನಾಮ ನಿರ್ದೇಶನ ಸದಸ್ಯ ಎಂ.ಬಿ. ಶಿವಾಜಿರಾವ್ ಮಾತನಾಡಿ, ಸದಸ್ಯರು ಕಚೇರಿಗೆ ಬಂದರೆ ಸಿಬ್ಬಂದಿ ಗೌರವ ಕೊಡುವುದಿಲ್ಲ. ಉಪಾಧ್ಯಕ್ಷರು ಮಾತನಾಡದೆ ಹೋಗುತ್ತಾರೆ. ಈ ಬಗ್ಗೆ ಮೊದಲು ಕ್ಷಮೆ ಕೇಳಬೇಕು ಎಂದರು.
ಅಧ್ಯಕ್ಷರ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ನೀಗಿಸಲು 8 ವರ್ಷದ ಹಿಂದೆ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೆ ಇದುವರೆಗೆ ಟ್ಯಾಂಕ್‌ಗೆ ನೀರಿನ ಸಂಪರ್ಕ ನೀಡಿಲ್ಲ ಇದರಿಂದ ಆ ಭಾಗದ ಜನರಿಗೆ ಸಮಸ್ಯೆಯಾಗಿದೆ ಎಂದು ಗಮನಸೆಳೆದರು.
ಪುರಸಭೆ ಮಾಲೀಕತ್ವದ ಖಾಸಗಿ ನಿಲ್ದಾಣದ ಮೇಲ್ಭಾಗದಲ್ಲಿರುವ ಜಾಹೀರಾತು ಫಲಕ ಬಹಿರಂಗ ಹರಾಜು ಮಾಡಿ ಅಂತಿಮ ಬಿಡ್ ದರಕ್ಕೆ ಅನುಮೋದನೆ ನೀಡಲಾಯಿತು. ಹಾಲಸ್ವಾಮಿ ಸಮುದಾಯ ಭವನದ ಮುಂಭಾಗದ ಮಳಿಗೆ ಸಂಖ್ಯೆ 1 ಮತ್ತು ಖಾಸಗಿ ನಿಲ್ದಾಣದ ಮಳಿಗೆ ಸಂಖ್ಯೆ 11 ಅನ್ನು ಬಹಿರಂಗ ಹರಾಜು ಮಾಡಲಾಗಿದ್ದು, ಅಂತಿಮ ಬಿಡ್‌ದಾರನಿಗೆ ನೀಡಲು ಅನುಮೋದಿಸಲಾಯಿತು.
ಸದಸ್ಯ ಗಾದ್ರಿ ರಾಜು ಮಾತನಾಡಿ, ಅಧ್ಯಕ್ಷರು ಹಣ ಪಡೆದು ಬಡಾವಣೆಗೆ ಅನುಮೋದನೆಗೆ ನೀಡುತ್ತಿದ್ದಾರೆ. ದಾಖಲೆ ಸರಿ ಇರುವ ನಿವೇಶನಗಳಿಗೆ ನ್ಯಾಯಾಲಯದಲ್ಲಿ ಪ್ರಕರಣ ಇದೆ ಎಂದು ಅನುಮೋದನೆ ನೀಡುತ್ತಿಲ್ಲ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ದೂರಿದರು.
ಅಂಗನವಾಡಿಗಳ ಕಟ್ಟಡ ನಿರ್ಮಿಸಲು ಪುರಸಭೆಯಿಂದ ಸಿಎ ನಿವೇಶನವನ್ನು ಮಂಜೂರು ಮಾಡುವುದು ಬೇಡ. ಮೊದಲು ನೀಡಿರುವ ನಿವೇಶನಗಳಲ್ಲಿ ಕೇಂದ್ರಗಳನ್ನು ನಿರ್ಮಿಸಲಿ ನಂತರ ನೀಡಬಹುದು ಎಂದು ಸದಸ್ಯರೆಲ್ಲರು ತಿಳಿಸಿದರು. ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳಾ, ಮುಖ್ಯಾಧಿಕಾರಿ ಕೃಷ್ಣ ಡಿ. ಪಟ್ಟೆಮನಿ, ಸದಸ್ಯರು ಇದ್ದರು.