ಚನ್ನಗಿರಿ: ತಾಲೂಕಿನಲ್ಲಿ ಮಾತ್ರ ಚರ್ಚೆಗೆ ಗ್ರಾಸವಾಗಿದ್ದ ದೆವ್ವಗಳ ದಾಳಿ ಸುದ್ದಿ ಗುರುವಾರ ಇಡೀ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಹರಿದಾಡಿವೆ. ಮೇಲ್ನೋಟಕ್ಕೆ ಇದು ಕಿಡಿಗೇಡಿಗಳ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ. ಚನ್ನಗಿರಿ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದು, ಅವರೂ ಸಹ ವದಂತಿ ಅಷ್ಟೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಜೆಸಿಬಿಗಳು ನಮ್ಮ ಬಳಿ ಇಲ್ಲ, ನಮ್ಮ ಬಳಿ ಇರುವುದು ಹಿಟಾಚಿ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಅಲ್ಲದೆ ದೆವ್ವಗಳ ದಾಳಿಯಿಂದ ಗಾಯಗೊಂಡಿದ್ದಾರೆ ಎನ್ನಲಾದ ವ್ಯಕ್ತಿಗಳೂ ಯಾವುದೇ ಆಸ್ಪತ್ರೆಗೆ ದಾಖಲಾಗಿಲ್ಲ. ಸ್ಥಳ ಪರಿಶೀಲನೆ ಮಾಡಿರುವ ಪೊಲೀಸ್ ಅಧಿಕಾರಿಗಳು, ದೆವ್ವ ಕಾಣಿಸಿಕೊಂಡಿದೆ ಎಂಬುದೆಲ್ಲ ಸುಳ್ಳು. ವದಂತಿ ಹಬ್ಬಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಗುರುವಾರ ಬೆಳಗ್ಗೆ ಮಾಹಿತಿ ಪಡೆಯಲು ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸ್ ಅಧಿಕಾರಿಗಳಿಗೆ ಅಲ್ಲಿದ್ದ ಜನ, ದೆವ್ವಗಳು ಹಗಲು ವೇಳೆಯಲ್ಲಿ ಕಾಣಲ್ಲ, ರಾತ್ರಿ ಬರಬೇಕು ಸಾರ್.. ಎಂದು ತಮಾಷೆ ಮಾಡಿದ್ದಾರೆ. ಹಾಗೆಯೇ ಘಟನೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಂಡಿದ್ದಾರೆ.
ಪಟ್ಟಣದ ಬೈಪಾಸ್ ರಸ್ತೆಯಲ್ಲಿ ರಾತ್ರಿ ವೇಳೆ ಜೆಸಿಬಿ ಮೂಲಕ ಕೆಲಸ ಮಾಡುತ್ತಿದ್ದ ಮೂವರ ಪೈಕಿ ಇಬ್ಬರ ಮೇಲೆ ಹೆಣ್ಣು ದೆವ್ವ ದಾಳಿ ಮಾಡಿದೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗುರುವಾರ ಪರಿಶೀಲನೆ ನಡೆಸಿದರು. ಇಬ್ಬರ ಮೇಲೆ ದಾಳಿ ಮಾಡಿದೆ ಎನ್ನುವ ಸುದ್ದಿ ಹರಡಿದೆ. ಯಾವುದೋ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಸಾಧ್ಯತೆ ಇದ್ದು, ಪೊಲೀಸ್ ಕೇಸ್ನಿಂದ ಪಾರಾಗುವ ಉದ್ದೇಶದಿಂದಲೇ ದೆವ್ವದ ಕತೆ ಕಟ್ಟಿರುವ ಸಾಧ್ಯತೆ ಇದೆ ಎಂಬ ಅನುಮಾನಗಳು ಇವೆ.
ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಮೊಬೈಲ್ಗಳಲ್ಲಿ ಹೆಣ್ಣು ದೆವ್ವ ಎನ್ನಲಾದ 5 ಭಾವಚಿತ್ರಗಳು ಹಾಗೂ ಗಾಯಗೊಂಡವರ ಚಿತ್ರಗಳು ವೈರಲ್ ಆಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಹರಿದಾಡುತ್ತಿದ್ದಂತೆ ಜಾಗೃತರಾದ ಪೊಲೀಸರು, ಬೆಳಗ್ಗೆ ಸಿಬ್ಬಂದಿಯೊಂದಿಗೆ ಬೈಪಾಸ್ ರಸ್ತೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಗುತ್ತಿಗೆದಾ ರರಿಂದ ಮಾಹಿತಿ ಪಡೆದರು. ನಮ್ಮ ಯಾವುದೇ ಸಿಬ್ಬಂದಿಗೆ ದೆವ್ವ ಕಾಣಿಸಿಕೊಂಡಿಲ್ಲ. ವೈರಲ್ ಆಗಿರುವ ಚಿತ್ರದಲ್ಲಿರುವಂತಹ ಜೆಸಿಬಿಗಳೂ ನಮ್ಮಲ್ಲಿಲ್ಲ, ನಮ್ಮ ಬಳಿ ಹಿಟಾಚಿಗಳು ಮಾತ್ರ ಇವೆ ಎಂದು ಗುತ್ತಿಗೆದಾರರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ದೆವ್ವ ಹಾಗೂ ಗಾಯ ಗೊಂಡವರ ಫೋಟೋಗಳು ವೈರಲ್ ಆಗಿದ್ದರಿಂದ ಸತ್ಯಾ ಸತ್ಯತೆ ತಿಳಿಯಲು ತನಿಖೆ ಮಾಡುವುದು ಅಗತ್ಯ ವಾಗಿತ್ತು. ಪರಿಶೀಲನೆಯಲ್ಲಿ ಇದೊಂದು ಸುಳ್ಳು ಸುದ್ದಿ ಎಂಬುದು ತಿಳಿದುಬಂದಿದೆ. ಅಲ್ಲದೇ ಗಾಯಗೊಂಡವರು ಯಾವುದೇ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದ ಮಾಹಿತಿ ಇಲ್ಲ.ರವೀಶ್, ಪೊಲೀಸ್ ಇನ್ಸ್ಪೆಕ್ಟರ್ ಚನ್ನಗಿರಿ