- ಮಲ್ಲಿಕಾರ್ಜುನ ಕಡಕೋಳ ಹೇಳಿಕೆ
- ವೃತ್ತಿ ರಂಗಭೂಮಿ ರಂಗಾಯಣದಿಂದ ಆಯೋಜನೆ
ದಾವಣಗೆರೆ : ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದಿಂದ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು ಏ. 10ರಿಂದ 14ರ ವರೆಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಉತ್ಸವದಲ್ಲಿ 5 ಬಹುಭಾಷಾ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ತೆಲುಗಿನ ‘ಬಾಲನಾಗಮ್ಮ’, ತಮಿಳಿನ ‘ದ್ರೌಪದಿ’, ಮರಾಠಿಯ ‘ಕಟ್ಯಾರ ಕಾಳಜಾತ್ ಘುಸ್ಲೀ’ ನಾಟಕಗಳು ಈಗಾಗಲೇ ರಾಷ್ಟ್ರೀಯ ರಂಗ ಭೂಮಿಕೆಯಲ್ಲಿ ಪ್ರಸಿದ್ಧಿ ಪಡೆದಿವೆ. ಅವುಗಳ ರಸದೌತಣವನ್ನು ದಾವಣಗೆರೆಯ ರಂಗಾಸಕ್ತರಿಗೆ ಉಣಬಡಿಸುವ ಹಬ್ಬವೇ ರಾಷ್ಟ್ರೀಯ ವೃತ್ತಿ ರಂಗೋತ್ಸವ ಎಂದರು.
ಮಲಯಾಳಂನ ‘ಕುಹೂ’ ನಾಟಕ, ಕಮತಗಿಯ ಶ್ರೀ ಹೊಳೆ ಹುಚ್ಚೇಶ್ವರ ನಾಟಕ ಕಂಪನಿಯ ಇತ್ತೀಚಿಗೆ ಹೆಚ್ಚು ಪ್ರದರ್ಶನ ಕಂಡ ‘ಗಂಡನಿಗೆ ತಕ್ಕ ಹೆಂಡತಿ’ ಸಾಮಾಜಿಕ ನಾಟಕವೂ ಪ್ರದರ್ಶನಗೊಳ್ಳಲಿದೆ. ಏ. 10ರಂದು ಸಂಜೆ ನಾಡೋಜ ಬರಗೂರು ರಾಮಚಂದ್ರಪ್ಪ ರಾಷ್ಟ್ರೀಯ ವೃತ್ತಿ ರಂಗೋತ್ಸವ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.
ಹಿರಿಯ ರಂಗಕರ್ಮಿ ಎಸ್.ಎಸ್. ಸಿದ್ಧರಾಜು, ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ, ದೇವಸೇನಾ ಡಿ.ಎಸ್, ಶಶಿಧರ ಬಸಾಪುರ ಸುದ್ದಿಗೋಷ್ಠಿಯಲ್ಲಿದ್ದರು.
ವಿಚಾರ ಸಂಕಿರಣ
ರಾಷ್ಟ್ರೀಯ ವೃತ್ತಿ ರಂಗೋತ್ಸವದಲ್ಲಿ ‘ಭಾರತೀಯ ವೃತ್ತಿ ರಂಗಭೂಮಿಯ ವಿಸ್ತೃತ ನೆಲೆಗಳು’ ವಿಷಯ ಕುರಿತು ಏ. 11ರಿಂದ 13ರ ವರೆಗೆ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಕಡಕೋಳ ಹೇಳಿದರು.
ಉತ್ತರ, ದಕ್ಷಿಣ ಮತ್ತು ಕೊಂಕಣ, ಈಶಾನ್ಯ ಭಾರತದ ವೃತ್ತಿ ರಂಗಭೂಮಿ ಕುರಿತು ನಡೆಯುವ ವಿಚಾರ ಸಂಕಿರಣದಲ್ಲಿ ಪಾಂಡಿಚೆರಿ, ಮುಂಬೈ, ಹೈದರಾಬಾದ್, ಕರ್ನಾಟಕದ ವಿವಿಧ ಕಡೆಗಳಿಂದ ಬರುವ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸುವರು. ಇವುಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಸಂಕಲ್ಪವಿದೆ ಎಂದು ತಿಳಿಸಿದರು.
ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ರಂಗಾಯಣದಿಂದ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರಾಭಿನಯ ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕೇರಳದಿಂದ ಹಾಗೂ ರಾಜ್ಯದ ವಿವಿಧೆಡೆಯಿಂದ 35 ಅರ್ಜಿಗಳು ಬಂದಿವೆ. ಹತ್ತು ನಿಮಿಷದ ಸ್ಪರ್ಧೆಗೆ 25 ಸಾವಿರ ರೂ. ಪ್ರಥಮ ಬಹುಮಾನ, 15 ಸಾವಿರ ರೂ. ದ್ವಿತೀಯ, 10 ಸಾವಿರ ರೂ. ತೃತೀಯ ಬಹುಮಾನವಿದೆ. 5 ಸಾವಿರ ರೂ.ಗಳ ಸಮಾಧಾನಕರ ಬಹುಮಾನವಿದೆ ಎಂದು ಮಲ್ಲಿಕಾರ್ಜುನ ಕಡಕೋಳ ತಿಳಿಸಿದರು.
ಮಾ. 27ರಂದು ನಡೆಯುವ ಸಮಾರಂಭವನ್ನು ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್ ಉದ್ಘಾಟಿಸುವರು ಎಂದು ಹೇಳಿದರು.