ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮಸ್ಥರು ಇ-ಸ್ವತ್ತಿಗೆ ಒತ್ತಾಯಿಸಿ ಗುರುವಾರ ಎಸ್‌ಐಆರ್ ಪ್ರಕ್ರಿಯೆಗೆ ಅಸಹಕಾರ ಚಳವಳಿ ನಡೆಸಿದರು. ತೇಜಸ್ವಿ ವಿ. ಪಟೇಲ್, ಜಿ.ಟಿ. ಸದಾಶಿವಮೂರ್ತಿ, ಎಚ್.ಕೆ. ಬಸವರಾಜಪ್ಪ, ಸಂದೀಪ್, ಉಮಾಬಾಯಿ, ಹೊಳೆ ಬಸಪ್ಪ, ಕರೇಕಟ್ಟೆ ಕರಿಬಸಪ್ಪ, ಮುತ್ತುರಾಜ್, ಉಮೇಶ್, ಭಾಗ್ಯಾ, ಪ್ರೇಮಾಬಾಯಿ, ತಾರಾಬಾಯಿ, ಸುಶೀಲಾ ಬಾಯಿ, ನಿಂಗಮ್ಮ ಇದ್ದರು.
- ಕಾರಿಗನೂರು ಗ್ರಾಮಸ್ಥರಿಂದ ಇ-ಸ್ವತ್ತಿಗೆ ಆಗ್ರಹ
- ಗ್ರಾಮದಲ್ಲಿ ಪ್ರತಿಭಟನೆ
ದಾವಣಗೆರೆ : ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮಸ್ಥರು ಇ-ಸ್ವತ್ತಿಗೆ ಒತ್ತಾಯಿಸಿ ಎಸ್‌ಐಆರ್ ಪ್ರಕ್ರಿಯೆಗೆ ಅಸಹಕಾರ ಚಳವಳಿ ನಡೆಸುತ್ತಿದ್ದಾರೆ.
ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ನಮೂನೆಗಳನ್ನು ವಿತರಿಸಿ, ಅವುಗಳನ್ನು ಭರ್ತಿ ಮಾಡಿಕೊಡುವಂತೆ ಮನವಿ ಮಾಡುತ್ತಿದ್ದರೂ, ಕಳೆದ ಎರಡು ದಿನಗಳಿಂದ ಯಾರೊಬ್ಬರೂ ಭರ್ತಿ ಮಾಡಿದ ನಮೂನೆಯನ್ನು ನೀಡದೆ ಪ್ರತಿಭಟನೆ ಮುಂದುವರಿಸಿದ್ದಾರೆ.
ಗ್ರಾಮಸ್ಥರೆಲ್ಲರೂ ಇ-ಸ್ವತ್ತು ಕೊಡಿಸಿ, ನಂತರವೇ ಭರ್ತಿ ಮಾಡಿದ ನಮೂನೆ ತೆಗೆದುಕೊಳ್ಳಿ ಎಂದು ಪಟ್ಟು ಹಿಡಿದಿದ್ದಾರೆ. ಆದರೂ ಕಳೆದ ಎರಡು ದಿನಗಳಿಂದ ಯಾವುದೇ ಉನ್ನತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಇ-ಸ್ವತ್ತು ನೀಡುವ ಜವಾಬ್ದಾರಿ ಹೊಂದಿರುವ ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮತ ಎಷ್ಟು ಮುಖ್ಯವೋ ಇ-ಸ್ವತ್ತು ಕೂಡ ಅಷ್ಟೇ ಮುಖ್ಯವಾಗಿದೆ. ಮನೆ ಇಲ್ಲದೆ ಮತದಾರರಾಗಲು ಹೇಗೆ ಸಾಧ್ಯ? ಅರ್ಹ ಮತದಾರರ ಸೇರ್ಪಡೆಯೇ ಮುಖ್ಯ ಉದ್ದೇಶವಾಗಿದ್ದರೆ ಈ ಹೊತ್ತಿಗೆ ಕಾರಿಗನೂರು ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಬೇಕಿತ್ತಲ್ಲವೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ನಮೂದಿಸುವ ಮನೆಯ ಸಂಖ್ಯೆಗೆ ಇ-ಸ್ವತ್ತು ಕೇಳುವುದು ತಪ್ಪೆ ಎಂದು ಆಕ್ರೋಶ ಹೊರ ಹಾಕಿರುವ ಗ್ರಾಮಸ್ಥರು ಭರ್ತಿ ಮಾಡಿದ ನಮೂನೆಗಳನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸುವ ಮೂಲಕ ಪ್ರತಿಭಟಿಸಿದರು.
ಇದೇ ವೇಳೆ ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಮಾತನಾಡಿ, ನಮ್ಮ ಗ್ರಾಮಸ್ಥರ ಮತ ಮುಖ್ಯ ಎನ್ನಿಸದಿದ್ದರೆ ಈ ಎಲ್ಲ ಬೆಳವಣಿಗೆಗಳನ್ನು ಲಿಖಿತವಾಗಿ ರಾಜ್ಯ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ಶಿಕ್ಷಕ ಜಿ.ಟಿ. ಸದಾಶಿವಮೂರ್ತಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಕೆ. ಬಸವರಾಜಪ್ಪ, ಸಂದೀಪ್, ಉಮಾಬಾಯಿ, ಎಸ್‌ಡಿಎಂಸಿ ಅಧ್ಯಕ್ಷ ಹೊಳೆ ಬಸಪ್ಪ ಹಾಗೂ ಕರೇಕಟ್ಟೆ ಕರಿಬಸಪ್ಪ, ಮುತ್ತುರಾಜ್, ಉಮೇಶ್, ಭಾಗ್ಯಾ, ಪ್ರೇಮಾಬಾಯಿ, ತಾರಾಬಾಯಿ, ಸುಶೀಲಾ ಬಾಯಿ, ನಿಂಗಮ್ಮ ಇದ್ದರು.