ಚನ್ನಗಿರಿ ತಾಲೂಕು ಮರವಂಜಿ ಗ್ರಾಮದಲ್ಲಿ ಗುರುವಾರ ರೈತರಿಗೆ ಕಿರುಚೀಲ ವಿತರಣೆ ಮತ್ತು ತರಬೇತಿ ಕಾರ್ಯಕ್ರಮವನ್ನು ಎಸ್.ಎಚ್. ಅರುಣ್‌ಕುಮಾರ್ ಉದ್ಘಾಟಿಸಿದರು. ಡಾ. ಮಲ್ಲಿಕಾರ್ಜುನ್, ಡಾ. ಪ್ರಶಾಂತ್, ಕೃಷಿ ಅಧಿಕಾರಿ ಎಂ. ಶೈಲಾ, ಮಣ್ಣು ವಿಜ್ಞಾನಿ ಡಿ.ಎಂ. ರಂಗಸ್ವಾಮಿ ಇತರರಿದ್ದರು. seeds
- ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಅರುಣ್‌ಕುಮಾರ್ ಹೇಳಿಕೆ
ಚನ್ನಗಿರಿ: ಮುಂಗಾರು ಹಂಗಾಮಿಗೆ ಅವಶ್ಯವಿರುವಷ್ಟು ರಸಗೊಬ್ಬರ, ಬಿತ್ತನೆ ಬೀಜವನ್ನು ಕೃಷಿ ಇಲಾಖೆ ದಾಸ್ತಾನು ಮಾಡಿದೆ, ಆತಂಕ ಪಡುವಂತಹ ಅವಶ್ಯಕತೆ ಇಲ್ಲ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಅರುಣ್‌ಕುಮಾರ್ ಹೇಳಿದರು. seeds
ಚನ್ನಗಿರಿ ತಾಲೂಕು ಮರವಂಜಿ ಗ್ರಾಮದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ರೈತರಿಗೆ ಕಿರುಚೀಲ ವಿತರಣೆ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ತರಕಾರಿ ಸಾವಯವ ಕಿಟ್ ವಿತರಿಸುತ್ತಿದೆ. ತೊಗರಿ ಬೆಳೆಯಲು ಹಾಗೂ ಪೋಷಕಾಂಶ ನಿರ್ವಹಣೆ ಮಾಡಲು ರೈತರಿಗೆ ವಿವಿಧ ಕಿರುಚೀಲ ಮತ್ತು ಕಿಟ್‌ಗಳನ್ನು ಒದಗಿಸುವ ಯೋಜನೆ ಹೊಂದಿದೆ. ತೊಗರಿ ಮತ್ತು ಇತರ ಧಾನ್ಯಗಳ ಪ್ರಮುಖ ಬಿತ್ತನೆ ಬೀಜಗಳನ್ನು ಸಣ್ಣ ಮತ್ತು ಅತಿಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಇದರ ಪ್ರಯೋಜನ ಪಡೆಯಿರಿ ಎಂದರು.
ಭೂಮಿಯ ಫಲವತ್ತತೆ ಕಡೆ ಗಮನ ಹರಿಸಿ. ನಮ್ಮಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆ, ಪ್ರತಿ ವರ್ಷ ಒಂದೇ ಬೆಳೆ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಆದ್ದರಿಂದ ಬೆಳೆಗಳನ್ನು ಬದಲಾಯಿಸಿ. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ, ನ್ಯಾನೋ ಯೂರಿಯ ಮತ್ತು ನ್ಯಾನೋ ಡಿಎಪಿ ಬಳಸುವಂತೆ ತಿಳಿಸಿದರು.
ರಸಗೊಬ್ಬರ ಖರೀದಿ ವೇಳೆ ಆಧಾರ್ ಕಾರ್ಡ್, ಎಫ್‌ಐಡಿ ಕಡ್ಡಾಯ. ತಪ್ಪದೇ ಬೆಳೆವಿಮೆ ಮಾಡಿಸಿ. ರಾಗಿಗೆ ಉತ್ತಮ ಬೆಂಬಲ ಬೆಲೆ ಸಿಗಲಿದೆ ಎಂದರು.
ಕತ್ತಲಗೆರೆ ಕೃಷಿ ವಿಜ್ಞಾನ ಕೇಂದ್ರದ ಡಾ. ಮಲ್ಲಿಕಾರ್ಜುನ್, ಡಾ. ಪ್ರಶಾಂತ್, ಕೃಷಿ ಅಧಿಕಾರಿ ಎಂ. ಶೈಲಾ, ಮಣ್ಣು ವಿಜ್ಞಾನಿ ಡಿ.ಎಂ. ರಂಗಸ್ವಾಮಿ, ಸಹಾಯಕ ವ್ಯವಸ್ಥಾಪಕ ಎಂ. ಲೋಕೇಶ್, ಮರವಂಜಿ ಗ್ರಾಪಂ ಮಾಜಿ ಅಧ್ಯಕ್ಷ ರುದ್ರನಾಯ್ಕ, ಪ್ರಗತಿಪರ ರೈತರಾದ ಉಮೇಶಪ್ಪ, ವೀರನಾಯ್ಕ ಇತರರು ಇದ್ದರು.