ದಾವಣಗೆರೆಯಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ, ಸುಮತಿ ಜಯಪ್ಪ, ವಾಸುದೇವ ರಾಯ್ಕರ್, ವೈ.ಕುಮಾರ್, ಹೇಮಾ ಗಣೇಶ್ ಶೇಟ್ ಇತರರಿದ್ದರು.  
ದಾವಣಗೆರೆ

ನಾಲ್ವಡಿ ಕೃಷ್ಣರಾಜರ ಕಾರ್ಯ ಅಜರಾಮರ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಅಧಿಕಾರದ ವ್ಯಾಪ್ತಿ ವಿಕೇಂದ್ರೀಕರಿಸಿದ ಮಹಾರಾಜರು
  • ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಅನಿಸಿಕೆ
  • ಒಡೆಯರ್ ಪುತ್ಥಳಿ ನಿರ್ಮಾಣಕ್ಕೆ ರಾಯ್ಕರ್ ಭರವಸೆ
ದಾವಣಗೆರೆ: ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ ಶಾಶ್ವತ ಕೆಲಸಗಳಿಂದ ಕನ್ನಡ ನಾಡಿನ ಅಭಿವೃದ್ಧಿ ನೂರ್ಮಡಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷ್ಣರಾಜ ಒಡೆಯರ್ ಅವರು ಮಹಾರಾಜರಾಗಿದ್ದರೂ ಸಹ ಅಧಿಕಾರದ ವ್ಯಾಪ್ತಿಯನ್ನು ವಿಕೇಂದ್ರೀಕರಿಸಿ ಪ್ರಜೆಗಳು ಸಹ ಅಧಿಕಾರದಲ್ಲಿ ಒಳಗೊಳ್ಳುವಂತೆ ಮಾಡಿದರು. ನಾಡಿಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ನೀಡಿದರು ಎಂದರು.
ಉದ್ಯಮಿ ವಾಸುದೇವ ರಾಯ್ಕರ್ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜಪ್ರಭುತ್ವದ ಪ್ರತಿನಿಧಿಯಾಗಿದ್ದರೂ ಪ್ರಜಾಪ್ರಭುತ್ವದ ಹಿತಾಸಕ್ತಿಗೆ ಮಿಗಿಲಾಗಿ ರಾಜ್ಯಭಾರ ಮಾಡಿದ ಮಹಾನ್ ವ್ಯಕ್ತಿ. ಅವರು ನಿರ್ಮಿಸಿದ ಶಾಲೆ, ಕಾಲೇಜು, ಆಸ್ಪತ್ರೆ, ಅಣೆಕಟ್ಟು, ವಿಶ್ವವಿದ್ಯಾಲಯಗಳಲ್ಲಿ ಅವರ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಅವರ ಸಾಧನೆಯನ್ನು ಯುವಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ದಾವಣಗೆರೆಯ ಕುವೆಂಪು ಕನ್ನಡ ಭವನದ ಆವರಣದಲ್ಲಿ ನಾಲ್ವಡಿ ಅವರ ಪುತ್ಥಳಿಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದ ಅವರು, ಶಿಲ್ಪಿ ವೈ.ಕುಮಾರ್ ಅವರಿಗೆ ಪುತ್ಥಳಿ ನಿರ್ಮಾಣದ ಜವಾಬ್ದಾರಿ ವಹಿಸಿದ್ದಾಗಿ ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದಾಗಿ 1915 ರಲ್ಲಿ ಸ್ಥಾಪಿತ ಕನ್ನಡ ಸಾಹಿತ್ಯ ಪರಿಷತ್ತು 111 ವರ್ಷಗಳಿಂದ ನಾಡು ನುಡಿಯ ಸೇವೆಯಲ್ಲಿ ತೊಡಗಿದೆ. ರಾಜ್ಯದ ಪ್ರತಿ ಮನೆಯಲ್ಲೂ ನಾಲ್ವಡಿ ಅವರ ಭಾವಚಿತ್ರ ಇರಿಸಿ ಪೂಜೆ ಮಾಡಬೇಕು ಎಂದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ವೈ.ಕುಮಾರ್, ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಹೇಮಾ ಗಣೇಶ್ ಶೇಟ್ ಮಾತನಾಡಿದರು.
ಸಮಾರಂಭದಲ್ಲಿ ಸಾಹಿತಿ ಜಿ.ಕೆ.ಕುಲಕರ್ಣಿ, ಸಾಹಿತಿ ಸಿದ್ದೇಶ್ ಕುರ್ಕಿ, ಕಸಾಪ ಸಂಘಟನಾ ಕಾರ್ಯದರ್ಶಿ ಸಿ.ಜಿ.ಜಗದೀಶ್ ಕೂಲಂಬಿ, ಪತ್ರಕರ್ತ ಜಿಗಳಿ ಪ್ರಕಾಶ್, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಚಿತ್ರ ಕಲಾವಿದ ಮಹಾಲಿಂಗಪ್ಪ, ವಿನೂತನ ಮಹಿಳಾ ಸಮಾಜದ ಕಾರ್ಯದರ್ಶಿ ಇಂದಿರಾ ರೆಡ್ಡಿ, ಚಂದ್ರಿಕಾ ಮಂಜುನಾಥ್, ಎಚ್.ಎನ್.ಶಿವಕುಮಾರ್, ಸತ್ಯಭಾಮ ಮಂಜುನಾಥ್, ಎಸ್.ಎನ್.ಮಲ್ಲಮ್ಮ ಇತರರಿದ್ದರು.
ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕ ಮಾತನಾಡಿದರು. ಬಿ.ದಿಳ್ಯಪ್ಪ ಸ್ವಾಗತಿಸಿದರು. ರೇವಣಸಿದ್ದಪ್ಪ ಅಂಗಡಿ ವಂದಿಸಿದರು.