ದಾವಣಗೆರೆಯ ವಿದ್ಯಾನಗರದ ಉದ್ಯಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ, ‘ಕಲಾ ನಡಿಗೆ ನಿಮ್ಮ ಬಳಿಗೆ’ ಕಾರ್ಯಕ್ರಮವನ್ನು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿದರು. ಬಿ. ವಾಮದೇವಪ್ಪ ತೊಗಲೇರಿ, ಬಿ. ದಿಳ್ಯೆಪ್ಪ, ಎನ್.ಎಸ್. ರಾಜು, ರವಿಚಂದ್ರ ಇತರರಿದ್ದರು.
- ಕಲಾ ನಡಿಗೆ ನಿಮ್ಮ ಬಳಿಗೆ ಕಾರ್ಯಕ್ರಮಕ್ಕೆ ಜನಸ್ಪಂದನೆ
- ಮಳೆ ನಡುವೆಯೂ ಮನ ರಂಜಿಸಿದ ಗೀತಗಾಯನ
- ಮಕ್ಕಳಲ್ಲಿ ಕಲಾಸಕ್ತಿ ಬೆಳೆಸಲು ದಿನೇಶ್ ಕೆ ಶೆಟ್ಟಿ ಸಲಹೆ
ದಾವಣಗೆರೆ: ಸಾರ್ವಜನಿಕರು ಇರುವ ಸ್ಥಳದಲ್ಲೇ ಕಲಾವಿದರ ಮೂಲಕ ಸಂಗೀತ ರಸದೌತಣ ಉಣಬಡಿಸುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವ ‘ಕಲಾ ನಡಿಗೆ ನಿಮ್ಮ ಬಳಿಗೆ’ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರೆಯಿತು.
ವಿದ್ಯಾನಗರದ ಉದ್ಯಾನದಲ್ಲಿ ಸಂಜೆ, ಗುರು ವಚನ ಸಂಗೀತ ಸಂಸ್ಥೆ ನೀಡಿದ ಮೊದಲ ಕಾರ್ಯಕ್ರಮ ಶ್ರೋತೃಗಳ ಕಿವಿ ತಣಿಸಿತು. ಉದ್ಘಾಟನಾ ಕಾರ್ಯಕ್ರಮ ಮುಗಿವ ಹೊತ್ತಿಗೆ ಜಡಿ ಮಳೆ ಶುರುವಾಯಿತು. ಜನರು ಕೂತಿದ್ದ ಕುರ್ಚಿಗಳನ್ನು ಬಿಟ್ಟು ವೇದಿಕೆಗೇ ದಾಂಗುಡಿಯಿಟ್ಟರು. ಕೆಲವರು ಕೂತಿದ್ದರೆ ಇತರರು ನಿಂತುಕೊಂಡೇ ಅರ್ಧ ತಾಸಿಗೂ ಹೆಚ್ಚು ಕಾಲ ಸಂಗೀತ ಆಸ್ವಾದಿಸಿದರು.
ಗಾಯಕ ರವಿ ಆನಂದ್, ಹಿಂದೂಸ್ತಾನಿ ಪದ್ಧತಿಯ ಮಲ್ಹಾರ್ ರಾಗದಲ್ಲಿ ಒಂದು ಹಾಡನ್ನು ಪ್ರಸ್ತುತಪಡಿಸಿದ್ದಲ್ಲದೆ ಪುರಂದರದಾಸರ ‘ಹರಿ ಕುಣಿದಾ’ ಕೀರ್ತನೆಯನ್ನೂ ಹಾಡಿ ಮನ ರಂಜಿಸಿದರು. ಗುರು ವಚನ ಸಂಗೀತ ಸಂಸ್ಥೆ ಸಂಸ್ಥಾಪಕ ಶರಣಯ್ಯ ‘ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ’ ಗೀತೆಯನ್ನು ಭೈರವಿ ರಾಗದಲ್ಲಿ ಹಾಡಿದರು.
ಸಂಯುಕ್ತ ಮುತಾಲಿಕ್ ‘ಇಷ್ಟು ಕಾಲ ಒಟ್ಟಿಗಿದ್ದು..’ ಎಂಬ ಭಾವಗೀತೆ ಹಾಡಿದರು. ಚಿಣ್ಣರು ಕೂಡ ತಾವೇನು ಕಡಿಮೆ ಎಂಬಂತೆ ‘ಸತ್ಯವಂತರ ಸಂಗವಿರಲು ತೀರ್ಥವೇತಕೆ..’ ‘ಅರಳಿ ನಿಂತ ಹೂವಿನಲ್ಲಿ ದೇವರು ತುಂಬಿರುವ..’ ಮೊದಲಾದ ಹಾಡುಗಳನ್ನು ಹಾಡಿ ತಲೆದೂಗುವಂತೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಸರ್ಕಾರ ಅನೇಕ ಸಂಗೀತ ಕಲಾಪ್ರತಿಭೆಗಳನ್ನು ಪರಿಚಯಿಸಿ ಮುಖ್ಯವಾಹಿನಿಗೆ ತಡುವ ಕೆಲಸವನ್ನು ಸರ್ಕಾರ ನಿರ್ವಹಿಸುತ್ತಿದೆ. ‘ಕಲಾ ನಡಿಗೆ ನಿಮ್ಮ ಬಳಿಗೆ’ ಎಂಬ ನೂತನ ಕಾರ್ಯಕ್ರಮ ಜನರಿಗೆ ಮನರಂಜಿಸಲಿ ಎಂದರು.
ಪಾಲಕರು ತಮ್ಮ ಮಕ್ಕಳನ್ನು ಇಂಜಿನಿಯರ್, ವೈದ್ಯಕೀಯ ಓದಿಗೆ ಸೀಮಿತ ಮಾಡದೆ ಸಾಂಸ್ಕೃತಿಕ ಕಲಾ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಇಂದು ಉತ್ತಮ ನಿರೂಪಣಾಕಾರರಿಗೂ ಬೇಡಿಕೆ ಇದೆ. ಇದರತ್ತವೂ ಗಮನ ಹರಿಸಬೇಕು ಎಂದರು.
ಪಾಲಿಕೆ ಮಾಜಿ ಸದಸ್ಯ ಬಾ.ಮಾ. ಬಸವರಾಜಯ್ಯ ಮಾತನಾಡಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅಮರನಾರಾಯಣ ಅವರು ಉದ್ಯಾನವನದಲ್ಲಿ ಉದಯರಾಗ ಎಂಬ ಕಾರ್ಯಕ್ರಮ ಆಯೋಜಿಸಿ ಜನರಿಗೆ ಸಂಗೀತ ಸುಧೆ ಹರಿಸಿದ್ದರು. ಇದೀಗ ಕನ್ನಡ ಸಂಸ್ಕೃತಿ ಇಲಾಖೆ ಆರಂಭಿಸಿದ ಹೊಸ ಕಾರ್ಯಕ್ರಮ ಜನರನ್ನು ತಲುಪಲಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ, ಕಾರ್ಯದರ್ಶಿ ಬಿ. ದಿಳ್ಯೆಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಸ್ಪೂರ್ತಿ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು, ಆರೋಹಿ ಸಂಸ್ಥೆಯ ಆನಂದ ಪಾಟೀಲ್ ಇತರರಿದದ್ದರು.