ದಾವಣಗೆರೆಯ ಕೆ.ಆರ್. ಮಾರುಕಟ್ಟೆ ಶಾಲೆಯ ಸಂಕೀರ್ಣಕ್ಕೆ ಗುರುವಾರ ದಾಳಿ ನಡೆಸಿದ ಅಧಿಕಾರಿಗಳು ಬಾಡಿಗೆ ಪಾವತಿಸದ ಮಳಿಗೆಯವರಿಗೆ ಬಿಸಿ ಮುಟ್ಟಿಸಿದರು. ಡಿಡಿಪಿಐ ಜಿ. ಕೊಟ್ರೇಶ್, ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್ ಮತ್ತು ಸಿಬ್ಬಂದಿ ಇದ್ದರು. 
ದಾವಣಗೆರೆ

ಬಾಡಿಗೆ ಬಾಕಿ, 15ಕ್ಕೂ ಹೆಚ್ಚು ಮಳಿಗೆಗೆ ಬೀಗ

ಪ್ರಮುಖ ಮುಖ್ಯಾಂಶಗಳು

  • ಕೆ.ಆರ್. ಮಾರುಕಟ್ಟೆ ಶಾಲೆಯ ಸಂಕೀರ್ಣ
  • ಅಧಿಕಾರಿಗಳ ಜಂಟಿ ಕಾರ್ಯಾಚರಣೆ
  • ವ್ಯಾಪಾರಸ್ಥರಿಗೆ ತಾಗಿದ ಬಿಸಿ
ದಾವಣಗೆರೆ : ನಗರದ ಕೆ.ಆರ್. ಮಾರುಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಸಂಕೀರ್ಣದಲ್ಲಿ ವರ್ಷಗಳಿಂದ ಬಾಡಿಗೆ ಪಾವತಿಸದ 15ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಗೆ ಗುರುವಾರ ಬೀಗ ಹಾಕಲಾಯಿತು.
ಡಿಡಿಪಿಐ ಜಿ. ಕೊಟ್ರೇಶ್, ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್ ನೇತೃತ್ವದಲ್ಲಿ ಶಿಕ್ಷಣ, ಕಂದಾಯ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಬಾಡಿಗೆ ಬಾಕಿ ಉಳಿಸಿಕೊಂಡ ವರ್ತಕರಿಗೆ ಬಿಸಿ ಮುಟ್ಟಿಸಿದರು.
ಒಂದೊಂದೇ ಮಳಿಗೆಗೆ ಭೇಟಿ ನೀಡಿದ ಅವರು, ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ, ಏಕೆ ಕಟ್ಟಿಲ್ಲ ಎಂದು ಮಾಹಿತಿ ಪಡೆದುಕೊಂಡರು. ಬಾಡಿಗೆ ಕಟ್ಟದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು. ಈ ಹಣ ಸರ್ಕಾರಕ್ಕೆ ಸಂದಾಯವಾಗಬೇಕು. ವರ್ಷಗಟ್ಟಲೆ ಬಾಕಿ ಉಳಿಸಿಕೊಂಡರೆ ನಿರ್ವಹಣೆ ಮಾಡುವುದು ಹೇಗೆ? ಪ್ರತಿ ತಿಂಗಳು ಸರಿಯಾಗಿ ಬಾಡಿಗೆ ಪಾವತಿಸಬೇಕು ಎಂದು ವರ್ತಕರಿಗೆ ಸೂಚಿಸಲಾಯಿತು.
ಈ ದಿಢೀರ್ ಕಾರ್ಯಾಚರಣೆಯಿಂದ ವ್ಯಾಪಾರಸ್ಥರಿಗೆ ಬಿಸಿ ತಾಗಿತು. ಕೆಲವು ವರ್ತಕರು ಸಮಯ ಕೇಳಿದರು. ಮತ್ತೆ ಕೆಲವರು ಒಂದೆರಡು ದಿನಗಳಲ್ಲಿ ಪಾವತಿಸುವುದಾಗಿ ತಿಳಿಸಿದರು. ಕೆಲವು ಮಳಿಗೆಗಳನ್ನು ಮುಲಾಜಿಲ್ಲದೇ ಬಂದ್ ಮಾಡಿ ಬೀಗ ಹಾಕಲಾಯಿತು.

ವರ್ಷಗಳಿಂದ ಇದೇ ಚಾಳಿ

ಶಾಲೆಯ ಕಟ್ಟಡದಲ್ಲಿ 365 ವಾಣಿಜ್ಯ ಮಳಿಗೆಗಳಿವೆ. ಅಲ್ಲಿ ದವಸ ಧಾನ್ಯ, ಪೂಜಾ ಸಾಮಗ್ರಿ, ಮಣ್ಣಿನ ದೀಪ, ಮಡಕೆಗಳು, ರೈತರು ಉಪಯೋಗಿಸುವ ಉಪಕರಣಗಳು, ಕಾಯಿ ಸುಲಿಯುವ ಯಂತ್ರ, ಪೊರಕೆ, ಬಿದಿರಿನ ಬುಟ್ಟಿ, ದಿನಸಿ ಮುಂತಾದ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ. 20ಕ್ಕೂ ಹೆಚ್ಚು ವರ್ಷಗಳಿಂದ ಅಲ್ಲಿ ವ್ಯಾಪಾರ ನಡೆಯುತ್ತಿದೆ.
ಒಟ್ಟು 365 ಮಳಿಗೆಗಳ ಪೈಕಿ 180 ಮಂದಿ ಬಾಡಿಗೆ ಪಾವತಿ ಮಾಡಿರಲಿಲ್ಲ. ಕಳೆದ ಕೆಲ ದಿನಗಳಿಂದ 10 ಜನ ಕಟ್ಟಿದ್ದು ಇನ್ನೂ 170 ವರ್ತಕರು ಪಾವತಿಸಬೇಕಿದೆ.
ಎಲ್ಲರೂ ಸರಿಯಾಗಿ ಪಾವತಿಸಿದರೆ ಶಿಕ್ಷಣ ಇಲಾಖೆಗೆ ಪ್ರತಿ ತಿಂಗಳು 5 ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತದೆ. ಆದರೆ ವರ್ತಕರು ಸರಿಯಾಗಿ ಪಾವತಿಸುತ್ತಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಆದಾಯವೂ ಹೋಗುತ್ತಿಲ್ಲ.
ಬಾಕಿ ಉಳಿಸಿಕೊಂಡವರಲ್ಲಿ 2 ಲಕ್ಷ ರೂ.ಗಳಿಗೂ ಹೆಚ್ಚು ಬಾಕಿ ಉಳಿಸಿಕೊಂಡವರು ಒಬ್ಬ ವರ್ತಕರಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಬಾಕಿಯನ್ನು ಒಬ್ಬರು ಪಾವತಿಸಬೇಕಿದೆ. 50 ಸಾವಿರಕ್ಕೂ ಹೆಚ್ಚು ಹಣವನ್ನು 11 ವ್ಯಾಪಾರಸ್ಥರು ಕಟ್ಟಬೇಕಿದೆ. 7 ಮಂದಿ 40 ಸಾವಿರಕ್ಕೂ ಹೆಚ್ಚು ಬಾಕಿ ಪಾವತಿ ಮಾಡಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇನ್ನೂ ಕೆಲವು ವರ್ತಕರು ಮಳಿಗೆಯನ್ನು ಸರ್ಕಾರದಿಂದ ಬಾಡಿಗೆಗೆ ಪಡೆದು ಬೇರೊಬ್ಬರಿಗೆ ಬಾಡಿಗೆಗೆ ನೀಡಿರುವ ಅಂಶವೂ ಬೆಳಕಿಗೆ ಬಂದಿತು. ಬಾಡಿಗೆ ಕಟ್ಟದಿರುವುದು ಒಂದು ತಪ್ಪಾದರೆ ಇನ್ನೊಬ್ಬರಿಗೆ ಅದನ್ನು ಬಾಡಿಗೆ ನೀಡುವುದು ಇನ್ನೂ ತಪ್ಪು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.