ಕ್ರೈಂ 
ದಾವಣಗೆರೆ

ಪ್ರೀತಿಸಿ ಕೈ ಹಿಡಿದ ಗಂಡನೇ ಬೇಡವಾದ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಮದುವೆಯಾದ ನಂತರ ಪರಸಂಗಕ್ಕೆ
  • ಪತಿಯನ್ನೇ ಬಲಿ ಪಡೆದ ಮಹಿಳೆ

ದಾವಣಗೆರೆ :

ಪ್ರೀತಿ ಕುರುಡು ಎಂದು ಹೇಳುತ್ತಾರೆ. ಆದರೆ ಪ್ರೀತಿಸಿ ಮದುವೆಯಾದ ನಂತರ ಮತ್ತೊಬ್ಬನೊಂದಿಗೆ ಕುರುಡು ಪ್ರೀತಿಯಲ್ಲಿ ಬಿದ್ದು ಪತ್ನಿಯೇ ತನ್ನ ಪತಿಯನ್ನು ಹತ್ಯೆ ಮಾಡಿಸಿ ಶವವನ್ನು ನದಿಗೆ ಎಸೆದ ಅಮಾನವೀಯ ಪ್ರಕರಣ ಇದು.

ವಿಜಯಪುರದಿಂದ ಹಲವು ವರ್ಷಗಳ ಹಿಂದೆ ಒಂದು ಕುಟುಂಬ ಉದ್ಯೋಗ ಅರಸಿ ದಾವಣಗೆರೆಗೆ ವಲಸೆ ಬಂದಿತ್ತು. ದಾವಣಗೆರೆ ತಾಲೂಕಿನ ಪಾಮೇನಹಳ್ಳಿಯ ರಘು ಹಮಾಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ. ಅವನಿಗೆ ವಲಸೆ ಬಂದಿದ್ದ ಕುಟುಂಬದ ಶ್ರುತಿ ಎಂಬ ಹುಡುಗಿಯೊಂದಿಗೆ ಪ್ರೀತಿ ಶುರುವಾಗುತ್ತದೆ.
ಇಬ್ಬರದೂ ಬೇರೆ ಬೇರೆ ಜಾತಿ. ಆದರೂ ಬಾಳಲು ಜಾತಿ ಬೇಕಿಲ್ಲ ಎಂದು ಇಬ್ಬರೂ ಸಪ್ತಪದಿ ತುಳಿದು ಜೀವನ ಸಾಗಿಸುತ್ತಾರೆ. ಒಬ್ಬ ಮಗ ಮತ್ತು ಒಬ್ಬ ಮಗಳು ಇರುವ ಸುಖಿ ಕುಟುಂಬ ಅದು.
ಮಗ ಏಳನೇ ತರಗತಿ, ಮಗಳು ಆರನೇ ತರಗತಿ. ಹಮಾಲಿಯಿಂದ ಬರುವ ಆದಾಯ ಸಾಕಾಗದು ಎಂದು ಶ್ರುತಿ ಗಾರೆ ಕೆಲಸಕ್ಕೆ ಹೋಗಲು ಆರಂಭಿಸುತ್ತಾಳೆ.
ಜೀವನ ನಿರ್ವಹಣೆಗೆ ಒಂದಷ್ಟು ಸಂಪಾದನೆಯಾಗಲಿ ಎಂದು ಗಾರೆ ಕೆಲಸಕ್ಕೆ ಹೋಗುತ್ತಿದ್ದ ಶ್ರುತಿಗೆ ಮೇಸ್ತ್ರಿ ಜುಬೇದುಲ್ಲಾ ಪರಿಚಯವಾಗುತ್ತದೆ. ಪರಿಚಯ ಆತ್ಮೀಯತೆಗೆ ಬದಲಾಗುತ್ತದೆ. ನಂತರ ಪರಸ್ಪರ ಬಿಟ್ಟು ಇರಲಾರದಷ್ಟು ಪ್ರೀತಿ ಅವರನ್ನು ಆವರಿಸಿಕೊಳ್ಳುತ್ತದೆ. ಆಗ ಅವರಿಗೆ ಹೊಳೆದದ್ದು ರಘುನನ್ನು ಇಲ್ಲ ಎನಿಸಿದರೆ ನಾವು ಜೋಡಿ ಹಕ್ಕಿಗಳಂತೆ ಬದುಕಬಹುದು ಎಂದು ಕನಸು ಕಟ್ಟಿಕೊಳ್ಳುತ್ತಾರೆ.
ಈ ಆಲೋಚನೆ ಬಂದದ್ದೇ ತಡ, ಶ್ರುತಿ ತನ್ನ ಗಂಡನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಾಳೆ. ದಾವಣಗೆರೆಯ ಗಡಿಯಾರ ಕಂಬದ ಬಳಿ ಬಾರ್‌ಗೆ ಗಂಡ ರಘುನನ್ನು ಕರೆದುಕೊಂಡು ಹೋಗಿ ಮಿತಿ ಮೀರಿ ಕುಡಿಸಲು ಶ್ರುತಿ ಹೊಸ ಪ್ರೇಮಿ ಜುಬೇದುಲ್ಲಾಗೆ ಹೇಳುತ್ತಾಳೆ.
ಶ್ರುತಿಯ ಪ್ಲಾನ್ ಪ್ರಕಾರ ಜುಬೇದುಲ್ಲಾ ತನ್ನ ಸಹಾಯಕ ಸುರೇಶ್ ಎಂಬುವನನ್ನು ತನ್ನೊಂದಿಗೆ ಕರೆದುಕೊಂಡು ಕಾರ್ಯಾಚರಣೆ ಆರಂಭಿಸುತ್ತಾನೆ. ರಘುಗೆ ಬಾರ್‌ನಲ್ಲಿ ಅತಿಯಾಗಿ ಕುಡಿಸಿ ಆಟೋದಲ್ಲಿ ಹರಿಹರದ ಹಳೆಯ ತುಂಗಭದ್ರಾ ಸೇತುವೆ ಬಳಿ ಕರೆದುಕೊಂಡು ಹೋಗುತ್ತಾರೆ. ಎಚ್ಚರವಿಲ್ಲದೆ ಕುಡಿದಿದ್ದ ರಘುವನ್ನು ಉಸಿರುಗಟ್ಟಿಸಿ ಕೊಲೆ ಮಾಡುತ್ತಾರೆ.ನಂತರ ಅಲ್ಲಿಯೇ ನದಿಗೆ ಎಸೆದು ಬರುತ್ತಾರೆ.
ಕೊಲೆ ನಡೆದ ನಂತರ ಪತ್ನಿ ಶ್ರುತಿ ಹದಡಿ ಪೊಲೀಸ್ ಠಾಣೆಯಲ್ಲಿ ಗಂಡ ಕಾಣೆಯಾಗಿದ್ದಾನೆ ಎಂದು ದೂರು ಸಲ್ಲಿಸುತ್ತಾಳೆ.
ಇಂತಹ ಎಷ್ಟೋ ಕೇಸುಗಳನ್ನು ತನಿಖೆ ಮಾಡಿರುವ ಪೊಲೀಸರಿಗೆ ಎಲ್ಲೋ ಏನೋ ಆಗಿದೆ ಎಂಬ ಶಂಕೆ ಬಂದು ವಿಚಾರಣೆ ಆರಂಭಿಸುತ್ತಾರೆ. ಶ್ರುತಿಯ ಸಹೋದರಿ ಸತ್ಯ ಸಂಗತಿಯನ್ನು ಪೊಲೀಸರ ಬಳಿ ಬಿಚ್ಚಿಡುತ್ತಾಳೆ. ಇಷ್ಟು ಗೊತ್ತಾದ ಮೇಲೆ ಪೊಲೀಸರು ಶ್ರುತಿಯ ಮೊಬೈಲ್ ವಶಕ್ಕೆ ಪಡೆದು ಚೆಕ್ ಮಾಡುತ್ತಾರೆ.
ಅದರಲ್ಲಿದ್ದ ಒಂದು ಮೆಸೇಜ್ ಕೊಲೆಯನ್ನು ದೃಢಪಡಿಸುತ್ತದೆ. ಕೆಲಸ ಆಯಿತು, ಬಾ ಹೋಗೋಣ ಎಂದು ಜುಬೇದುಲ್ಲಾ ಶ್ರುತಿಗೆ ಮೆಸೇಜ್ ಮಾಡಿರುತ್ತಾನೆ. ಈ ಮೆಸೇಜ್ ನೋಡಿದ ಪೊಲೀಸರು ಶ್ರುತಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ.
ಗಂಡ ಕುಡುಕ ಎಂದೇನೂ ಶ್ರುತಿ ಜುಬೇದುಲ್ಲಾನ ಸಂಗ ಬೆಳೆಸಿರಲಿಲ್ಲ. ಜುಬೇದುಲ್ಲಾನೂ ಕುಡುಕನೇ.

ದೇವರನ್ನು ಕೇಳಿಸಿದ್ದೇನೆ....

ಗಂಡ ನಾಪತ್ತೆಯಾಗಿರುವ ಬಗ್ಗೆ ದೇವರನ್ನು ಕೇಳಿಸಿದ್ದೇನೆ. ಬಾತಿ ಗುಡ್ಡ , ಹರಿಹರದ ಹೊಳೆ ಕಡೆ ಹೋಗಿದ್ದಾನೆ ಎಂದು ದೇವರು ಹೇಳಿದೆ ಎಂದು ಶ್ರುತಿ ತನ್ನ ಅತ್ತೆಯನ್ನು ನಂಬಿಸಲು ಪ್ರಯತ್ನಿಸಿದ್ದಳು. ಅಷ್ಟೇ ಅಲ್ಲದೆ ಅವರ ಕಡೆಯ ಕೆಲವರಿಂದ ಬಾತಿ ಮತ್ತು ಹರಿಹರದ ಕಡೆ ಹುಡುಕಿಸುವ ನಾಟಕವನ್ನೂ ಮಾಡಿದ್ದಾಳೆ. ಈ ವಿಷಯವನ್ನು ಶ್ರುತಿ ಅತ್ತೆಯೇ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.
"

ಶ್ರುತಿ ಗಾರೆ ಕೆಲಸಕ್ಕೆ ಹೋಗುವ ವೇಳೆ ಜುಬೇದುಲ್ಲಾನ ಸ್ನೇಹ ಬೆಳೆದಿದೆ. ಸ್ನೇಹ ಬೆಳೆದು ಎರಡು ವರ್ಷಗಳ ನಂತರ ಶ್ರುತಿ ಗಂಡನನ್ನು ಕೊಲೆ ಮಾಡುವ ಪ್ಲಾನ್ ರೂಪಿಸುತ್ತಾಳೆ. ಜುಬೇದುಲ್ಲಾ ಮತ್ತು ಅವನ ಸಹಾಯಕ ಸೇರಿ ರಘುನನ್ನು ಕೊಲೆ ಮಾಡಿ ತುಂಗಭದ್ರಾ ನದಿಗೆ ಎಸೆಯುತ್ತಾರೆ. ಆದರೂ ಶ್ರುತಿ ಹದಡಿ ಪೊಲೀಸ್ ಠಾಣೆಯಲ್ಲಿ ಗಂಡ ನಾಪತ್ತೆ ಎಂದು ದೂರು ಸಲ್ಲಿಸಿರುತ್ತಾರೆ. ವಿಚಾರಣೆ ಮಾಡಿದಾಗ ನಾಪತ್ತೆಯಲ್ಲ, ಕೊಲೆ ಎಂಬುದು ಬಯಲಿಗೆ ಬಂದಿದೆ.

— ಶೇಖರ್ ಎಚ್.ಟಿ. ಎಸ್ಪಿ