ಹೊನ್ನಾಳಿ ಬೆನಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮನೋಹರ್ ಮಠದ್, ಎಚ್.ಎಂ. ಅರುಣ್ ಕುಮಾರ್, ಪ್ರವಿಣ್, ಬಸವನಗೌಡ, ಮಹೇಂದ್ರಗೌಡ, ಸಿದ್ದೇಶ್, ಮಲ್ಲೇಶ್, ಲಿಂಗರಾಜು ಇತರರಿದ್ದರು.Hindu Sangam
- ದೇವಾಲಯ ಸಮಿತಿ ಸಂಯೋಜಕ ಮಠದ್ ಹೇಳಿಕೆ
- ಹಿಂದೂ ಸಂಗಮ ಕಾರ್ಯಕ್ರಮ
ಹೊನ್ನಾಳಿ: ಜಗತ್ತಿನ ಅನೇಕ ದೇಶಗಳು ನೂರಾರು ವರ್ಷಗಳ ಕಾಲ ಭಾರತದ ಮೇಲೆ ದಾಳಿ ಮಾಡಿದರೂ ನಮ್ಮ ನ್ನು ಭೂಪಟದಿಂದ ಅಳಿಸಲು ಸಾಧ್ಯವಾಗಲಿಲ್ಲ. ಅಂಥ ಅತೀಂದ್ರಿಯ ಅಂತಃಕರಣ ಶಕ್ತಿ ಈ ಮಣ್ಣಿಗಿದೆ. ಹೀಗಾಗಿ ನಮ್ಮ ದೇಶ ಮೃತ್ಯುಂಜಯ ಭಾರತ ಎಂದು ಕರೆಯಿಸಿಕೊಳ್ಳುತ್ತಿದೆ ಎಂದು ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ತಿಳಿಸಿದರು.
ಆರ್‌ಎಸ್‌ಎಸ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಿಂದೂ ಸಂಗಮ ಆಯೋಜನಾ ಸಮಿತಿ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವದ ಯಾವುದೇ ದೇಶದ ಮೇಲೆ ದಾಳಿ ಮಾಡದೆ ಎಲ್ಲರ ಪ್ರೀತಿ ಗಳಿಸಿದ ಏಕೈಕ ರಾಷ್ಟ್ರ ಭಾರತ. ಪ್ರಾಚೀನ ಕಾಲದಿಂದಲೂ ಭಾರತ ವಿಶ್ವಗುರುವಾಗಿ ನಿಂತಿದೆ. ಹಿಂದುತ್ವ ಎಂಬುದು ಕೇವಲ ಧರ್ಮವಲ್ಲ, ಅದು ನಮ್ಮ ಜೀವನ ಪದ್ಧತಿ. ಆರ್‌ಎಸ್‌ಎಸ್ ನಂಬಿರುವುದು ಇದೇ ಜೀವನ ಪದ್ಧತಿಯನ್ನು. ಇದನ್ನು ಅರಿಯದ ಕೆಲವು ಡೋಂಗಿ ಜಾತ್ಯತೀತವಾದಿಗಳು ಸಂಘದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.
ಆರ್‌ಎಸ್‌ಎಸ್ ಸ್ಥಾಪನೆಯಾಗಿ ನೂರು ವರ್ಷ ಪೂರೈಸುತ್ತಿದ್ದರೂ, ದೇಶದ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರನ್ನು ದೇಶ ಬಿಟ್ಟು ಹೋಗಿ ಎಂದು ಹೇಳಿಲ್ಲ. ಸಂಘ ಮುಸ್ಲಿಮರನ್ನು ವಿರೋಧಿಸಲು ಸ್ಥಾಪಿತವಾದದ್ದಲ್ಲ. ನಮ್ಮ ವಿರೋಧ ಇರುವುದು ಭಾರತದಲ್ಲಿ ಹುಟ್ಟಿ ಬೆಳೆದು ಇಲ್ಲಿನ ಸವಲತ್ತು ಪಡೆದು ಬೇರೆ ದೇಶಕ್ಕೆ ನಿಷ್ಠೆ ತೋರಿಸುವವರ ವಿರುದ್ಧ ಮಾತ್ರ ಎಂದು ಸ್ಪಷ್ಟಪಡಿಸಿದರು.
ಸಂಘವು ಎಂದಿಗೂ ಪ್ರಚಾರಕ್ಕಾಗಿ ಕೆಲಸ ಮಾಡುವುದಿಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿ ಅವಘಡ ಸಂಭವಿಸಿದರೂ ಮೊದಲು ರಕ್ಷಣೆಗೆ ನಿಲ್ಲುವುದು ನಮ್ಮ ಸ್ವಯಂ ಸೇವಕರು. ಜಾತಿ ಭೇದ ಮರೆತು ಹಿಂದೂ ಸಮಾಜದ ಶಕ್ತಿಯನ್ನು ಒಗ್ಗೂಡಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.
ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಹಿಂದೂಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಉಪಾಧ್ಯಕ್ಷ ಎಚ್.ಎಂ.ಅರುಣ್‌ಕುಮಾರ್ ವಹಿಸಿದ್ದರು.ಕೋಶಾಧಿಕಾರಿ ಪ್ರವೀಣ್ ರಾಮಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆನಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಉಷಾ ಸಂತೋಷ್, ವೀಣಾ ಬಸವನಗೌಡ, ಬಸವನಗೌಡ, ಗ್ರಾಪಂ ಸದಸ್ಯ ಮಹೇಂದ್ರ ಗೌಡ, ಮಾಜಿ ಸೈನಿಕ ಸಿದ್ದೇಶ್, ಮಲ್ಲೇಶ್, ಲಿಂಗರಾಜು, ಸುರೇಶ್, ಸಿದ್ದೇಶ್, ಬೀರಗೊಂಡನಹಳ್ಳಿ ಬಸವರಾಜು, ಕೇಶವ್, ಗಿರೀಶ್, ಬೆನಕೇಶ್, ಮಧು, ವಿಜಯ್, ಗಣೇಶ್, ಅರುಣ್ ಇತರರು ಇದ್ದರು.