ಚಿರಡೋಣಿಯಲ್ಲಿ ನರೇಗಾದಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು.NREGA
- ಚಿರಡೋಣಿಯಲ್ಲಿ 13ರಿಂದ 200ಕ್ಕೆ ಏರಿದ ಕಾರ್ಮಿಕರ ಸಂಖ್ಯೆ
- ಕಾಲುವೆಗಳ ದುರಸ್ತಿಯಿಂದ ರೈತರಿಗೆ ನೆರವು
ಕೃಷಿ ಚಟುವಟಿಕೆಗಳ ವಿರಾಮದ ಅವಧಿಯಲ್ಲಿ ಉದ್ಯೋಗ ವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಮೀಣ ಕಾರ್ಮಿಕರಿಗೆ ಎಂಎನ್‌ಆರ್‌ಇಜಿಎ ಆಸರೆಯಾಗಿದ್ದು, ಚಿರಡೋಣಿ ಗ್ರಾಮದಲ್ಲಿ ಯೋಜನೆ ಪರಿಣಾಮದಿಂದ ಸ್ಥಳೀಯ ಕಾರ್ಮಿಕರ ಬದುಕಿಗೆ ಹೊಸ ಭರವಸೆ ಮೂಡಿಸಿದೆ. NREGA
ಭತ್ತದ ಕಟಾವು ಯಂತ್ರಗಳ ಸಹಾಯದಿಂದ ನಡೆಯುತ್ತಿರುವ ಕಾರಣ ಮಹಿಳಾ ಕಾರ್ಮಿಕರಿಗೆ ಹಿಂದಿನಂತೆ ಕೆಲಸ ದೊರೆಯುತ್ತಿಲ್ಲ. ಪುರುಷ ಕಾರ್ಮಿಕರು ಸಹ ಭತ್ತ ತೂಗುವಿಕೆ ಹಾಗೂ ಹಮಾಲಿ ಕೆಲಸಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಭತ್ತದ ಕೆಲಸ ಮುಗಿದ ಬಳಿಕ ಭದ್ರಾ ನಾಲೆಗೆ ನೀರು ಬಂದು ನಾಟಿ ಕಾರ್ಯ ಆರಂಭವಾಗುವವರೆಗೆ ಎರಡು ತಿಂಗಳು ಉದ್ಯೋಗಕ್ಕಾಗಿ ಕಾಯಬೇಕಾಗುತ್ತಿತ್ತು. ನಾಟಿ ಕಾರ್ಯ ಮುಗಿದ ನಂತರ ಮತ್ತೆ ಅಡಿಕೆ ಸೇರಿದಂತೆ ಇತರೆ ಕೃಷಿ ಚಟುವಟಿಕೆಗಳು ಆರಂಭವಾಗುವವರೆಗೆ ಕಾರ್ಮಿಕರಿಗೆ ಕೆಲಸದ ಕೊರತೆ ಎದುರಾಗುತ್ತಿತ್ತು.
ಈ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರ ಬದುಕಿಗೆ ಆಸರೆಯಾಗಿ ಪರಿಣಮಿಸಿದೆ. ಆರಂಭದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ 13 ಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ಆರಂಭವಾದ ಕಾಮಗಾರಿಗಳು ಹಂತಹಂತವಾಗಿ ವಿಸ್ತರಿಸಿಕೊಂಡು ಇದೀಗ 200 ಜನ ಕೆಲಸ ನಿರ್ವಹಿಸುವ ಮಟ್ಟಕ್ಕೆ ತಲುಪಿವೆ. ಮೇ 28ರಿಂದ ಜೂನ್ 24ರವರೆಗೆ ಕೇವಲ 28 ದಿನಗಳ ಅವಧಿಯಲ್ಲಿ 1500 ಮಾನವ ದಿನಗಳು ಸೃಷ್ಟಿಯಾಗಿರುವುದು ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.
300ಕ್ಕೂ ಹೆಚ್ಚು ಅರ್ಜಿ
ಕಾಮಗಾರಿಗಳಿಗೆ ಉತ್ತಮ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ 300ಕ್ಕೂ ಹೆಚ್ಚು ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಜುಲೈ 1ರಿಂದ ವಿಬಿಜಿ ರಾಮ್‌ಜಿ ಯೋಜನೆಯಡಿ ಉದ್ಯೋಗ ಒದಗಿಸಲು ಗ್ರಾಪಂ ಸಿದ್ಧತೆ ನಡೆಸಿದೆ.
ಮೂರು ಕಾಮಗಾರಿಗಳಿಗೆ ಚಾಲನೆ
ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿ ಮೂರು ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಭದ್ರಾ ಉಪನಾಲೆಯ ಹೂಳು ತೆರವು ಮತ್ತು ಸ್ವಚ್ಛತಾ ಕಾರ್ಯ, ಕಬ್ಬಳ ರಸ್ತೆಯಲ್ಲಿರುವ ಡ್ರೈನೇಜ್ ಹೂಳು ತೆರವು ಹಾಗೂ ಸ್ವಚ್ಛತಾ ಕಾರ್ಯ, ಕಾಲುವೆಗಳ ಹೂಳು ತೆರವು ಜತೆಗೆ ಕಾಲುವೆ ಹಾಗೂ ನಾಲೆಗಳ ಪಕ್ಕದಲ್ಲಿ ಬೆಳೆದಿರುವ ಗಿಡಗಂಟಿಗಳ ತೆರವು ಕಾರ್ಯಗಳನ್ನು ಆರಂಭಿಸಲಾಗಿದೆ. ಈ ಪೈಕಿ ಭದ್ರಾ ಉಪನಾಲೆ ಹಾಗೂ ಕಬ್ಬಳ ರಸ್ತೆಯ ಡ್ರೈನೇಜ್ ಸ್ವಚ್ಛತಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರಸ್ತುತ ಕಾಲುವೆಗಳ ಹೂಳು ತೆರವು ಮತ್ತು ಗಿಡಗಂಟಿಗಳ ಸ್ವಚ್ಛತಾ ಕಾಮಗಾರಿ ಪ್ರಗತಿಯಲ್ಲಿದೆ.
ರೈತರಿಗೆ ಕಾಲುವೆ ಅಭಿವೃದ್ಧಿ ನೆರವು
ಹಲವು ವರ್ಷ ಗಳಿಂದ ಹೂಳು ತುಂಬಿಕೊಂಡಿದ್ದ ಕಾಲುವೆಗಳು ಹಾಗೂ ನಾಲೆಗಳಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿತ್ತು. ಇದೀಗ ಹೂಳು ತೆರವು ಮತ್ತು ಗಿಡಗಂಟಿಗಳ ಸ್ವಚ್ಛತೆಯಿಂದ ನೀರಿನ ಹರಿವು ಸುಗಮವಾಗಲಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ನೆರವಾಗಲಿದೆ. ಇದರಿಂದ ಕೃಷಿ ಜಮೀನುಗಳಲ್ಲಿ ನೀರು ನಿಲ್ಲುವ ಸಮಸ್ಯೆ ಕಡಿಮೆಯಾಗಲಿದ್ದು, ಭದ್ರಾ ನಾಲೆಯಿಂದ ಹರಿದುಬರುವ ನೀರು ತ್ವರಿತವಾಗಿ ಜಮೀನುಗಳನ್ನು ತಲುಪಲು ಸಹಕಾರಿಯಾಗಲಿದೆ.
ಡಿಜಿಟಲ್ನಿಂದ ಪಾರದರ್ಶಕತೆ
ಯೋಜನೆಯಡಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕನ ಹಾಜರಾತಿ ಡಿಜಿಟಲ್ ವ್ಯವಸ್ಥೆಯಲ್ಲಿ ದಾಖಲಿಸಲಾಗುತ್ತಿದೆ. ಕಾಮಗಾರಿ ವಿವರಗಳನ್ನು ಸಂಬಂಧಿಸಿದ ಅಧಿಕಾರಿಗಳು ಆನ್‌ಲೈನ್ ಮೂಲಕ ಅನುಮೋದಿಸಿದ ಬಳಿಕ ದಿನಗೂಲಿ ಹಣ ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಆಗುತ್ತದೆ. ಪ್ರಸ್ತುತ ದಿನಕ್ಕೆ 370 ರೂ. ನಿಗದಿಯಾಗಿದೆ.
ಮಹಿಳೆಯರೇ ಮುಂಚೂಣಿ
ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಗಮನಾರ್ಹವಾಗಿದೆ. ಗ್ರಾಮದಲ್ಲಿಯೇ ಉದ್ಯೋಗ ದೊರೆಯುತ್ತಿರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸದಲ್ಲಿ ಸೇರುತ್ತಿದ್ದಾರೆ. ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಯೋಜನೆ ಪೂರಕವಾಗುತ್ತಿದೆ.
"
ಯೋಜನೆಯಡಿ ಅರ್ಹ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಕೆಲಸ ನೀಡಲಾಗುತ್ತಿದೆ. ಕಾರ್ಮಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸಿರುವ ಕಾರ್ಮಿಕರಿಗೂ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
— ಆರ್. ತಿಪ್ಪೇಸ್ವಾಮಿ ಪಿಡಿಒ
ಗ್ರಾಮೀಣ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಚಿರಡೋಣಿಯ ಕಾಮಗಾರಿ ಸಾರ್ವಜನಿಕ ಆಸ್ತಿಗಳ ಅಭಿವೃದ್ಧಿಗೆ ಪೂರಕವಾಗಿದೆ.
— ಆರ್. ನಿರ್ಮಲಾ ಆಡಳಿತಾಧಿಕಾರಿ, ಚಿರಡೋಣಿ ಗ್ರಾಪಂ.
"
ಭತ್ತದ ಕೆಲಸಗಳು ಮುಗಿದ ನಂತರ ಕೆಲಸಕ್ಕಾಗಿ ಕಾಯಬೇಕಾಗುತ್ತಿತ್ತು. ಈಗ ಗ್ರಾಮದಲ್ಲಿಯೇ ಉದ್ಯೋಗ ದೊರೆಯುತ್ತಿರುವುದರಿಂದ ಕುಟುಂಬ ನಿರ್ವಹಣೆಗೆ ನೆರವಾಗಿದೆ. ಬೇರೆ ಊರುಗಳಿಗೆ ಅಲೆಯುವ ಸಮಸ್ಯೆ ಇಲ್ಲ.
— ನಾಗರಾಜ್ ಕೂಲಿ ಕಾರ್ಮಿಕರು
ಯೋಜನೆಯಿಂದ ಕುಟುಂಬ ನಿರ್ವಹಣೆಗೆ ಸಹಕಾರಿ ಯಾಗಿದೆ. ಇಂತಹ ಕೆಲಸಗಳು ನಿರಂತರವಾಗಿ ದೊರೆತರೆ ಗ್ರಾಮೀಣ ಬಡ ಕುಟುಂಬಗಳಿಗೆ ಹೆಚ್ಚಿನ ನೆರವಾಗಲಿದೆ.
— ರೂಪಾ ಕೂಲಿ ಕಾರ್ಮಿಕರು