ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಶನಿವಾರ ದಿಢೀರ್ ಭೇಟಿ ನೀಡಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ರೋಗಿಗಳು, ಅವರ ಸಂಬಂಧಿಕರೊಂದಿಗೆ ಮಾತನಾಡಿದರು.
- ಗುಣಮಟ್ಟ ಸೇವೆಯ ಗುರಿ ತಲುಪಲು ಸೂಚನೆ
- ರೋಗಿಗಳ ಜತೆ ಚಿಕಿತ್ಸೆ ಬಗ್ಗೆ ಸಮಾಲೋಚನೆ
- ಕ್ಯಾಂಟೀನ್ ಸ್ವಚ್ಛತೆ ಕಾಪಾಡಿಕೊಳ್ಳಲು ಸಲಹೆ
ದಾವಣಗೆರೆ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಶನಿವಾರ ದಿಢೀರ್ ಭೇಟಿ ನೀಡಿ, ಅಲ್ಲಿನ ವಿವಿಧ ವಿಭಾಗಗಳು, ವಾರ್ಡ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ಅವರ ಸಂಬಂಧಿಕರೊಂದಿಗೆ ಮಾತನಾಡಿ ಪಡೆಯುತ್ತಿರುವ ಚಿಕಿತ್ಸೆ ಚೆನ್ನಾಗಿದೆಯೆ? ವೈದ್ಯಕೀಯ ಸೌಲಭ್ಯಗಳು ಸಿಗುತ್ತಿವೆಯೇ? ಎಂದೆಲ್ಲ ಪ್ರಶ್ನೆ ಹಾಕಿ ಉತ್ತರ ಪಡೆದರು.
ಆಸ್ಪತ್ರೆಯ ಸ್ವಚ್ಛತೆ, ಔಷಧ ಲಭ್ಯತೆ, ವೈದ್ಯರು ಹಾಗೂ ಸಿಬ್ಬಂದಿ ಕಾರ್ಯವೈಖರಿ ಸೇರಿ ವಿವಿಧ ವ್ಯವಸ್ಥೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಅಧೀಕ್ಷಕರಿಗೆ ಸೂಚನೆ ನೀಡಿದರು. ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉತ್ತಮ ಚಿಕಿತ್ಸೆ ಮತ್ತು ಮಾನವೀಯ ಸೇವೆ ದೊರಕುವುದು ಅತ್ಯಂತ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಆಸ್ಪತ್ರೆಯ ಆಡಳಿತ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ಆಸ್ಪತ್ರೆಯ ಕ್ಯಾಂಟೀನ್‌ಗೆ ತೆರಳಿ ಅಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆಯೂ ಸಿಬ್ಬಂದಿಗೆ ಸೂಚಿಸಿದರು. ಟೀ ಹಾಗೂ ರವೆ ಗಂಜಿಗೆ ರೋಗಿಗಳ ಕಡೆಯವರಿಂದ ಪಡೆಯುತ್ತಿರುವ ಹಣದ ಬಗ್ಗೆ ಮಾಹಿತಿ ಪಡೆದರು.
ಕಟ್ಟಡದ ಚಾವಣಿಯ ಚಕ್ಕಳ ಬೀಳುತ್ತಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಆಗಬೇಕಿದೆ ಎಂದರು. ಎಕ್ಸರೇ ವಿಭಾಗಕ್ಕೆ ತೆರಳಿ ಹೊಸ ಕಟ್ಟಡವಾದ ನಂತರದಲ್ಲಿ ಎಂಆರ್‌ಐ ಯಂತ್ರ ಬರಲಿದೆ ಎಂದು ಹೇಳಿದರು.
ಆಸ್ಪತ್ರೆ ಡಿ ದರ್ಜೆ ನೌಕರರು ಕೆಲಸ ಕಾಯಂ ಮಾಡಿಸಿಕೊಡುವಂತೆ ಅಹವಾಲು ಸಲ್ಲಿಸಿದರು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಸಂಸದರು ಹೇಳಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಅಧೀಕ್ಷಕ ಡಾ. ನಾಗೇಂದ್ರಪ್ಪ ಹಾಗೂ ವೈದ್ಯರಿದ್ದರು.